Ramanagara heart attack ರಾಮನಗರ ತಾಲೂಕಿನ ಮಂಚನಶೆಟ್ಟಹಳ್ಳಿ ಗ್ರಾಮದಲ್ಲಿ, ಶಿವಲಿಂಗಯ್ಯ ಎಂಬುವವರು ಊಟ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗಳು ಮತ್ತು ಅಳಿಯನ ಕಣ್ಣೆದುರೇ ನಡೆದ ಈ ದುರಂತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ರಾಮನಗರ (ಸೆ.6): ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮಗಳು ಹಾಗೂ ಅಳಿಯನ ಕಣ್ಣುಮುಂದೆಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚನಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗಯ್ಯ, ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ, ಘಟನೆ ಆಗಸ್ಟ್ 22 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕುಸಿದುಬಿಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಊಟ ಮಾಡುವಾಗ ಶಿವಲಿಂಗಯ್ಯನಿಗೆ ಪದೇಪದೆ ಎದೆ ನೋವು ಕಾಣಿಸಿಕೊಂಡಿದೆ. ಎದೆಯಲ್ಲಿ ನೋವು ಆಗ್ತಿರೋದ್ರಿಂದ ಮತ್ತೆ ಎದೆ ಮುಟ್ಟಿಕೊಳ್ಳುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಇತ್ತ ಪಕ್ಕದಲ್ಲಿ ಮಗಳು ಮತ್ತು ಅಳಿಯ ಊಟಕ್ಕೆ ಕುಳಿತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಇದು ಸಾಮಾನ್ಯ ನೋವು ಎಂದೆನಿಸಿತೋ ಏನೋ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಊಟ ನಿಲ್ಲಿಸಿ ನೀರು ಕುಡಿದಿದ್ದಾರೆ, ನೀರು ಕುಡಿದ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದಿದ್ದಾರೆ. ಇತ್ತ ಕುಸಿದು ಬಿದ್ದಿದ್ದು ತಕ್ಷಣ ಮಗಳು ಅಳಿಯನ ಗಮನಕ್ಕೆ ಬಂದಿಲ್ಲ. ಬಳಿಕ ಅಪ್ಪ ಕುಸಿದುಬಿದ್ದಿದ್ದು ಕಂಡು ಮಗಳು ಓಡಿಬಂದು ಸೋಫಾ ಮೇಲೆ ಕುಡಿಸಿ ಸಿಪಿಆರ್ ಮಾಡಿದ್ದಾಳೆ. ಆದರೂ ಸ್ಪಂದಿಸದೇ ಸ್ಥಳದಲ್ಲೇ ತಂದೆ ಶಿವಲಿಂಗಯ್ಯ ಸಾವನ್ನಪ್ಪಿದ್ದಾರೆ.


