ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. 

ಚಿಕ್ಕಬಳ್ಳಾಪುರ(ಸೆ.20):  ಹೆದ್ದಾರಿಯಲ್ಲಿ ವಾಹನಕ್ಕೆ ಸಿಲುಕಿ ಸಾವನ್ನಪ್ಪಿದ್ದ ನಾಯಿಯ ಮೃತ ದೇಹವನ್ನು ತೆಗೆಯಲು ಹೋಗಿ ಅಪಘಾತಕ್ಕೊಳಗಾಗಿ ಓರ್ವ ಯುವಕ ಸಾವಿಗೀಡಾಗಿ, ಮತ್ತೊರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹುನೇಗಲ್ ಗ್ರಾಮದ ಬಳಿ ನಡೆದಿದೆ. ದುರ್ಘಟನೆಯಲ್ಲಿ ಮೃತನನ್ನು ಸಾಮಸೇನಹಳ್ಳಿಯ ಪ್ರಭು (30) ಎಂದು ಗುರುತಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಮಸೇನಹಳ್ಳಿಯ ಪ್ರಭು ಮತ್ತು ಆತನ ಸ್ನೇಹಿತ ಚಿಕ್ಕಬಳ್ಳಾಪುರದತ್ತ ಬೈಕ್ ನಲ್ಲಿ ತೆರಳುವ ವೇಳೆ ಹುನೇಗಲ್ ಗ್ರಾಮದ ಬಳಿ ವಾಹನಕ್ಕೆ ಸಿಲುಕಿ ಸಾವನ್ನಪ್ಪಿದ್ದ ನಾಯಿಯ ಮೃತ ದೇಹ ಕಂಡಿದೆ. ನಾಯಿಯ ಮೃತ ದೇಹದಿಂದ ಬೇರೆ ಯಾರಾದರೂ ತೊಂದರೆಗೊಳಗಾಗಬಹುದು ಅಪಘಾತವಾಗಿ ಎಂದು ಮಾನವೀಯತೆಯಿಂದ ರಸ್ತೆಯ ಬದಿಗಿಡಲು ಬೈಕ್ ಅನ್ನು ನಿಲ್ಲಿಸಿ ಮೃತದೇಹವನ್ನು ಪಕ್ಕಕ್ಕೆ ಇಡಲು ಮುಂದಾದಾಗ ಹಿಂಬದಿಯಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕ ಪ್ರಭು ಮತ್ತು ಅವರ ಸ್ನೇಹಿತನನ್ನು ನೋಡಿ ಏಕಾಏಕಿ ಬ್ರೇಕ್ ಹಾಕಿದ್ದಾನೆ. 

ಅದೇ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದಿದೆ. ಇನ್ನೂ ಈ ರಭಸದಿಂದ ಸ್ಕಾರ್ಪಿಯೋ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ವಾಹನದ ಸವಾರರಿಗೆ ಡಿಕ್ಕಿ ಹೊಡೆದು ಅಪಾಯ ಉಂಟಾಗಿದೆ. ಡಿಕ್ಕಿಯ ತೀವ್ರತೆಗೆ ಪ್ರಭು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಗಾಯಗೊಂಡ ಯುವಕನನ್ನು ಕೂಡಲೇ ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.