ದೃಷ್ಟಿ ಸವಾಲು ಎದುರಿಸುತ್ತಿರುವ ಐಶ್ವರ್ಯ ಎಂಬ ಮಹಿಳೆ, ಶ್ರವಣದೋಷವಿರುವ ಕ್ಯಾಬ್ ಚಾಲಕನೊಂದಿಗೆ ಪ್ರಯಾಣಿಸುತ್ತಾರೆ. ಸಂವಹನದ ಸವಾಲುಗಳ ನಡುವೆಯೂ, ಸನ್ನೆ ಮತ್ತು ಮೆಸೇಜ್ ಮೂಲಕ ಪ್ರಯಾಣ ಯಶಸ್ವಿಯಾಗುತ್ತದೆ. ಕೊನೆಯಲ್ಲಿ, ಚಾಲಕನು ಆಕೆಯನ್ನು ಸುರಕ್ಷಿತವಾಗಿ ಕಟ್ಟಡದೊಳಗೆ ತಲುಪಿಸಲು ಸಹಾಯ ಮಾಡಿದನು.

ದೈನಂದಿನ ಜಂಜಾಟಗಳ ನಡುವೆ ಆಗಾಗ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ನಮ್ಮ ಹೃದಯವನ್ನು ಸ್ಪರ್ಶಿಸುತ್ತವೆ. ಮನುಷ್ಯತ್ವ ಮತ್ತು ಪರಾನುಭೂತಿಗೆ ಯಾವುದೇ ಭಾಷೆ ಅಥವಾ ಶಬ್ದಗಳ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸುವ ಇಂತಹದ್ದೇ ಒಂದು ಅದ್ಭುತ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ದೃಷ್ಟಿ ಸವಾಲು ಎದುರಿಸುತ್ತಿರುವ ಮಹಿಳೆ ಮತ್ತು ಶ್ರವಣದೋಷವಿರುವ ಕ್ಯಾಬ್ ಚಾಲಕನ ನಡುವಿನ ಈ ಪ್ರಯಾಣದ ಕಥೆ ನೆಟ್ಟಿಗರ ಕಣ್ಣಂಚು ಒದ್ದೆಯಾಗಿಸುತ್ತಿದೆ.

Add Asianetnews Kannada as a Preferred SourcegooglePreferred

ಹೈದರಾಬಾದ್‌ನ 'ಗ್ರೇಲ್‌ಮೇಕರ್ ಇನ್ನೋವೇಶನ್ಸ್' ಸಂಸ್ಥೆಯ ಸಹ-ಸಂಸ್ಥಾಪಕಿ ಐಶ್ವರ್ಯ ಟಿ.ವಿ. ಪಿಳ್ಳೆ ಅವರು ಲಿಂಕ್ಡ್‌ಇನ್‌ನಲ್ಲಿ (LinkedIn) ಹಂಚಿಕೊಂಡಿರುವ ಈ ಘಟನೆ ಎಲ್ಲರ ಗಮನ ಸೆಳೆದಿದೆ.

ಕ್ಯಾನ್ಸಲ್ ಮಾಡಬೇಕೆಂಬ ಗೊಂದಲ:

ದೃಷ್ಟಿ ಸವಾಲು ಎದುರಿಸುತ್ತಿರುವ ಐಶ್ವರ್ಯ ಅವರು ತಮ್ಮ ದಿನನಿತ್ಯದ ಓಡಾಟಕ್ಕಾಗಿ ಊಬರ್ (Uber) ಕ್ಯಾಬ್ ಬುಕ್ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಕ್ಯಾಬ್ ಬಂತು. ಆದರೆ ಆ ಕ್ಯಾಬ್ ಅನ್ನು ಓಡಿಸುತ್ತಿದ್ದ ಚಾಲಕನಿಗೆ ಕಿವಿ ಕೇಳಿಸುತ್ತಿರಲಿಲ್ಲ (ಶ್ರವಣದೋಷವಿತ್ತು) ಎಂಬ ವಿಚಾರ ಐಶ್ವರ್ಯ ಅವರಿಗೆ ತಿಳಿಯಿತು. ಈ ವಿಷಯ ತಿಳಿದ ಕೂಡಲೇ ಅವರಿಗೆ ಒಂದು ಕ್ಷಣ ಗೊಂದಲವಾಯಿತು. ಈ ಬಗ್ಗೆ ಬರೆದುಕೊಂಡಿರುವ ಐಶ್ವರ್ಯ, 'ಒಂದು ಕ್ಷಣ ನಾನು ರೈಡ್ ಕ್ಯಾನ್ಸಲ್ ಮಾಡೋಣ ಅಂತ ಯೋಚಿಸಿದೆ. ಆದರೆ ಅದು ಚಾಲಕನ ಸಾಮರ್ಥ್ಯದ ಮೇಲಿನ ಅನುಮಾನದಿಂದಲ್ಲ. ನನಗೆ ಕಣ್ಣು ಕಾಣಿಸುವುದಿಲ್ಲ, ಅವರಿಗೆ ಕಿವಿ ಕೇಳಿಸುವುದಿಲ್ಲ. ಹೀಗಿರುವಾಗ ನಮ್ಮಿಬ್ಬರ ನಡುವೆ ಸಂವಹನ ಹೇಗೆ ಸಾಧ್ಯ? ಎಂಬ ಆತಂಕದಿಂದಷ್ಟೇ. ಆದರೆ, ಆ ಸವಾಲನ್ನು ಸ್ವೀಕರಿಸಿ ಪ್ರಯಾಣ ಮುಂದುವರಿಸಲು ನಿರ್ಧರಿಸಿದೆ' ಎಂದಿದ್ದಾರೆ.

ಬೆರಳುಗಳು ಮತ್ತು ಮೆಸೇಜ್ ಮೂಲಕವೇ ಸಂವಹನ:

ಕ್ಯಾಬ್ ಹತ್ತಿದ ನಂತರ ಪ್ರಯಾಣದ ಆರಂಭಕ್ಕೆ OTP ಹೇಳಬೇಕಿತ್ತು. ಐಶ್ವರ್ಯ ಅವರು ಮಾತನಾಡಿದರೆ ಚಾಲಕನಿಗೆ ಕೇಳಿಸುತ್ತಿರಲಿಲ್ಲ. ಹೀಗಾಗಿ ಅವರು ತಮ್ಮ ಬೆರಳುಗಳ ಮೂಲಕ ಸನ್ನೆ ಮಾಡಿ OTP ಸಂಖ್ಯೆಯನ್ನು ವಿವರಿಸಿದರು. ಚಾಲಕ ಕೂಡ ಯಾವುದೇ ಗೊಂದಲವಿಲ್ಲದೆ ಅದನ್ನು ಅರ್ಥಮಾಡಿಕೊಂಡು ಪ್ರಯಾಣ ಶುರು ಮಾಡಿದರು. ಐಶ್ವರ್ಯ ಇಳಿಯಬೇಕಾದ ಸ್ಥಳ ಸಮೀಪಿಸುತ್ತಿದ್ದಂತೆ, ಅವರು ಆ್ಯಪ್‌ನಲ್ಲಿನ ಮೆಸೇಜ್ ಆಯ್ಕೆಯನ್ನು ಬಳಸಿ 'ನಿಖರವಾಗಿ ಗೇಟ್‌ನ ಮುಂದೆಯೇ ವಾಹನ ನಿಲ್ಲಿಸಿ' ಎಂದು ಸಂದೇಶ ಕಳುಹಿಸಿದರು. ಚಾಲಕ ಅದನ್ನು ಓದಿ, ಅಚ್ಚುಕಟ್ಟಾಗಿ ಐಶ್ವರ್ಯ ಹೇಳಿದ ಜಾಗದಲ್ಲೇ ಕ್ಯಾಬ್ ನಿಲ್ಲಿಸಿದರು.

ಮನುಷ್ಯತ್ವ ಮೆರೆದ ಚಾಲಕನಿಗೆ ಸಲಾಂ:

ಅಸಲಿ ಅಚ್ಚರಿ ಕಾದಿದ್ದು ಪ್ರಯಾಣ ಮುಗಿದ ಮೇಲೆಯೇ. ನಿಖರವಾದ ಜಾಗದಲ್ಲಿ ಕ್ಯಾಬ್ ನಿಲ್ಲಿಸಿದ ಚಾಲಕ, ಕೇವಲ ತನ್ನ ಡ್ಯೂಟಿ ಮುಗಿಯಿತು ಎಂದು ಸುಮ್ಮನೆ ಕೂರಲಿಲ್ಲ. ತನ್ನ ಕಾರಿನಲ್ಲಿ ಬಂದಿರುವ ಮಹಿಳೆಗೆ ದೃಷ್ಟಿ ದೋಷವಿದೆ ಎಂಬುದನ್ನು ಅರಿತಿದ್ದ ಆತ, ತಾನೇ ಕಾರಿನಿಂದ ಕೆಳಗಿಳಿದು ಹೋದ. ಅಲ್ಲಿಯೇ ಇದ್ದ ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ಕರೆತಂದು, ಐಶ್ವರ್ಯ ಅವರನ್ನು ಸುರಕ್ಷಿತವಾಗಿ ಕಟ್ಟಡದೊಳಗೆ ತಲುಪಿಸುವಂತೆ ನೋಡಿಕೊಂಡ.

ಚಾಲಕನ ಈ ಕಾಳಜಿ ಐಶ್ವರ್ಯ ಅವರ ಮನಸ್ಸನ್ನು ಆಳವಾಗಿ ಮುಟ್ಟಿತು. 'ನಾವು ಇಡೀ ಪ್ರಯಾಣದಲ್ಲಿ ಒಂದು ಮಾತನ್ನೂ ಆಡಲಿಲ್ಲ. ಆದರೆ ಎಲ್ಲವನ್ನೂ ಅರ್ಥಮಾಡಿಕೊಂಡೆವು. ಈ ಅದ್ಭುತ ಪ್ರಯಾಣಕ್ಕಾಗಿ ನಾವಿಬ್ಬರೂ 5 ಸ್ಟಾರ್ ರೇಟಿಂಗ್‌ಗೆ ಅರ್ಹರು' ಎಂದು ಐಶ್ವರ್ಯ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಪ್ರಸ್ತುತ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, 'ಶಾರೀರಿಕ ನ್ಯೂನತೆಗಳು ಮನುಷ್ಯತ್ವಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ' ಎಂದು ನೆಟ್ಟಿಗರು ಕಾಮೆಂಟ್ಗಳ ಮೂಲಕ ಈ ಇಬ್ಬರನ್ನೂ ಶ್ಲಾಘಿಸುತ್ತಿದ್ದಾರೆ.