ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿದೆ. ಆದರೆ, ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಿ ತೋರಿದ ಅದ್ಭುತ ಹೋರಾಟದಿಂದಾಗಿ ಚಿರತೆಯು ಸೋತು ಹಿಮ್ಮೆಟ್ಟಿದೆ. ಈ ಸಾವು-ಬದುಕಿನ ಹೋರಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬದುಕಿಗಾಗಿಯೇ ಎಲ್ಲರೂ ಹೋರಾಡುವುದು ಮನುಷ್ಯರಾದರು ಅಷ್ಟೇ ಪ್ರಾಣಿಗಳಾದರೂ ಅಷ್ಟೇ. ಸಾವು ಕಣ್ ಮುಂದಿದೆ ಎಂದರೆ ಅದನ್ನು ಜಯಿಸಲು ಕೊನೆಕ್ಷಣದವರೆಗೂ ಹೋರಾಡುತ್ತಾರೆ. ಕೆಲವರು ಜಯಿಸಿದರೆ ಇನ್ನೂ ಕೆಲವರು ನಡುವೆ ಕೈ ಚೆಲ್ಲುತ್ತಾರೆ. ಹಾಗೆಯೇ ಇಲ್ಲೊಂದು ಚಿರತೆ ದಾಳಿಗೆ ಸಿಕ್ಕ ಹೋರಿಯೊಂದು ತನ್ನ ಛಲದಿಂದಾಗಿ ಗೆದ್ದು ಬಂದಿದ್ದು, ಈ ಅಪರೂಪದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೋರಿಯ ಹೋರಾಟಕ್ಕೆ ಜನ ಶಭಾಷ್ ಎಂದಿದ್ದಾರೆ.

ಅಂದಹಾಗೆ ಈ ಘಟನೆ ನಡೆದಿರುವುದು ರಾಜಸ್ಥಾನದ ಕೋಟಾ ಜಿಲ್ಲೆಯ ಕೋಲಿಪುರ ಗ್ರಾಮದ ಬಳಿಯ ಮುಕುಂದ್ರ ಟೈಗರ್ ಹಿಲ್ಸ್ ಪ್ರದೇಶದಲ್ಲಿ. ಇಲ್ಲಿ ಚಿರತೆಯೊಂದು ಹೋರಿಯನ್ನು ಬೇಟೆಯಾಡುವುದಕ್ಕೆ ಪ್ರಯತ್ನಿಸಿ ವಿಫಲವಾಗಿದೆ. ಹೋರಿಯ ವಿರೋಚಿತ ಹೋರಾಟದ ಅದರ ಜೀವ ಉಳಿಸಿದೆ. 30 ಸೆಕೆಂಡ್‌ಗಳ ವೀಡಿಯೋದಲ್ಲಿ ಚಿರತೆಯೊಂದು ಹೋರಿಯ ಕತ್ತಿಗೆ ಕತ್ತಿನ ಕೆಳಭಾಗದಿಂದ ಬಾಯಿ ಹಾಕಿದೆ. ಈ ವೇಳೆ ಹೋರಿ ತನ್ನ ಪಾದಗಳಿಂದ ಚಿರತೆಯನ್ನು ತುಳಿಯುವುದಕ್ಕೆ ಆರಂಭಿಸಿದ್ದು, ಹೋರಿ ತುಳಿದರೂ ಚಿರತೆಯೇನು ಅಷ್ಟು ಸುಲಭದಲ್ಲಿ ಹೋರಿಯನ್ನು ಸುಮ್ಮನೇ ಬಿಟ್ಟಿಲ್ಲ. ಹೋರಿಯ ತುಳಿತದ ನಡುವೆಯೂ ಅದು ತನ್ನ ಹಿಡಿತವನ್ನು ಬಿಗಿಗೊಳಿಸುವ ಪ್ರಯತ್ನ ಮಾಡಿದೆ. ಆದರೆ ಹೋರಿಗಿದು ತನ್ನ ಸಾವು ಬದುಕಿನ ಪ್ರಶ್ನೆ ಹೀಗಾಗಿ ಹೋರಿ ಉಳಿದರೆ ಜೀವನ ಸತ್ತರೆ ಮರಣ ಎಂದು ಅರಿತು ಅಮೋಘವಾಗಿ ಚಿರತೆ ವಿರುದ್ಧ ಹೋರಾಡಿದ್ದು, ತನ್ನ ಕಾಲಿನ ಗೊರಸುಗಳ ಮೂಲಕ ಚಿರತೆಯನ್ನು ಸರಿಯಾಗಿ ತುಳಿದು ಹಾಕಿದ್ದು, ಕಡೆಗೂ ಚಿರತೆ ತನ್ನ ಹಿಡಿತವನ್ನು ಸಡಿಲಿಸಿಕೊಂಡು ಹೋರಿಯನ್ನು ಬಿಟ್ಟು ದೂರ ಹೋಗುವಲ್ಲಿ ಯಶಸ್ವಿಯಾಗಿದ್ದು, ಈ ಅಪರೂಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಜನವರಿ 10 ರ ಸಂಜೆ 6 ಗಂಟೆ ಸುಮಾರಿಗೆ, ಕೋಟಾದ ಕೋಲಿಪುರ ಗ್ರಾಮದ ಮುಕುಂದ್ರ ಟೈಗರ್ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಚಿರತೆ ಬಹಳ ಹೊತ್ತು ಹೋರಿಯ ಕತ್ತನ್ನು ಕಚ್ಚಿಕೊಂಡು ತನ್ನೆರಡು ಮುಂಗಾಲಿನಲ್ಲಿ ಅದರ ಕತ್ತನ್ನು ಹಿಡಿದು ಹೋರಿಯನ್ನು ಕೆಳಗೆ ಬೀಳಿಸುವ ಪ್ರಯತ್ನ ಮಾಡಿತ್ತು. ಆದರೆ ಹೋರಿ ಕೂಡ ಧೈರ್ಯಗೆಡದೇ ಹೋರಾಡಿದ್ದು, ಚಿರತೆಯಿಂದ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂತರ ಚಿರತೆ ಹಾಗೂ ಹೋರಿ ಬೇರೆ ಬೇರೆ ಹಾದಿ ಹಿಡಿದಿವೆ.

ವೀಡಿಯೋ ಮಾಡಿದ್ದು ಯಾರು?

ಈ ಅಪರೂಪದ ದೃಶ್ಯವನ್ನು ರಾಜಸ್ಥಾನದ ಸರ್ಕಾರಿ ಶಾಲೆಯ ಶಿಕ್ಷಕರಾದ ಬ್ರಿಜ್ ಬಿಹಾರಿ ಮೇಘವಾಲ್ ಮತ್ತು ಪರಮೇಶ್ವರ್ ರಾಥೋಡ್ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕೋಟಾದಿಂದ ರಾವತ್‌ಭಟ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರೂ ಈ ಚಿರತೆ ಹಾಗೂ ಗೂಳಿಯ ಮುಖಾಮುಖಿಯನ್ನು ನೋಡಿದ್ದಾರೆ. ನಂತರ ವಾಹನವನ್ನು ನಿಲ್ಲಿಸಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಇದನ್ನೂ ಓದಿ: ಮಹಿಳಾ ಕ್ರಿಕೆಟರ್‌ಗಳೇ ಪಲಾಶ್‌ಗೆ ಸರಿಯಾಗಿ ಥಳಿಸಿದ್ದರು ಎಂದ ಮಂಧಾನ ಬಾಲ್ಯ ಸ್ನೇಹಿತನ ವಿರುದ್ಧ10 ಕೋಟಿ ಮಾನನಷ್ಟ ಕೇಸ್

ಮುಕುಂದ್ರ ಕಾಡಿನ ಮೂಲಕ ಹಾದುಹೋಗುವ ಕೋಟಾ-ರಾವತ್‌ಭಟ ರಸ್ತೆಯ ಉದ್ದಕ್ಕೂ ಚಿರತೆಗಳು ಸಾಮಾನ್ಯವವಾಗಿದ್ದು, ಮುಕುಂದ್ರ ಪ್ರದೇಶವು ನೈಸರ್ಗಿಕವಾಗಿ ಚಿರತೆಗಳ ಆವಾಸಸ್ಥಾನವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂಜೆ ಮತ್ತು ರಾತ್ರಿ ಸಮಯದಲ್ಲಿ ಪ್ರಯಾಣಿಕರು ವಿಶೇಷವಾಗಿ ಜಾಗರೂಕರಾಗಿರಲು ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಅರಣ್ಯ ಪ್ರದೇಶಗಳಲ್ಲಿ ವೇಗವನ್ನು ಕಡಿಮೆ ಮಾಡಲು ಹಾಗೂ ಅನಗತ್ಯ ವಾಹನ ನಿಲುಗಡೆಗಳನ್ನು ತಪ್ಪಿಸಲು ಮತ್ತು ಪ್ರಾಣಿಗಳು ಕಂಡು ಬಂದರೆ ವನ್ಯಜೀವಿಗಳಿಗೆ ತೊಂದರೆಯಾಗದಂತೆ ವಾಹನ ಚಲಾಯಿಸುವುದನ್ನು ಮುಂದುವರಿಸಲು ಅರಣ್ಯ ಇಲಾಖೆ ಚಾಲಕರಿಗೆ ಮನವಿ ಮಾಡಿದೆ. 

ಇದನ್ನೂ ಓದಿ: ಮಂಕಥಾ ಸಿನಿಮಾ ವೇಳೆ ವಿಜಯ್ ಟಿವಿಕೆ ಪಕ್ಷದ ಧ್ವಜ ತೋರಿಸಿದ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿದ ಅಜಿತ್ ಫ್ಯಾನ್ಸ್

View post on Instagram