ಮಂಡ್ಯ (ಏ.30): ಚುನಾವಣೆ ಪ್ರಚಾರಕ್ಕೆ ಕೇವಲ ಹತ್ತು ದಿನ ಮಾತ್ರ ಬಾಕಿ ಇದೆ. ಆದರೆ ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಇನ್ನೂ ಪ್ರಚಾರಕ್ಕೆ ಬಂದಿಲ್ಲ. 

ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಆರು ಕ್ಷೇತ್ರದಲ್ಲಿ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ  ಎಸ್ ಎಂ ಕೃಷ್ಣ ಕೇಳಿದ್ದರು. ಆದರೆ ಹೈಕಮಾಂಡ್ ಇವರ ಮಾತಿಗೆ ಮಣೆ ಹಾಕದೇ ಇರುವುದು ಮುನಿಸಿಗೆ ಕಾರಣವಾಗಿದೆ. 

ಇಂದು ಮಂಡ್ಯದಲ್ಲಿ ಯಡಿಯೂರಪ್ಪ ಪ್ರಚಾರಕ್ಕೆ  ಬೆಂಬಲಿಗರ ಆಹ್ವಾನವನ್ನು ಎಸ್ ಎಂ ಕೃಷ್ಣ ತಿರಸ್ಕರಿಸಿದ್ದಾರೆ.  ತವರು ಜಿಲ್ಲೆ ಮಂಡ್ಯದಲ್ಲೂ ಪ್ರಚಾರಕ್ಕೆ ಬರಲು ಕೃಷ್ಣ ನಕಾರ ವ್ಯಕ್ತಪಡಿಸಿದ್ದಾರೆ. 

ಇತ್ತ ಕಾಂಗ್ರೆಸ್ ನ ಅಂಬರೀಷ್ ಸಹ ಪ್ರಚಾರಕ್ಕೆ ಬರದಿರಲು ನಿರ್ಧರಿಸಿದ್ದಾರೆ.  ಈ ಬಾರಿ ಮಂಡ್ಯ ಜಿಲ್ಲೆಯ ಇಬ್ಬರು ದಿಗ್ಗಜರು ಪ್ರಚಾರದಿಂದ ದೂರ ಉಳಿದಿದ್ದಾರೆ.