ಕಾವೇರಿ ನದಿ ನೀರಿಲ್ಲದೆ ಬತ್ತಿ ಹೋಗುತ್ತಿದ್ದು, ಜಲಾಶಯಗಳು ಖಾಲಿಯಾಗಿವೆ. ಇದರಿಂದಾಗಿ, ಕಾವೇರಿ ಕೊಳ್ಳದ ರೈತರು ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಸುಳಿಯಲ್ಲಿ ಬಳಲುತ್ತಿದ್ದಾರೆ. ರಾಜಕೀಯ ಹೋರಾಟಗಳ ನಡುವೆ ಅನ್ನದಾತನ ಬದುಕು ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ.

ಕಾವೇರಿ ಎಂಬುದು ಕೇವಲ ನದಿಯಲ್ಲ, ದಕ್ಷಿಣ ಭಾರತದ ಕೋಟ್ಯಂತರ ಜೀವಗಳ ಹಸಿವು ನೀಗಿಸುವ ಜಲದೇವತೆ, ಅನ್ನದಾತನ ಪಾಲಿನ ಸಾಕ್ಷಾತ್ ಜೀವಗಂಗೆ. ಆದರೆ ಇಂದು ಅದೇ ಜೀವಗಂಗೆಯ ಒಡಲು ಬತ್ತಿಹೋಗುತ್ತಿದೆ. ಮಳೆರಾಯ ಕೈಕೊಟ್ಟಿದ್ದಾನೆ, ಜಲಾಶಯಗಳು ಖಾಲಿಯಾಗುತ್ತಿವೆ. ಇತ್ತ ನದಿಯ ನೀರಿಗಾಗಿ ರಾಜ್ಯಗಳ ನಡುವೆ ಹಗ್ಗಜಗ್ಗಾಟ ತೀವ್ರಗೊಳ್ಳುತ್ತಿದ್ದರೆ, ಅತ್ತ ನದಿಯನ್ನೇ ನಂಬಿ ಬದುಕುತ್ತಿರುವ ಕಾವೇರಿ ಕೊಳ್ಳದ ರೈತನ ಕಣ್ಣುಗಳಲ್ಲಿ ಕಣ್ಣೀರು ಒಣಗದಂತಾಗಿದೆ. ಪ್ರತಿ ವರ್ಷ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ನೀರಿಲ್ಲದೆ ಬಿರುಕು ಬಿಡುತ್ತಿವೆ. ಕಾವೇರಿಯ ಉಭಯ ದಂಡೆಗಳಲ್ಲೂ ಇಂದು ಕೇಳಿಸುತ್ತಿರುವುದು ಕೇವಲ ಅನ್ನದಾತನ ಆಕ್ರಂದನ ಮತ್ತು ಅಸಹಾಯಕತೆ ಮಾತ್ರ.

ಅನಿಶ್ಚಿತತೆಯಲ್ಲಿ ಅನ್ನದಾತ!

ರೈತನ ಬದುಕು ಸದಾ ಅನಿಶ್ಚಿತತೆಯ ಮೇಲೆ ನಿಂತಿರುತ್ತದೆ. ಈ ವರ್ಷವೂ ಮುಂಗಾರು ಮಳೆ ಕೈಕೊಟ್ಟರೂ, 'ಜೀವಗಂಗೆ' ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆಯಿಂದ ರೈತ ಸಾಲಸೋಲ ಮಾಡಿ ಗದ್ದೆಗೆ ಇಳಿದಿದ್ದ. ಹಗಲಿರುಳು ಕಷ್ಟಪಟ್ಟು ಭೂಮಿ ಹದಮಾಡಿ, ಭತ್ತದ ಸಸಿಗಳನ್ನು ನೆಟ್ಟು ಹಸಿರು ಕನಸು ಕಂಡಿದ್ದ. ಆದರೆ ಕಾವೇರಿ ಕೊಳ್ಳದಲ್ಲಿ ಒಂದು ಎಕರೆ ಭತ್ತದ ಕೃಷಿ ಮಾಡುವುದು ಇಂದು ಸಾಮಾನ್ಯ ಮಾತಲ್ಲ.

ದೊಡ್ಡ ವೆಚ್ಚದ ಹೊರೆ!

ಆರಂಭಿಕ ಹಂತದಲ್ಲೇ ರೈತನಿಗೆ ದೊಡ್ಡ ವೆಚ್ಚದ ಹೊರೆ ಬೀಳುತ್ತದೆ. ಕೆಲ ವರದಿಗಳ ಅಂಕಿ-ಅಂಶಗಳ ಪ್ರಕಾರ, ಎರಡೂವರೆ ಎಕರೆ ಜಮೀನಿನ ನಾಟಿಗೆ ರೈತರು ಈಗಾಗಲೇ ₹8,000 ಹಣವನ್ನು ಖರ್ಚು ಮಾಡಿದ್ದಾರೆ. ಇದನ್ನು ಸರಾಸರಿ ಲೆಕ್ಕ ಹಾಕಿದರೆ, ಪ್ರತಿ 1 ಎಕರೆ ಜಮೀನಿಗೆ ಕೇವಲ ಆರಂಭಿಕ ನರ್ಸರಿ ಸಿದ್ಧತೆ ಮತ್ತು ಸಸಿ ನಾಟಿಗೇ ಕನಿಷ್ಠ ₹3,200 ವೆಚ್ಚವಾಗುತ್ತದೆ. ಬಡ ರೈತನಿಗೆ ಆ ಮೂರು ಸಾವಿರ ರೂಪಾಯಿ ಕೇವಲ ಹಣವಲ್ಲ, ಅದು ಅವನ ರಕ್ತ, ಬೆವರು ಮತ್ತು ಇಡೀ ವರ್ಷದ ಬದುಕಿನ ಬಂಡವಾಳ.

ತೆಲೆಕೆಳಗಾದ ಪರಿಸ್ಥಿತಿ!

ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಲೆಕೆಳಗಾಗಿದೆ. ಜಲಾಶಯಗಳಿಂದ ಸರಿಯಾಗಿ ನೀರು ಬಿಡದ ಕಾರಣ, ನಾಟಿ ಮಾಡಿದ ಸಸಿಗಳು ಕಣ್ಣಮುಂದೆಯೇ ಒಣಗಿ ಕಪ್ಪಾಗುತ್ತಿವೆ. ಇನ್ನು ಕೇವಲ ಹತ್ತು ದಿನಗಳ ಒಳಗೆ ಗದ್ದೆಗಳಿಗೆ ನೀರು ಹರಿಯದಿದ್ದರೆ, ರೈತ ತಾನು ಕೇವಲ ಈ ಆರಂಭಿಕ ಬಂಡವಾಳವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ. ಮುಂದೆ ಉಳುಮೆ, ಗೊಬ್ಬರ, ಕಳೆ ಕೀಳುವಿಕೆ ಸೇರಿದಂತೆ ಒಂದು ಎಕರೆಗೆ ತಗುಲುವ ಒಟ್ಟು ₹15,000 ದಿಂದ ₹20,000 ವರೆಗಿನ ಕೃಷಿ ಹೂಡಿಕೆಯ ಕನಸೆಲ್ಲಾ ಕಮರಿ ಹೋಗುತ್ತದೆ.

ಬರಬೇಕಾದ ಆದಾಯವೂ ಮಣ್ಣುಪಾಲು!

ಬೆಳೆ ಕೈಗೆ ಬರದಿದ್ದರೆ ಮುಂದೆ ಬರಬೇಕಾದ ತಲಾ ಎಕರೆಗೆ ಸುಮಾರು ₹40,000 ದಷ್ಟು ನಿವ್ವಳ ಆದಾಯವೂ ಮಣ್ಣುಪಾಲಾಗಿ, ಇಡೀ ವರ್ಷದ ಬೆಳೆಯನ್ನೇ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ. ಕಾವೇರಿ ಕೊಳ್ಳದ ಹಳ್ಳಿಗಳಲ್ಲಿ ಇಂದು ಹೋದ ಕಡೆಯಲ್ಲೆಲ್ಲಾ ಇದೇ ಆತಂಕ ಮನೆಮಾಡಿದೆ. ಸಾಲದ ಸುಳಿಗೆ ಸಿಲುಕಿರುವ ಅನ್ನದಾತನಿಗೆ ಮುಂದೆ ಭವಿಷ್ಯವೇ ಕಾಣದಂತಾಗಿದೆ. ಖಾಸಗಿ ಲೇವಾದೇವಿದಾರರಿಂದ ಮತ್ತು ಸಹಕಾರ ಬ್ಯಾಂಕುಗಳಿಂದ ತಂದ ಸಾಲ ಹೇಗೆ ತೀರಿಸಲಿ? ಮುಂದಿನ ದಿನಗಳಲ್ಲಿ ಕುಟುಂಬವನ್ನು ಹೇಗೆ ಸಾಕಲಿ? ಎಂಬ ಪ್ರಶ್ನೆ ಪ್ರತಿ ರೈತನನ್ನೂ ಭೀತಿಯಿಂದ ಕಾಡುತ್ತಿದೆ.

ಕುಡಿಯುವ ನೀರಿನ ಅಭಾವ!

ಇತ್ತ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಕಾವೇರಿ ನೀರು ಕುಡಿಯುವ ಜನರಿಗೆ ಆಸರೆಯಾಗಬೇಕೋ ಅಥವಾ ಬೆಳೆ ಒಣಗುತ್ತಿರುವ ರೈತನಿಗೆ ಜೀವ ನೀಡಬೇಕೋ ಎಂಬ ಧರ್ಮಸಂಕಟ ಸೃಷ್ಟಿಯಾಗಿದೆ. ಕಾವೇರಿ ವಿವಾದದ ರಾಜಕೀಯ ಹೋರಾಟಗಳು, ಕೋರ್ಟು-ಕಚೇರಿಗಳ ಆದೇಶಗಳು ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಈ ಎಲ್ಲಾ ಹೋರಾಟಗಳ ನಡುವೆ ನಲುಗಿ ಹೋಗುತ್ತಿರುವುದು ಮಾತ್ರ ಕಾವೇರಿ ಮಡಿಲ ಅನ್ನದಾತ. ನೀರಿಗಾಗಿ ಕಾಯುತ್ತಾ ಒಣಗುತ್ತಿರುವ ಗದ್ದೆಯ ಬದಿಯಲ್ಲಿ ನಿಂತು ಆಕಾಶದ ಕಡೆಗೆ ಮುಖಮಾಡಿ ಕಣ್ಣೀರಿಡುತ್ತಿರುವ ರೈತನಿಗೆ ಸಾಂತ್ವನ ಹೇಳುವವರೇ ಇಲ್ಲದಂತಾಗಿದೆ. ಕಾವೇರಿ ಕೊಳ್ಳದ ಈ ಜಲಕ್ಷಾಮ ಕೇವಲ ಬೆಳೆಯ ನಾಶವಲ್ಲ, ಅದು ದೇಶಕ್ಕೆ ಅನ್ನ ನೀಡುವ ಜಗತ್ತಿನ ಅತ್ಯಂತ ದೊಡ್ಡ ಶ್ರಮಿಕನ ಬದುಕಿನ ನಾಶ.

ಅನ್ನದಾತನನ್ನು ನೋಡಿ!

ಚುನಾವಣೆ ಬಂದಾಗ ಕಾವೇರಿ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವ ನಮ್ಮ ನಾಯಕರು, ಸಂಕಷ್ಟದ ಸಮಯದಲ್ಲಿ ರೈತ ತಲೆಮೇಲೆ ಕೈಹೊತ್ತು ಕುಳಿತಾಗ ಎಲ್ಲಿ ಮಾಯವಾಗುತ್ತಾರೆ? ಎಸಿ ರೂಮಿನಲ್ಲಿ ಕುಳಿತು ಹೇಳಿಕೆ ನೀಡುವುದನ್ನು ಬಿಟ್ಟು, ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪಿಸುವ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ಇನ್ನಾದರೂ ರಾಜಕಾರಣಿಗಳು ಹಠಮಾರಿ ರಾಜಕೀಯ ಬಿಟ್ಟು, ಕಣ್ಮುಂದೆಯೇ ಒಣಗುತ್ತಿರುವ ಬೆಳೆಗಳನ್ನು ಮತ್ತು ಸಾಲದ ಸುಳಿಗೆ ಸಿಲುಕುತ್ತಿರುವ ಅನ್ನದಾತನನ್ನು ಉಳಿಸಬೇಕಿದೆ. ರೈತನಿಗೆ ನಿಮ್ಮ ಭರವಸೆಗಳಿಗಿಂತ ಗದ್ದೆಗೆ ಹರಿಯುವ ಜೀವಜಲ ಮುಖ್ಯ. ಇಲ್ಲದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತನೇ ಇಲ್ಲದಂತಾಗಿ ಕಾವೇರಿ ಮಡಿಲು ಕೇವಲ ಕಣ್ಣೀರಿನ ಕೊಳ್ಳವಾಗುವುದು ಫಿಕ್ಸ್.