ತೆಲಂಗಾಣದಲ್ಲಿ ಆರಂಭವಾಗಿರುವ ಜಾತಿ ಗಣತಿಯು ಗಣತಿದಾರರಿಗೆ ತಲೆನೋವಾಗಿ ಪರಿಣಮಿಸಿದೆ. ವೈಯಕ್ತಿಕ ಮಾಹಿತಿ ನೀಡಲು ಜನರು ಹಿಂದೇಟು ಹಾಕುತ್ತಿದ್ದು, ಗಣತಿದಾರರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ವರದಿಯಾಗಿವೆ.

ಹೈದರಾಬಾದ್: ತೆಲಂಗಾಣದಲ್ಲಿ ಆರಂಭಿಸಲಾಗಿರುವ ಜಾತಿ ಗಣನೆಯು ಗಣತಿದಾರರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಅವರು ಜನಾಕ್ರೋಶ ಎದುರಿಸಬೇಕಾಗಿದೆ ಎಂದು ತೆಲಂಗಾಣದ ಕೆಲ ಮಾಧ್ಯಮಗಳು ವರದಿ ಮಾಡಿವೆ. ಗಣತಿದಾರಿಗೆ ಜನರು ವೈಯಕ್ತಿಕ ವಿವರಗಳು, ಜಾತಿಯ ಮಾಹಿತಿ ಹಾಗೂ ಇತ್ಯಾದಿ ವೈಯಕ್ತಿಕ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಮಾಹಿತಿಗಳನ್ನು ನಿಜವಾಗಿಯೂ ಸರ್ಕಾರ ಸದುದ್ದೇಶಕ್ಕೆ ಬಳಸಿಕೊಳ್ಳುತ್ತದೆಯೆ? ಮುಂದೆ ನಮ್ಮ ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಆಗಬಹುದೆ? ಎಂದು ಕೆಲವು ಜನರು ಸಂದೇಹ ಪಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗಣತಿದಾರರಿಗೆ ಪೇಚು: 
ಮನೆಗಳಿಗೆ ಗಣತಿಗೆಂದು ಹೋದಾಗ ಕೆಲವರು ಅವರನ್ನು ಈ ಮೇಲಿನ ವಿಚಾರಗಳನ್ನು ಮುಂದಿಟ್ಟುಕೊಂಡು ದಬಾಯಿಸುತ್ತಿರುವ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಈ ಸಂಬಂಧ ಕೆಲವು ವಿಡಿಯೋಗಳು ವೈರಲ್ ಆಗಿದ್ದು, ಗಣತಿದಾರರ ಮೇಲೆ ಜನ ಆಕ್ರೋಶ ವ್ಯಕ್ತಪಡಿಸುವುದು ಕಾಣಿಸುತ್ತದೆ. 'ನೀವು ಏಕೆ ನಮ್ಮ ವೈಯಕ್ತಿಕ ಮಾಹಿತಿ ಕೇಳುತ್ತಿದ್ದೀರಿ? ಅವುಗಳು ದುರ್ಬಳಕೆ ಆಗಲ್ಲ ಎಂಬ ಗ್ಯಾರಂಟಿ ಏನು? ಈ ಮಾಹಿತಿಗಳನ್ನು ಇಟ್ಟುಕೊಂಡು ನಮಗೆ ಸರ್ಕಾರಿ ಯೋಜನೆಗಳನ್ನು ಕಡಿತಗೊಳಿಸಿದರೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಜನ ಕೇಳುತ್ತಿದ್ದಾರೆ. 

ಇದಲ್ಲದೆ ಕೆಲವರು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಸರ್ಕಾರದ ವಿರುದ್ಧವೂ ತಮ್ಮ ಸಿಟ್ಟನ್ನು ಗಣತಿದಾರರ ಮುಂದೆ ತೀರಿಸಿಕೊಳ್ಳುತ್ತಿದ್ದಾರೆ. 'ಸರ್ಕಾರ ನೀಡಿದ ಗ್ಯಾರಂಟಿ ಭರವಸೆಗಳು ಈಡೇರಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವು ಗಣತಿದಾರರನ್ನು ಹೈರಾಣಾಗಿಸಿವೆ ಎಂದು ವರದಿಗಳು ಹೇಳಿವೆ.

ತೆಲಂಗಾಣದಲ್ಲಿ ಜಾತಿ ಗಣತಿ ಹೇಗೆ ನಡೆದಿದೆ?
ತೆಲಂಗಾಣದಾದ್ಯಂತ 1 ತಿಂಗಳ ಮಟ್ಟಿಗೆ ನಡೆಸಲಾಗುವ ಜಾತಿ ಸಮೀಕ್ಷೆಗಾಗಿ ಸರ್ಕಾರ 50,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರತಿಯೊಬ್ಬ ಮೇಲ್ವಿಚಾರಕರು 150 ಮನೆಗಳಿಂದ ಮಾಹಿತಿ ಸಂಗ್ರಹಣೆ ಮಾಡುತ್ತಾರೆ. ಸಮೀಕ್ಷೆಯನ್ನು 2 ಭಾಗಗಳಲ್ಲಿ ನಡೆಸಲಾಗುತ್ತದೆ, ಇದರಲ್ಲಿ 75 ಪ್ರಶ್ನೆಗಳು - 56 ಮುಖ್ಯ ಪ್ರಶ್ನೆಗಳು ಮತ್ತು 19 ಪೂರಕ ಪ್ರಶ್ನೆಗಳು. ಈ ಪ್ರಶ್ನೆಗಳು ವೈಯಕ್ತಿಕ ವಿವರಗಳು, ಕುಟುಂಬದ ಮಾಹಿತಿ, ಶಿಕ್ಷಣ, ಉದ್ಯೋಗ, ಸ್ವತ್ತುಗಳು, ಜಾತಿ ಸ್ಥಿತಿ ಮತ್ತು ಇತ್ಯಾದಿಗಳನ್ನು ಒಳಗೊಂಡಿವೆ.