ಹಿಂದೂ ಸಂಘಟನೆಗಳ ನೈತಿಕ ಪೊಲೀಸ್‌ಗಿರಿಗೆ ಬೆದರಿ ಜೋಡಿಯೊಂದು ಪಿಜ್ಜಾ ಶಾಪೊಂದರ 2ನೇ ಮಹಡಿಯಿಂದ ಹಾರಿದ ಘಟನೆ ಉತ್ತರ ಪ್ರದೇಶದ ಶಹಜಾಹಾನ್‌ಪುರದ ಬರೇಲಿ ಸಮೀಪದ ಮೊರ್ಹ್ ಎಂಬಲ್ಲಿ ನಡೆದಿದೆ ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಹಜಾಹಾನ್‌ಪುರ: ಹಿಂದೂ ಸಂಘಟನೆಗಳ ನೈತಿಕ ಪೊಲೀಸ್‌ಗಿರಿಗೆ ಬೆದರಿ ಜೋಡಿಯೊಂದು ಪಿಜ್ಜಾ ಶಾಪೊಂದರ 2ನೇ ಮಹಡಿಯಿಂದ ಹಾರಿದ ಘಟನೆ ಉತ್ತರ ಪ್ರದೇಶದ ಶಹಜಾಹಾನ್‌ಪುರದ ಬರೇಲಿ ಸಮೀಪದ ಮೊರ್ಹ್ ಎಂಬಲ್ಲಿ ನಡೆದಿದೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, 2ನೇ ಮಹಡಿಯಿಂದ ಕೆಳಗೆ ಹಾರಿದ್ದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ, ಮೋರ್ಹ್‌ನಲ್ಲಿರುವ ಪ್ರಸಿದ್ಧ ಫಿಜ್ಜಾ ಕೆಫೆಗೆ ಅಗಮಿಸಿದ ಜೋಡಿ ಅಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದು, ಅದರ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸ್ಥಳೀಯ ಹಿಂದೂ ಸಂಘಟನೆಯೊಂದರ ಸದಸ್ಯರು ಅವರ ಬಳಿಗೆ ಬಂದಿದ್ದಾರೆ. ಅಲ್ಲದೇ ಅವರನ್ನು ಅಲ್ಲಿಗೆ ಅವರು ಬಂದಿರುವ ಬಗ್ಗೆ, ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆ ಜೋಡಿಯ ಜಾತಿಯನ್ನು ಅವರು ಕೇಳಿದಾಗ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದ್ದು, ತಾವಿಬ್ಬರೂ ಹಿಂದೂಗಳೇ ಎಂದು ಆ ಜೋಡಿಗಳು ಹೇಳಿದ ನಂತರವೂ ಆ ಗುಂಪು ಸುಮ್ಮನಿರಲಿಲ್ಲ.
ಇದನ್ನೂ ಓದಿ: ಗರ್ಭಪಾತದಿಂದ ಕೊನೆಯಾದ ಜೀವದ ಆತ್ಮಕ್ಕೂ ಮೋಕ್ಷಕ್ರಿಯೆ ಮಾಡ್ಬೇಕಾ?
ಬದಲಾಗಿ ಅಲ್ಲಿ ಆಹಾರಕ್ಕಾಗಿ ಕಾಯ್ತಾ ಕೂತಿದ್ದ ಜೋಡಿಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುವುದಕ್ಕೆ ಆರಂಭಿಸಿದರು. ಹೀಗಾಗಿ ಆ ಜೋಡಿ ತಮ್ಮನ್ನು ಹೀಗೆ ಸೆರೆ ಹಿಡಿಯುವುದರಿಂದ ಸಾರ್ವಜನಿಕವಾಗಿ ವೈರಲ್ ಆಗುವುದಲ್ಲದೇ ದೈಹಿಕ ಹಲ್ಲೆ ನಡೆಯಬಹುದು ಎಂಬ ಭಯದಿಂದ ಅಲ್ಲಿಂದ ಓಡಿ ಹೋಗುವುದಕ್ಕೆ ಯತ್ನಿಸಿದ್ದಾರೆ. ಆ ಗುಂಪು ಆ ಪ್ರವೇಶ ದ್ವಾರವನ್ನೇ ಬ್ಲಾಕ್ ಮಾಡಿದ್ದರಿಂದ ಭಯಗೊಂಡ ಆ 21ರ ಹರೆಯದ ತರುಣ ಹಾಗೂ ಆತನ ಗೆಳತಿ 19 ವರ್ಷದ ಹುಡುಗಿ ಕಿಟಕಿಯ ಗಾಸ್‌ಗಳನ್ನು ಪಕ್ಕಕ್ಕೆ ಸರಿಸಿ ಅಲ್ಲಿಂದ ಕೆಳಗೆ ಹಾರಿದ್ದಾರೆ. ಪರಿಣಾಮ ಇಬ್ಬರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕುತ್ತಿಗೆಗೆ ಬಾಯಿ ಹಾಕಿದ ಚಿರತೆಗೆ ಸರಿಯಾಗಿ ತುಳಿದು ತನ್ನನ್ನು ತಾನು ರಕ್ಷಿಸಿಕೊಂಡ ಹೋರಿ: ವೀಡಿಯೋ ವೈರಲ್
ಮೇಲಿನಿಂದ ಹಾರಿದ್ದರಿಂದ ಇಬ್ಬರಿಗೂ ಹಲವು ಫ್ರಾಕ್ಚರ್‌ಗಳಾಗಿದ್ದು, ಒಳಭಾಗದಲ್ಲೂ ಹಾನಿಯಾಗಿದೆ ಘಟನಾ ಸ್ಥಳದಲ್ಲಿ ಸೆರೆಯಾದ ವೀಡಿಯೋದಲ್ಲಿ ಪಿಜ್ಜಾ ಕೆಫೆಯ ಸಿಬ್ಬಂದಿ ಹಾಗೂ ಮ್ಯಾನೇಜರ್‌ಗಳು ಅಲ್ಲಿಂದ ಓಡಿ ಹೋಗುವುದನ್ನು ನೋಡಬಹುದು. ಅಲ್ಲದೇ ಪೊಲೀಸರು ಬರುವಷ್ಟರಲ್ಲಿ ಆ ಶಾಪ್‌ಗೆ ಬೀಗ ಹಾಕಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ವಿಚಾರ ತಿಳಿದ ಕೂಡಲೇ ಆ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿದ್ದಾರೆ ಎಂದು ಎಸ್‌ಪಿ ರಾಜೇಶ್ ದ್ವಿವೇದಿ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಪಡೆಯುವುದಕ್ಕಾಗಿ ಆ ಜೋಡಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಹಾಗಾಗಿ ಆರೋಪಿಗಳ ಬಂಧನವೂ ನಡೆದಿಲ್ಲ. ದೂರು ಬಂದ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.


