ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಉರುಸ್ ಮೆರವಣಿಗೆ ವೇಳೆ ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು 10 ಜನರನ್ನು ಬಂಧಿಸಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಮುಸ್ಲಿಂ ಯುವತಿಯ ಜೊತೆಗೆ ಇದ್ದ ಹಿಂದೂ ಹುಡುಗರ ಮೇಲೆ ಹಲ್ಲೆ ಮಾಡಿ ಮುಸ್ಲಿಂ ಯುವಕರು ನೈತಿಕ ಪೊಲೀಸ್‌ಗಿರಿ ನಡೆಸಿದಂತಹ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಂಗಾರಪೇಟೆ ಪಟ್ಟಣದ ದರ್ಗಾ ಮೈದಾನದಲ್ಲಿ ಉರುಸ್‌ ಮೆರವಣಿಗೆ ವೇಳೆ ಈ ನೈತಿಕ ಪೊಲೀಸ್‌ಗಿರಿ ನಡೆದಿದ್ದು, ಮುಸ್ಲಿಂ ಯುವತಿಯ ಜೊತೆ ಇದ್ದ ಹಿಂದೂ ಯುವಕರ ಮೇಲೆ ಮುಸ್ಲಿಂ ಸಮುದಾಯದ ಯುವಕರು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. 

ಘಟನೆ ಸಂಬಂಧ ಮುಸ್ಲಿಂ ಯುವತಿ ಚಾಂದಿನಿ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜಹೀದ್, ಅಬೀದ್ ಅಹ್ಮದ್, ಶೇಕ್ ಸಕೀಬ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ನೈತಿಕ ಪೊಲೀಸ್‌ಗಿರಿಗೆ ಘಟನೆಗೆ ಸಂಬಂಧಿಸಿದಂತೆ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ

ತನ್ನ ಸೋದರ ರಫಿ ಜೊತೆ ತಾನು ಇದ್ದಾಗ ನಮ್ಮ ಜೊತೆಗೆ ಇದ್ದ ರಾಹುಲ್, ಪುರುಷೋತಮ್, ಲಾವಣ್ಯ ಮತ್ತು ಸಂಜಯ್ ಎಂಬುವವರ ಮೇಲೆ ಈ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಚಾಂದಿನಿ ದೂರು ನೀಡಿದ್ದು, ಘಟನೆಯ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮುಸ್ಲಿಂ ಯುವತಿಗೆ ಹಿಂದೂ ಯುವಕರ ಜೊತೆಗೆ ಇರುವುದಕ್ಕೆ ಆರೋಪಿಗಳು ಬೆದರಿಕೆ ಹಾಕುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. 

ಇದನ್ನೂ ಓದಿ: BMTC ಬಸ್‌ ಟಿಕೆಟ್ ಹಣ ಆನ್‌ಲೈನ್ ಪಾವತಿ ವೇಳೆ ಎಡವಟ್ಟು: 6 ರೂ. ಬದಲು 60,000 ರೂ. ಪೇ ಮಾಡಿದ ಪ್ರಯಾಣಿಕ

ವೈರಲ್ ಆದ ವೀಡಿಯೋದಲ್ಲಿ ಯುವತಿ ಬೈಕ್ ಹಿಂದೆ ಕುಳಿತಿದ್ದು, ಆಕೆಯನ್ನು ಬೈಕ್‌ನಿಂದ ಇಳಿಸಿದ ಆರೋಪಿಗಳು ನಿನ್ನ ತಾಯಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಆಕೆಯನ್ನು ಕರೆದುಕೊಂಡು ಹೋಗದಂತೆ ಬೈಕ್‌ನಲ್ಲಿರುವ ಯುವಕನಿಗೆ ತಾಕೀತು ಮಾಡಿದ್ದಾರೆ. ನೀನು ಆಕೆಯ ಅಪ್ಪ ಅಮ್ಮನಿಗೆ ಕರೆ ಮಾಡಿ ಆಕೆಯನ್ನು ಎಲ್ಲಿಗೆ ಬೇಕಾದರು ಕರೆದುಕೊಂದು ಹೋಗು ಎಂದು ವೀಡಿಯೋದಲ್ಲಿ ಹೇಳುತ್ತಿರುವುದನ್ನು ನೋಡಬಹುದು. ಫ್ರೆಂಡ್ ಅಂತೀಯಾ ಫ್ರೆಂಡ್ ಜೊತೆ ಹೀಗೆ ಹೋಗ್ತಾರಾ ಎಂದು ಆಕೆಯನ್ನು ಪ್ರಶ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಯುವಕನಿಗೆ ಬೈಕ್‌ನ್ನು ಪಕ್ಕಕ್ಕೆ ಹಾಕುವಂತೆ ಹೇಳುವುದನ್ನು ಕೇಳಬಹುದು. ಅಲ್ಲದೇ ಆಕೆಗೆ ನೀನು ಯಾರ ಮಗಳು ಎಲ್ಲಿ ನಿನ್ನ ಮನೆ ಎಂದು ಆಕೆಯನ್ನು ಪ್ರಶ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಗಂಡನ ಮೇಲಿನ ಕೋಪಕ್ಕೆ 18 ತಿಂಗಳ ಮಗುವನ್ನೇ ಚಾಕುವಿನಿಂದ ಇರಿದು ಕೊಂದ ತಾಯಿ