Dattatreya Hosabale on Pakistan ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಪಾಕಿಸ್ತಾನವು ಮಗ್ಗುಲ ಮುಳ್ಳಿನಂತಿದ್ದರೂ, ಪುಲ್ವಾಮಾದಂತಹ ಕೃತ್ಯಗಳಿಗೆ ತಿರುಗೇಟು ನೀಡುತ್ತಲೇ ಮಾತುಕತೆಯ ಬಾಗಿಲನ್ನು ಮುಚ್ಚಬಾರದು ಎಂದು ಸಲಹೆ ನೀಡಿದ್ದಾರೆ. 

ನವದೆಹಲಿ (ಮೇ.13): ಪಾಕಿಸ್ತಾನ ಎಂಬುದು ಮಗ್ಗುಲ ಮುಳ್ಳು ಇದ್ದಂತೆ. ಆದರೂ ನೆರೆಯ ದೇಶದೊಂದಿಗಿನ ಮಾತುಕತೆಯ ಬಾಗಿಲನ್ನು ಬಂದ್‌ ಮಾಡಬಾರದು ಎಂದು ಆರ್‌ಎಸ್‌ಎಸ್‌ನ ನಂಬರ್ 2 ನಾಯಕರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಸಲಹೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಪಾಕಿಸ್ತಾನ ಮಗ್ಗುಲ ಮುಳ್ಳಿನಂತಿದ್ದು, ಪುಲ್ವಾಮಾದಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋದರೆ, ಅದಕ್ಕೆ ತಕ್ಕುದಾಗಿ ನಾವು ತಿರುಗೇಟು ನೀಡಬೇಕು. ಏಕೆಂದರೆ ದೇಶದ ಭದ್ರತೆ ಹಾಗೂ ಆತ್ಮಗೌರವವನ್ನು ರಕ್ಷಿಸಿಕೊಳ್ಳಬೇಕು. ಅಂತಹ ಘಟನೆಗಳು ಆದಾಗ ಆಯಾ ಸರ್ಕಾರಗಳು ಗಮನಹರಿಸಿ ಪರಿಸ್ಥಿತಿ ನಿರ್ವಹಿಸುತ್ತವೆ. ಆದರೆ ಅದೇ ವೇಳೆ, ಮಾತುಕತೆಯ ಬಾಗಿಲನ್ನು ನಾವು ಮುಚ್ಚಬಾರದು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಹೊಸಬಾಳೆ ಹೇಳಿದ್ದಾರೆ.

ಎರಡೂ ದೇಶಗಳ ನಡುವಿರುವ ಕಗ್ಗಂಟನ್ನು ಬಿಡಿಸಲು ಜನರು- ಜನರ ನಡುವಣ ಸಂಪರ್ಕವೇ ಮುಖ್ಯವಾದುದು. ಪಾಕಿಸ್ತಾನದ ಮಿಲಿಟರಿ ಹಾಗೂ ಸೇನಾ ನಾಯಕತ್ವ ಈಗಾಗಲೇ ಭಾರತದ ವಿಶ್ವಾಸವನ್ನು ಕಳೆದುಕೊಂಡಿವೆ. ನಾಗರಿಕ ಸಮಾಜ ಮುಂದೆ ಬರುವ ಸಮಯ ಇದಾಗಿದೆ ಎಂದು ತಿಳಿಸಿದ್ದಾರೆ.

ವ್ಯಾಪಾರ, ವಾಣಿಜ್ಯ, ವೀಸಾ ವಿತರಣೆಯನ್ನು ನಿಲ್ಲಿಸಬಾರದು. ಮಾತುಕತೆಗೆ ಒಂದು ಬಾಗಿಲು ತೆರೆದಿರಬೇಕು. ವಿದ್ವಾಂಸರು, ಕ್ರೀಡಾಪಟುಗಳು, ವಿಜ್ಞಾನಿಗಳು, ಸಮುದಾಯ ನಾಯಕರು ಇದಕ್ಕಾಗಿ ಮುಂದೆ ಬರಬೇಕು ಎಂದು ಸಲಹೆ ಮಾಡಿದ್ದಾರೆ.

ಎರಡೂ ದೇಶಗಳ ನಡುವೆ ಕ್ರೀಡಾ ಚಟುವಟಿಕೆಗಳು ಮುಂದುವರಿಯಬೇಕೇ? ಎಂಬ ಪ್ರಶ್ನೆಗೆ ‘ಖಂಡಿತವಾಗಿ’ ಎಂದು ಹೇಳಿದ್ದಾರೆ.