ಚಲಿಸುವ ಕಾರಿನಲ್ಲೇ ಡ್ರಾಪ್ ನೆಪದಲ್ಲಿ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿ ಸಿಇಒ ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಪೊಲೀಸರ ತನಿಖೆಯಿಂದ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ರಾಜಸ್ಥಾನದ ಉದಯ್‌ಪುರದಲ್ಲಿ ಚಲಿಸುವ ಕಾರಿನಲ್ಲೇ ಡ್ರಾಪ್ ನೆಪದಲ್ಲಿ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿ ಸಿಇಒ ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಪೊಲೀಸರ ತನಿಖೆಯಿಂದ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಆಘಾತಕಾರಿ ವಿಚಾರ ಎಂದರೆ ಹೀಗೆ ಗ್ಯಾಂಗ್ ರೇಪ್ ಮಾಡಿದ ವ್ಯಕ್ತಿ ಸಿಇಒ ಆಗಿರುವ ಜಿಕೆಎಂ ಕಂಪನಿಯೂ ಮಹಿಳಾ ಸ್ನೇಹಿ ಮಾನದಂಡದ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್ ಅನ್ನು ಹೊಂದಿತ್ತು ಎಂಬ ವಿಚಾರ ಬಂದಿದೆ. ಮಹಿಳಾ ಸ್ನೇಹಿ ರೇಟಿಂಗ್ ಎಂದರೆ ಕಂಪನಿಯಲ್ಲಿ ಮಹಿಳೆಯರಿಗೆ ಇರುವ ಸವಲತ್ತು ವಾತಾವರಣ, ಅವರನ್ನು ನಡೆಸಿಕೊಳ್ಳುವ ರೀತಿ ಇವೆಲ್ಲವನ್ನು ಅವಲಂಬಿಸಿದೆ. ಹೀಗಿರುವಾಗ ಇಷ್ಟೊಂದು ಉತ್ತಮ ಮಹಿಳಾ ರೇಟಿಂಗ್ ಹೊಂದಿರುವ ಜಿಕೆಎಂ ಐಟಿ ಕಂಪನಿಯ ಸಿಇಒನೇ ಈಗ ತನ್ನದೇ ಕಂಪನಿಯ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿಯ ಮತ್ತಿಬ್ಬರು ಉನ್ನತ ಮಟ್ಟದ ಉದ್ಯೋಗಿಗಳ ಜೊತೆ ಸೇರಿ ಗ್ಯಾಂಗ್‌ರೇಪ್ ಮಾಡಿರುವುದು ಆಘಾತ ಮೂಡಿಸಿದೆ.
ಈ ತಿಂಗಳ ಆರಂಭದಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ಉದಯ್‌ಪುರದ ಜಿಕೆಎಂ ಎಂಬ ಐಟಿ ಐಟಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಜಿತೇಶ್ ಸಿಸೋದಿಯಾ ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ ಹಾಗೂ ಆಕೆಯ ಗಂಡ ಗೌರವ್ ಮೂವರು ಸೇರಿ, ಕಂಪನಿಯ ಮಹಿಳಾ ಮ್ಯಾನೇಜರ್ ಮೇಲೆ ಗ್ಯಾಂಗ್‌ರೇಪ್ ಮಾಡಿದ್ದಾರೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಈ ತಿಂಗಳ ಡಿಸೆಂಬರ್ 20ರಂದು ಕಂಪನಿ ಸಿಇಒ ಜಿತೇಶ್ ಸಿಸೋದಿಯಾ ಹೊಟೇಲೊಂದರಲ್ಲಿ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಗೆ ಸಂತ್ರಸ್ತ ಯುವತಿಯೂ ಹೋಗಿದ್ದರು. ಅಲ್ಲಿ ಮದ್ಯಸೇವಿಸಿದ ನಂತರ ಅವರಿಗೆ ಮದ್ಯದ ಅಮಲೇರಿದೆ ಈ ವೇಳೆ ಅಲ್ಲಿದ್ದ ಕೆಲವರು ಆಕೆಗೆ ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮಹಿಳಾ ಎಕ್ಸಿಕ್ಯೂಟಿವ್ ಶಿಲ್ಪಾ ಸಿರೋಹಿ ತಾವೇ ಆಕೆಯನ್ನು ಪಾರ್ಟಿ ನಂತರ ಮನೆಗೆ ಬಿಡುವುದಾಗಿ ಹೇಳಿದ್ದಾರೆ. ನಂತರ ರಾತ್ರಿ 1. 45ಕ್ಕೆ ಪಾರ್ಟಿ ಮುಗಿದ ನಂತರ ಆಕೆಯನ್ನು ಕಂಪನಿಯ ಸಿಇಒ, ಎಕ್ಸಿಕ್ಯೂಟಿವ್ ಹೆಡ್ ಶಿಲ್ಪಾ ಸಿರೋಹಿ ಆಕೆಯ ಗಂಡ ಗೌರವ್ ಮೂವರು ಸೇರಿ ಕಾರಿನಲ್ಲಿ ಮನೆಗೆ ಬಿಡುವುದಕ್ಕೆ ಕರೆದೊಯ್ದಿದ್ದಾರೆ.
ದಾರಿಮಧ್ಯೆ ಆರೋಪಿಗಳು ಸಿಗರೇಟ್ ಹೋಲುವ ಯಾವುದೋ ಅಮಲು ಪದಾರ್ಥವನ್ನು ದಾರಿ ಮಧ್ಯೆ ಶಾಪೊಂದರಿಂದ ಖರೀದಿಸಿ ಆಕೆಗೆ ನೀಡಿದ್ದಾರೆ. ಅದನ್ನು ಸೇವಿಸಿದ್ದೇ ತಡ ಪ್ರಜ್ಞೆ ಕಳೆದುಕೊಂಡಿದ್ದಾಗಿ ಸಂತ್ರಸ್ತ ಮಹಿಳೆ ಹೇಳಿದ್ದಾಳೆ.
ಆಕೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪರಜ್ಞೆ ತಪ್ಪಿದ ಆಕೆಗೆ ಎಚ್ಚರವಾದಾಗ ಸಿಇಒ ಜಿತೇಶ್ ಸಿಸೋದಿಯಾ ತನ್ನ ಮೇಲೆ ಅತ್ಯಾಚಾರವೆಸಗುತ್ತಿರುವುದು ಆಕೆಯೆ ಗಮನಕ್ಕೆ ಬಂದಿದೆ. ನಂತರ ಮೂವರು ಕೂಡ ಆಕೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಆಕೆ ಆರೋಪಿಸಿದ್ದಾರೆ. ಹಲವು ಬಾರಿ ಮನೆಗೆ ಬಿಡುವಂತೆ ಆಕೆ ಆರೋಪಿಗಳ ಬಳಿ ಬೇಡಿದರು ಮುಂಜಾನೆ 5 ಗಂಟೆಯ ನಂತರವೇ ಆಕೆಯನ್ನು ಮನೆಗೆ ಬಿಟ್ಟಿದ್ದಾರೆ. ತನಗೆ ಸಂಪೂರ್ಣವಾಗಿ ಪ್ರಜ್ಞೆ ಬಂದಾಗ ನನ್ನ ಕಿವಿಯೊಲೆಗಳು, ಸಾಕ್ಸ್, ಒಳುಡುಪುಗಳು ಎಲ್ಲವೂ ನಾಪತ್ತೆಯಾಗಿದ್ದವು, ಜೊತೆಗೆ ತನ್ನ ಖಾಸಗಿ ಅಂಗದಲ್ಲಿ ಗಾಯಗಳಾಗಿದ್ದವು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ಲಯನ್ ಕಿಂಗ್' ನಟಿಯ ದುರಂತ ಅಂತ್ಯ: ಬಾಯ್‌ಫ್ರೆಂಡ್‌ನಿಂದಲೇ ಕೊಲೆ
ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಘಟನೆಯ ಆಡಿಯೋ ಹಾಗೂ ವೀಡಿಯೋ ರೆಕಾರ್ಡ್ ಆಗಿದೆ ಎಂದು ಪೊಲೀಸರು ಹೇಳಿದ್ದು, ಇದು ತನಿಖೆಯಲ್ಲಿ ಬಹಳ ಮಹತ್ವದ ಪಾತ್ರವಹಿಸಲಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿನ್ನೆ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಉದಯ್‌ಪುರ ಪೊಲೀಸ್ ಸೂಪರಿಟೆಂಡೆಂಟ್ ಯೋಗೇಶ್ ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ


