Asianet Suvarna News Asianet Suvarna News

ಲೋನ್‌ಗೆಂದು ಬಂದಳು ಬ್ಯಾಂಕ್ ಸಿಇಒನನ್ನೇ ದಿವಾಳಿ ಮಾಡಿದಳು: 108 ಇನ್ಸ್ಟಾಲ್‌ಮೆಂಟ್‌ 4 ಕೋಟಿಗೂ ಅಧಿಕ ವಸೂಲಿ

ಜನಸಾಮಾನ್ಯರು ಸಾಲ ಕೇಳಲು ಹೋದರೆ ದಾಖಲೆ ಸರಿ ಇದ್ದರೂ ಹಲವು ನೆಪ ಹೇಳಿ ಬ್ಯಾಂಕ್ ಸಿಬ್ಬಂದಿ ಜನರನ್ನು ಸಾಕಷ್ಟು ಅಲೆದಾಡಿಸುವುದನ್ನು ನೀವು ನೋಡಿದ್ದೀರಿ. ಆದರೆ ಇಲ್ಲೊಬ್ಬಳು ಮಹಿಳೆ  ಮನೆ ದಾಖಲೆಗಳು ಸರಿ ಇಲ್ಲ ಎಂದು ಸಾಲ ನೀಡಲು ನಿರಾಕರಿಸಿದ ಬ್ಯಾಂಕ್ ಸಿಇಒನನ್ನೇ  ದಿವಾಳಿಯಾಗುವಂತೆ ಮಾಡಿದ್ದಾಳೆ. ಏನಿದು ಸ್ಟೋರಿ ಓದಿ..

She came bank to get loan but bankrupted the CEO of the bank by extortion and Blackmail Police arrested Thane woman akb
Author
First Published Jun 21, 2024, 9:24 PM IST | Last Updated Jun 21, 2024, 9:24 PM IST

ಮುಂಬೈ: ಜನಸಾಮಾನ್ಯರು ಸಾಲ ಕೇಳಲು ಹೋದರೆ ದಾಖಲೆ ಸರಿ ಇದ್ದರೂ ಹಲವು ನೆಪ ಹೇಳಿ ಬ್ಯಾಂಕ್ ಸಿಬ್ಬಂದಿ ಜನರನ್ನು ಸಾಕಷ್ಟು ಅಲೆದಾಡಿಸುವುದನ್ನು ನೀವು ನೋಡಿದ್ದೀರಿ. ಆದರೆ ಇಲ್ಲೊಬ್ಬಳು ಬ್ಯಾಂಕ್‌ಗೆ ಹೋಗಿ ಲೋನ್‌ ಕೇಳಿದ್ದಾಳೆ. ಆದರೆ ಮನೆ ದಾಖಲೆಗಳು ಸರಿ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಲೋನ್ ನೀಡಲು ನಿರಾಕರಿಸಿದ್ದಾರೆ. ಆದರೆ ನಂತರ ದಾಖಲೆಗಳ ಪರಿಶೀಲನೆಗಾಗಿ ಮನೆಗೆ ಬಂದ ಬ್ಯಾಂಕ್ ಅಧಿಕಾರಿಯನ್ನೇ ಮೈಮಾಟ ತೋರಿಸಿ ಬಲೆಗೆ ಬೀಳುವಂತೆ ಮಾಡಿದ ಆಕೆ ಬ್ಯಾಂಕ್ ಅಧಿಕಾರಿಯೇ ಸಂಪೂರ್ಣ ದಿವಾಳಿಯಾಗುವಂತೆ ಮಾಡಿದ್ದಾಳೆ. ಆಕೆಯ ಬ್ಲಾಕ್‌ಮೇಲ್‌ಗೆ ಬೆದರಿದ ಬ್ಯಾಂಕ್ ಸಿಇಒ  ಮನೆ, ಫ್ಲಾಟ್‌ ಸೇರಿದಂತೆ ಎಲ್ಲವನ್ನು ಮಾರಿ ಪಿಎಫ್ ಹಣವನ್ನು ಕಳೆದುಕೊಂಡು, ಕೈ ತುಂಬಾ ಸಾಲವನ್ನು ಮಾಡಿದರೂ ಕೂಡ ಈ ಧನದಾಹಿ ಹೆಣ್ಣಿನ ಆಸೆ ತೀರದೇ ಹೋದಾಗ ನಿಧಾನವಾಗಿ ಪೊಲೀಸರ ಮೊರೆ ಹೋಗಿದ್ದಾರೆ. ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಥಾಣೆ ಮೂಲದ 45 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅಂದಹಾಗೆ ಈ ನಿವೃತ್ತ ಬ್ಯಾಂಕ್ ಸಿಇಒ ಈಕೆಯ ಜೊತೆ ಕಳೆದ ಕೆಲ ಕ್ಷಣಗಳಿಗಾಗಿ ಕಳೆದುಕೊಂಡಿದ್ದು ಬರೊಬ್ಬರಿ 4 ಕೋಟಿಗೂ ಅಧಿಕ..!

ಲೋನ್‌ಗೆಂದು ಬಂದಳು ಬ್ಯಾಂಕ್  ಸಿಇಒನನ್ನೇ ದಿವಾಳಿ ಮಾಡಿದಳು
ಅಂಗ್ಲ ಮಾಧ್ಯಮವೊಂದರ ವರದಿ ಪ್ರಕಾರ, 66 ವರ್ಷದ ನವೀ ಮುಂಬೈನ ನಿವಾಸಿ ಈ ರೀತಿ ಬ್ಯಾಕ್‌ಮೇಲ್‌ಗೆ ಒಳಗಾಗಿ ಎಲ್ಲವನ್ನು ಕಳೆದುಕೊಂಡವರು. ಕಾಪರೇಟಿವ್ ಬ್ಯಾಂಕೊಂದರ ಸಿಇಒ ಆಗಿದ್ದ ಇವರು 2016ರಲ್ಲಿ ಮೊದಲ ಬಾರಿ ಮಹಿಳೆಯನ್ನು ಭೇಟಿಯಾಗಿದ್ದಾರೆ. ತಮ್ಮ ಬ್ಯಾಂಕ್‌ನ ವಡಾಲಾ ಬ್ರಾಂಚ್‌ನಲ್ಲಿ ಪರಿಚಿತರೊಬ್ಬರ ಮೂಲಕ ಈಕೆಯೊಂದಿಗೆ ಬ್ಯಾಂಕ್ ಸಿಇಒ ಅವರ ಮೊದಲ ಭೇಟಿಯಾಗಿದೆ. ಬ್ಯಾಂಕ್‌ನ ನಿವೃತ್ತ ಸಿಇಒ ಹೇಳುವ ಪ್ರಕಾರ, ಪ್ರಾರಂಭದಲ್ಲಿ ಮಹಿಳೆ ತಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ತನಗೆ ಲೋನ್ ಬೇಕು ಎಂದು ಮನವಿ ಮಾಡಿದ್ದಾಳೆ. ಆದರೆ ಲೋನ್ ಪ್ರಕ್ರಿಯೆಯ ವೇಳೆ ಆಕೆ ನೀಡಿದ ಡಾಕ್ಯುಮೆಂಟುಗಳು ಸರಿ ಇಲ್ಲ ಎಂಬುದು ಬ್ಯಾಂಕ್ ಸಿಬ್ಬಂದಿ ಅರಿವಿಗೆ ಬಂದಿದ್ದು, ಅವರು ಆಕೆಯ ಮನೆಯನ್ನು ಸರ್ವೇ ಮಾಡಲು ಮುಂದಾಗಿದ್ದಾರೆ. ಅದರಂತೆ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮನೆಗೆ ಮನೆ ಸಮೀಕ್ಷೆಗಾಗಿ ಸಿಇಒ ಒಬ್ಬರೇ ಬಂದಿದ್ದಾರೆ. 

ಮೈಮಾಟ ತೋರಿಸಿ ಮಂಚಕ್ಕೆ ಕರೆದಳು

ಅದರಂತೆ 2017ರ ಫೆಬ್ರವರಿಯಲ್ಲಿ ಸಿಇಒ ಈಕೆಯ ಮನೆ ದಾಖಲೆ ಪರಿಶೀಲನೆಗೆ ಬಂದಿದ್ದು, ಈ ವೇಳೆ ಮಹಿಳೆ ಆತನನ್ನು ಮೈಮಾಟ ತೋರಿಸಿ ಮಂಚಕ್ಕೆ ಕರೆದಿದ್ದಾಳೆ. ಇದಾದ ನಂತರ ಆಕೆಗೆ ಪ್ರತಿ ತಿಂಗಳು 7300 ರೂ ಇಎಂಐ ಕಟ್ಟುವಂತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ.  ಆದರೆ ಇದಾಗಿ ಒಂದು ತಿಂಗಳ ನಂತರ ಮಹಿಳೆ ಬ್ಯಾಂಕ್ ಸಿಇಒನನ್ನು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ಅಲ್ಲದೇ ಆತ್ಮೀಯತೆಯ ವೇಳೆ ಬ್ಯಾಂಕ್ ಸಿಇಒ ಆಕೆಯ ಮೊಬೈಲ್ ಫೋನ್‌ಗೆ ಕಳುಹಿಸಿದ ಬೆತ್ತಲೆ ಫೋಟೋಗಳನ್ನು ಆತನ ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಸಿದ ಆಕೆ ತನಗೆ 8 ಕೋಟಿ ಹಣ ಪಾವತಿ ಮಾಡುವಂತೆ ಹೇಳಿದ್ದಾಳೆ. 

108 ಇನ್ಸ್ಟಾಲ್‌ಮೆಂಟ್‌ 4 ಕೋಟಿಗೂ ಅಧಿಕ ವಸೂಲಿ

ಇತ್ತ ಮರ್ಯಾದೆಗೆ ಅಂಜಿದ ಬ್ಯಾಂಕ್ ಸಿಇಒ ಮೊದಲಿಗೆ 5 ಲಕ್ಷ ರೂಪಾಯಿಯನ್ನು ನೀಡಿದ್ದಾನೆ. ಇದಾದ ನಂತರ ನಿರಂತರವಾಗಿ ಬ್ಲಾಕ್‌ಮೇಲ್‌ಗಳು ನಡೆಯುತ್ತಲೇ ಇದ್ದು, ಒಟ್ಟು 108 ಇನ್ಸ್ಟಾಲ್‌ಮೆಂಟ್‌ನಲ್ಲಿ ಆತ ಒಟ್ಟು 4 ಕೋಟಿ 39 ಲಕ್ಷ ರೂಪಾಯಿಗಳನ್ನು ಆಕೆಗೆ ನೀಡಿದ್ದಾನೆ. ಇಷ್ಟೊಂದು ಮೊತ್ತದ ಹಣ ಒಟ್ಟು ಸೇರಿಸುವುದಕ್ಕಾಗಿ ಆತ ತನ್ನ ಹೆಸರಿನಲ್ಲಿದ್ದ ಒಂದು ಫ್ಲಾಟ್‌ ಮಾರಿದ್ದಾನೆ. ತನ್ನ ಉಳಿತಾಯ ನಿಧಿ (provident fund) ಖಾತೆಯ ಹಣವನ್ನು ಡ್ರಾ ಮಾಡಿ ನೀಡಿದ್ದಾನೆ. ಇದರ ಜೊತೆಗೆ ಹಲವು ಬ್ಯಾಂಕ್‌ಗಳು ಹಾಗೂ ಬೇರೆ ಬೇರೆ ವ್ಯಕ್ತಿಗಳಿಂದ ಸಾಲ ಪಡೆದು ಆಕೆಗೆ ನೀಡಿದ್ದಾರೆ. 

ಇಷ್ಟಾದ ಮೇಲೂ ನಿಲ್ಲದ ಬ್ಲಾಕ್ಮೇಲ್
ಆದರೆ ಇಷ್ಟೊಂದು ಮೊತ್ತದ ಹಣ ಪಡೆದ ಮೇಲೂ ಮಹಿಳೆಯ ಬ್ಲಾಕ್‌ಮೇಲ್ ನಿಂತಿಲ್ಲ. ಪರಿಣಾಮ ವಿಧಿಯಿಲ್ಲದೇ ಕಡೆಯದಾಗಿ ನಿವೃತ್ತ ಬ್ಯಾಂಕ್ ಸಿಇಒ  ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇತ್ತೀಚೆಗೆ ಆಕೆ ಮತ್ತೆ 5 ಲಕ್ಷಕ್ಕೆ ಬೇಡಿಕೆ ಇಟ್ಟಾಗ  ಅವರು ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಈ ಬ್ಯಾಂಕ್ ಸಿಇಒನ್ನೇ ದಿವಾಳಿ ಮಾಡಿದ ಚಾಲಾಕಿ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆಗೆ ಒಂದು ಲಕ್ಷ ಸದ್ಯಕ್ಕೆ ನೀಡುವುದಾಗಿ ಬ್ಯಾಂಕ್ ಸಿಇಒ ಮೂಲಕವೇ ಆಕೆಯನ್ನು ಕರೆಸಿಕೊಂಡ ಪೊಲೀಸರು ಬಳಿಕ ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ. 

ಒಟ್ಟಿನಲ್ಲಿ ಮಹಿಳೆಯ ಜೊತೆ ಕೆಲ ಕ್ಷಣ ಮೈ ಮರೆತಿದ್ದಕ್ಕಾಗಿ ಬ್ಯಾಂಕ್ ಸಿಬ್ಬಂದಿ ದೊಡ್ಡ ಬೆಲೆಯನ್ನೇ  ತೆರಬೇಕಾಗಿ ಬಂದಿದೆ.

Latest Videos
Follow Us:
Download App:
  • android
  • ios