ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಗೆ ಸಚಿವ ಸತೀಶ ಜಾರಕಿಹೊಳಿ ಗೋಕಾಕದಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ ಅಚ್ಚರಿ ಮೂಡಿಸಿದರು. ಹೆಲಿಪ್ಯಾಡ್‌ನಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಶಾಸಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಸಚಿವರು ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ಬೆಳಗಾವಿ (ಸೆ.17): ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯು ವಿಶೇಷ ಗಮನ ಸೆಳೆಯಿತು. ಸಭೆಯಲ್ಲಿ ಭಾಗವಹಿಸಲು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಗೋಕಾಕದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಆಗಮಿಸಿ ಅಚ್ಚರಿ ಮೂಡಿಸಿದರು.
ಗೋಕಾಕದಿಂದ ಹೊರಟ ಸಚಿವರ ಹೆಲಿಕಾಪ್ಟರ್ ಸುವರ್ಣ ವಿಧಾನಸೌಧದ ಹೆಲಿಪ್ಯಾಡ್ ಆವರಣದಲ್ಲಿ ಬಂದಿಳಿಯುತ್ತಿದ್ದಂತೆ, ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಸಚಿವರ ಸ್ವಾಗತಕ್ಕಾಗಿ ಧಾವಿಸಿ ಬಂದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ. ಸೇರಿದಂತೆ ಪ್ರಮುಖ ಅಧಿಕಾರಿಗಳು ಸಚಿವರಿಗೆ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಸಚಿವರೊಂದಿಗೆ ಆಗಮಿಸಿದ ಗಣ್ಯರು:
ಸಚಿವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಸಚಿವರ ಆಪ್ತ ಸಹಾಯಕ ಬಸವರಾಜ ಜತ್ತಿ ಅವರು ಸಹ ಆಗಮಿಸಿದ್ದರು.
ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ಸಚಿವರನ್ನು ಬರಮಾಡಿಕೊಳ್ಳಲು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್, ಶಾಸಕ ವಿಶ್ವಾಸ ವೈದ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಸಚಿವರು ನೇರವಾಗಿ ಕೆಡಿಪಿ ಸಭಾಮಂಡಪದತ್ತ ತೆರಳಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಚಿವರ ಹೆಲಿಕಾಪ್ಟರ್ ಆಗಮನ ಮತ್ತು ಅಧಿಕಾರಿಗಳ ಸಾತಿ ದೌಡು ಸ್ವಾಗತ ಸಭೆಯ ಹಜಾರದಲ್ಲಿಯೂ ಚರ್ಚೆಯ ವಿಷಯವಾಯಿತು.


