ದೇವೇಗೌಡರ ಮೇಲೆ ಸೇಡು ತೀರಿಸಿಕೊಳ್ತಾರಾ ರಾಜ್ಯಪಾಲರು?

Karnataka Government formation All eyes now on Karnataka governor Vajubhai Vala
Highlights

ಕರ್ನಾಟಕದ ಈಗಿನ ರಾಜ್ಯಪಾಲರಾದ ವಾಜುಬಾಯಿ ವಾಲಾ ಅವರು ಅಂದು ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದರು. ವಿಧಾನಸಭೆಯಲ್ಲಿ ನಡೆದ ಗದ್ದಲದಿಂದ ಕಾಂಗ್ರೆಸ್ ಬೆಂಬಲಿತ ರಾಜ್ಯಪಾಲರು ಬಿಜೆಪಿ ಆಡಳಿತವನ್ನು ಮೊಟಕುಗೊಳಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಇದನ್ನು ಆಗಿನ ಪ್ರಧಾನಿಯಾಗಿದ್ದ ದೇವೇಗೌಡರು ಅನುಮೋದಿಸಿದ್ದರು. ಕಾಲ ಚಕ್ರ ಉರುಳಿದೆ. ಇಲ್ಲೀಗ ಅದೇ ವಾಲಾ ಅವರು ರಾಜ್ಯಪಾಲರಾಗಿದ್ದಾರೆ. ದೇವೇಗೌಡರ ವಿರುದ್ಧ ಸೇಡು ತೀರಿಸಿಕೊಳ್ತಾರಾ?

ಬೆಂಗಳೂರು: ಕೇವಲ ಎಂಟು ಸ್ಥಾನಗಳ ಕೊರತೆಯಿಂದ  ರಾಜ್ಯದಲ್ಲಿ ಸರ್ಕಾರ ರಚಿಸಲು ಪರದಾಡುತ್ತಿರುವ ಬಿಜೆಪಿ, ರಾಜ್ಯಪಾಲ ವಜೂಬಾಯಿ ವಾಲಾ ಅವರು ಕೈಗೊಳ್ಳುವ ನಿರ್ಧಾರದ ಬಗ್ಗೆ ಆಸೆಗಣ್ಣಿನಿಂದ ನೋಡುತ್ತಿದೆ.  ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರಕಾರ ರಚಿಸಲು ಅವಕಾಶ ಕೋರಿ, ಹಕ್ಕು ಮಂಡಿಸಿವೆ. ಈ ಎಲ್ಲ ರಾಜಕೀಯ ಬೆಳವಣಿಗೆಗಳ ಕ್ಲೈಮ್ಯಾಕ್ಸ್ ಏನಾಗುತ್ತದೋ ಗೊತ್ತಿಲ್ಲ. ಸದ್ಯಕ್ಕೆ ಕಿಂಗ್ ಮೇಕರ್ ಗೌರ್ನರ್!

ಯಾರಿಗೆ ಸಿಗಬಹುದು ಸರಕಾರ ರಚಿಸುವ ಅವಕಾಶ?

ರಾಜ್ಯಪಾಲರು ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಸರಕಾರವನ್ನು ಯಾರು ರಚಿಸುತ್ತಾರೆಂಬುವುದು ನಿರ್ಣಯವಾಗುತ್ತದೆ. ಚುನಾವಣೋತ್ತರ ಮೈತ್ರಿಕೂಟ ಮತ್ತು ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷದ ನಡುವೆ ರಾಜ್ಯಪಾಲರ ಆಯ್ಕೆ ಯಾರೆಂಬುವುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.

ಗೌಡರ ಮೇಲೆ ಸೇಡು ತೀರಿಸಿಕೊಳ್ತಾರಾ ವಾಲಾ..?

ಸರಿಯಾಗಿ 22 ವರ್ಷಗಳ ಹಿಂದೆ ವಾಲಾ ಅವರು ಗುಜರಾತ್​ ಬಿಜೆಪಿ ಅಧ್ಯಕ್ಷರಾಗಿದ್ದರು. ಅಲ್ಲಿನ ಬಿಜೆಪಿ ಸರಕಾರದಿಂದ ಬಂಡಾಯವೆದ್ದ ಕೆಲವು ಮುಖಂಡರು ಕಾಂಗ್ರೆಸ್​ ಜೊತೆ ಸೇರಿ ಸರಕಾರ ಬೀಳಿಸಲು ಯತ್ನಿಸಿದ್ದರು. ಆದರೆ, ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಕ್ಷ ಗೆದ್ದಿತ್ತು. ಇದನ್ನು ವಿರೋಧಿಸಿ ಬಿಜೆಪಿ ಬಂಡಾಯ ಹಾಗೂ ಕಾಂಗ್ರೆಸ್​ ಮುಖಂಡರು ವಿಧಾನಸಭೆಯಲ್ಲೇ ದಾಂಧಲೆ ನಡೆಸಿದ್ದರು. ಆಗ ಕಾಂಗ್ರೆಸ್ ಮೂಲದ ಅಲ್ಲಿನ ರಾಜ್ಯಪಾಲರು ಬಹುಮತ ಸಾಬೀತು ಪ್ರಕ್ರಿಯೆ ಅಸಾಂವಿಧಾನಿಕವೆಂದು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು.

ಈ ಶಿಫಾರಸು ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಗುಜರಾತ್‌ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆದೇಶಿಸಿದ್ದರು. ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ, ದೇವೇಗೌಡರು ಸರಕಾರವನ್ನು ಕಿತ್ತೆಸೆದಿದ್ದರು. 

ಆಗ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದ ವಾಲಾ ಅವರು ಈಗ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ಗೌಡರ ಮೇಲಿನ ಹಳೆಯ ಸೇಡು ಮತ್ತು ಅಂದು ಕಾಂಗ್ರೆಸ್​ ನಡೆಸಿದ ಕುತಂತ್ರಕ್ಕೆ ತಕ್ಕ ಪಾಠ ಕಲಿಸುವ ಅವಕಾಶ ವಾಲಾ ಅವರಿಗೆ ದಕ್ಕಿದೆ. ಏನು ಮಾಡಬಹುದೆಂಬುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಶಿಸ್ತಿನ ಸಿಪಾಯಿಯತ್ತ ಬಿಜೆಪಿ ಚಿತ್ತ

ಆರ್​ಎಸ್​ಎಸ್​ನಿಂದ ಬೆಳೆದು ಬಂದು ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಕಂಡುಕೊಂಡ ವಾಲಾ ಅವರು ಪಕ್ಷ ನಿಷ್ಠೆಗೆ ಹೆಸರಾದವರು. ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ, ಇದೇ ವಾಲಾ ಅವರು ತಮ್ಮ ಕ್ಷೇತ್ರವನ್ನು ಮೋದಿಗೆ ಬಿಟ್ಟುಕೊಟ್ಟಿದ್ದರು. ಮೋದಿ ಸಿಎಂ ಆಗಿದ್ದಾಗಲೂ ವಾಲಾ ಅವರು ಅತ್ಯಂತ ನಂಬಿಕಸ್ಥ ಸಚಿವರಾಗಿದ್ದರು. ಮೋದಿ ಪ್ರಧಾನಿಯಾದ ನಂತರ ವಾಲಾ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಿಸಿದ್ದರು. ಈಗ ಇದೇ ಪಕ್ಷ ನಿಷ್ಠೆಯ ನಾಯಕನತ್ತ ಬಿಜೆಪಿ ಆಸೆಗಣ್ಣಿನಿಂದ ನೋಡುತ್ತಿದೆ.

ಗೌರ್ನರ್ ಏನು ಮಾಡಬಹುದು?

104 ಸ್ಥಾನಗಳಿಸಿರುವ ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದರೂ, ಬಹುಮತ ಸಾಬೀತುಪಡಿಸುವಲ್ಲಿ ಪಕ್ಷಕ್ಕೆ ಯಶ ಸಿಗೋದು ಡೌಟು. ಕಾಂಗ್ರೆಸ್​-ಜೆಡಿಎಸ್​ ಶಾಸಕರು ಪರೇಡ್ ನಡೆಸಿ ಹಕ್ಕು ಮಂಡಿಸುತ್ತಿರೋದನ್ನ ನೋಡಿ ಈಗ ರಾಜ್ಯಪಾಲರು ಅಕ್ಷರಶಃ ಧರ್ಮಸಂಕಟದಲ್ಲಿದ್ದಂತಿದೆ. ಹಾಗಾಗಿ ವಾಲಾ ಅವರು ಕೈಗೊಳ್ಳುವ ನಿರ್ಧಾರದ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅನುಮಾನದಿಂದ ನೋಡುತ್ತಿದ್ದರೆ, ಬಿಜೆಪಿ ಆಸೆಗಣ್ಣಿನಿಂದ ನೋಡುತ್ತಿದೆ.

- ಶಶಿಶೇಖರ್, ಸುವರ್ಣ ನ್ಯೂಸ್ 

loader