ವಾರಣಾಸಿಯ ಎಸ್‌ಬಿಐ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ, ಅನಾರೋಗ್ಯಪೀಡಿತ ತಾಯಿಯ ಚಿಕಿತ್ಸೆಗಾಗಿ ಬ್ಯಾಂಕ್ ಸಾಲ ನಿರಾಕರಿಸಿದ್ದಲ್ಲದೇ ಅವರ ಸಂಬಳವನ್ನು ತಡೆ ಹಿಡಿದಿದೆ. ಇದರಿಂದಾಗಿ ಚಿಕಿತ್ಸೆ ಸಿಗದೆ ಅವರ ತಾಯಿ ಮೃತಪಟ್ಟಿದ್ದು, ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ಸರ್ಕಾರಿ ವಲಯದ ಬ್ಯಾಂಕುಗಳು ಉಳ್ಳವರಿಗೆ ಕರೆದು ಕರೆದು ಲೋನ್ ಕೊಡುತ್ತಾರೆ. ಲೋನ್ ತೆಗೆದುಕೊಂಡ ದೊಡ್ಡವರು ಲೋನ್ ಕಟ್ಟದೇ ದೇಶ ಬಿಟ್ಟು ಓಡಿ ಹೋಗುತ್ತಾರೆ. ಇದಕ್ಕೆ ದೇಶಬಿಟ್ಟು ವಿದೇಶಗಳಲ್ಲಿ ನೆಲೆಸಿ ಐಷಾರಾಮಿ ಜೀವನ ನಡೆಸುತ್ತಿರುವ ಹಲವು ಉದ್ಯಮಿಗಳು ಸಾಕ್ಷಿಯಾಗಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಲೋನ್ ಕೊಡುವುದಕ್ಕೆ ಎಲ್ಲಾ ಮಾನದಂಡಗಳನ್ನು ಪಾಲಿಸಿದರು ಲೋನ್ ನೀಡುವುದಕ್ಕೆ ಹಿಂದೆಟು ಹಾಕುತ್ತಾರೆ. ಒಂದು ವೇಳೆ ಲೋನ್ ನೀಡಿದರು. ಒಂದೇ ಒಂದು ತಿಂಗಳು ಸಾಲದ ಕಂತು ಕೆಲ ದಿನಗಳು ತಡವಾದರೆ ಬ್ಯಾಂಕ್ ಸಿಬ್ಬಂದಿ ಸಾಲ ಪಡೆದವನ ಮನೆ ಮುಂದೆ ನಿಲ್ಲುತ್ತಾರೆ ಅಥವಾ ನೊಟೀಸ್ ನೀಡುತ್ತಾರೆ. ಇಂತಹ ವರ್ತನೆ ತೋರುವ ಬ್ಯಾಂಕ್ ಸಿಬ್ಬಂದಿಯಿರುವಾಗ, ಲೋನ್ ಕಟ್ಟದೇ ದೇಶ ಬಿಟ್ಟಂತಹ ನೀರವ್ ಮೋದಿ, ವಿಜಯ್ ಮಲ್ಯ ಅವರು ಕೋಟಿ ಕೋಟಿ ಹಣ ಪಾವತಿ ಮಾಡದಿದ್ದರೂ ದೇಶ ಬಿಡಲು ಹೇಗೆ ಸಾಧ್ಯವಾಯ್ತು ಎಂಬುದು ವಿಪರ್ಯಾಸ ಸಂಗತಿ. ಇದೆಲ್ಲಾ ಪೀಠಿಕೆ ಏಕೆ ಅಂತೀರಾ ಇಲ್ಲೊಂದು ಕಡೆ ದೇಶದ ಪ್ರತಿಷ್ಠಿತ ಬ್ಯಾಂಕ್ ಎನಿಸಿರುವ ಎಸ್‌ಬಿಐ ಬ್ಯಾಂಕ್ ಸ್ವಂತ ಉದ್ಯೋಗಿಗೆ ಸಾಲ ಹಾಗೂ ಸಂಬಳ ಎರಡನ್ನೂ ನಿರಾಕರಿಸಿದೆ. ಈ ಮೂಲಕ ಆ ಉದ್ಯೋಗಿಯ ಅನಾರೋಗ್ಯ ಪೀಡಿತ ತಾಯಿಯ ಸಾವಿಗೆ ನೇರ ಕಾರಣವಾಗಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಎಸ್‌ಬಿಐ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ವಾರಣಾಸಿಯ ಎಸ್‌ಬಿಐ ಬ್ಯಾಂಕ್‌ನಲ್ಲಿ. ಇಲ್ಲಿ ಉದ್ಯೋಗಿಯಾಗಿದ್ದ, ಕುಮಾರ್ ಆಕಾಶ್ ಎಂಬುವವರು ತಮ್ಮ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಯ ಚಿಕಿತ್ಸೆಗಾಗಿ ವೈಯಕ್ತಿಕ ಸಾಲ ಪಡೆಯುವುದಕ್ಕೆ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್‌ನ ಆದೇಶದಂತೆ ಕುಮಾರ್ ಆಕಾಶ್ ಅವರು ಸಲ್ಲಿಸಿದ್ದ ವೈಯಕ್ತಿಕ ಸಾಲದ ಅರ್ಜಿಯನ್ನು ನೇರವಾಗಿ ತಿರಸ್ಕರಿಸಲಾಗಿತ್ತು. ತಮ್ಮ ತಾಯಿಯ ಅನಾರೋಗ್ಯ ಸ್ಥಿತಿಯನ್ನು ವಿವರಿಸಿ, ಸಾಲ ನೀಡುವಂತೆ ಕುಮಾರ್ ಆಕಾಶ್ ಅವರು ಸಂಜೀವಿನಿ ಪೋರ್ಟಲ್ ಮೂಲಕವೂ ಲಿಖಿತ ಅರ್ಜಿ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಜೊತೆಗೆ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳ ಅವರ ವೇತನವನ್ನೂ ಕೂಡ ತಡೆ ಹಿಡಿಯಲಾಯ್ತು. ಪರಿಣಾಮ ಚಿಕಿತ್ಸೆ ಸಿಗದೇ ಅವರ ತಾಯಿ ತೀರಿಕೊಂಡರು. ಇದು ದೇಶದ ಪ್ರತಿಷ್ಠಿತ ಬ್ಯಾಂಕ್‌ನ ಸ್ಥಿತಿ ಆಗಿದೆ. ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ. ಅನೇಕರು ಸ್ವಂತ ಉದ್ಯೋಗಿಗೆ ಹೀಗೆ ಮಾಡಿದ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಆತನಿಗೂ ಸಾಲದ ಅಗತ್ಯ ಬಂದಾಗ ಇದೇ ರೀತಿ ಅನ್ಯಾಯ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್ : ಪ್ರಕರಣದಲ್ಲಿ ಮಹಿಳೆಯೂ ಭಾಗಿ
ಅನೇಕರು ಇಂತಹ ರೀಜನಲ್ ಮ್ಯಾನೇಜರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ. ಆತನನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಹೇಳಿದ್ದಾರೆ. ಆದರೆ ಕೆಲವರು ಎಸ್‌ಬಿಐ ಬ್ಯಾಂಕ್ ತನ್ನ ಉದ್ಯೋಗಿಗಳಿಗೆ ಯಾವುದೇ ಮಿತಿ ಇಲ್ಲದ ಮೆಡಿಕಲ್ ಕವರೇಜ್ ಅನ್ನು ಹೊಂದಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. @nikimehta209 ಎಂಬುವವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ನನ್ನ ಬಳಿಯೂ ಒಂದು ಕಥೆ 2 ಇದೆ. ನನ್ನ ಸ್ನೇಹಿತೆಯೊಬ್ಬರು @TheOfficialSBI ನಲ್ಲಿ 2010 ರಿಂದ ಮುಂಬೈನಲ್ಲಿ ಉದ್ಯೋಗಿಯಾಗಿದ್ದು, 2014 ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2018 ರಲ್ಲಿ ಅವರು ನಿಧನರಾಗುವವರೆಗೂ ಅವರ ಆಸ್ಪತ್ರೆ ಚಿಕಿತ್ಸೆಯ ಎಲ್ಲಾ ಖರ್ಚು ವೆಚ್ಚವನ್ನು ಬ್ಯಾಂಕ್ ಬರಿಸಿತು. ಇದು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಿಜಕ್ಕೂ ದೊಡ್ಡ ಬೆಂಬಲವಾಗಿದೆ ಎಂದು ಅವರು ಕಾಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ವಂತ ಉದ್ಯೋಗಿಗೆ ಎಸ್‌ಬಿಐ ಬ್ಯಾಂಕ್ ಸಾಲ ನಿಕಾರಿಸಿದೆ ಎಂದು ಹೇಳುವ ಹಲವು ಪೋಸ್ಟ್‌ಗಳು ಸಾಕಷ್ಟು ವೈರಲ್ ಆಗ್ತಿವೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
ಇದನ್ನೂ ಓದಿ: 'ಲಯನ್ ಕಿಂಗ್' ನಟಿಯ ದುರಂತ ಅಂತ್ಯ: ಬಾಯ್‌ಫ್ರೆಂಡ್‌ನಿಂದಲೇ ಕೊಲೆ


