Nushrratt Bharuccha RCB video statement: ಮೇ 31 ರಂದು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಐಪಿಎಲ್ 2026 ಟ್ರೋಫಿ ಗೆದ್ದಾಗ, ಒಬ್ಬ ಸಾಮಾನ್ಯ ಅಭಿಮಾನಿಯಂತೆ ನಟಿ ನುಶ್ರತ್ ಭರುಚ್ಚಾ ಕೂಡ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದರು. ಆದರೆ ನೆಟ್ಟಿಗರು ಆ ವಿಡಿಯೋದ ಹಿನ್ನೆಲೆ ಧ್ವನಿಗೆ ತಮಗೆ ಬೇಕಾದಂತೆ ರೆಕ್ಕೆಪುಕ್ಕ ಕಟ್ಟಿ ಇಂಟರ್ನೆಟ್‌ನಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿದರು.
ಆರ್‌ಸಿಬಿ ಪಂದ್ಯದ ಗೆಲುವನ್ನು ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ತಾ ನಟಿ ನುಶ್ರತ್ ಭರುಚ್ಚಾ ಶೇರ್ ಮಾಡಿದ್ದ ವಿಡಿಯೋ ಇಷ್ಟೊಂದು ದೊಡ್ಡ ವಿವಾದ ಸೃಷ್ಟಿಸುತ್ತೆ ಅಂತ ಬಹುಶಃ ಅವರು ಕೂಡ ಅಂದುಕೊಂಡಿರಲಿಲ್ಲ. ವಿಡಿಯೋದ ಬ್ಯಾಕ್‌ಗ್ರೌಂಡ್(background)ನಲ್ಲಿ ಕೇಳಿಬಂದ ಒಂದು ವಿಚಿತ್ರ ಧ್ವನಿಯನ್ನು ಇಟ್ಟುಕೊಂಡು ನೆಟ್ಟಿಗರು ತಮಗೆ ಬೇಕಾದಂತೆ ಅಸಭ್ಯವಾಗಿ ಟ್ರೋಲ್ ಮಾಡೋಕೆ ಶುರು ಮಾಡಿದ್ದರು. ಕೊನೆಗೂ ಈ ಇಡೀ ಗದ್ದಲದ ಬಗ್ಗೆ ಮೌನ ಮುರಿದಿರುವ ನುಶ್ರತ್, ಇನ್‌ಸ್ಟಾಗ್ರಾಮ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಅಸಲಿ ಕಥೆ ಏನೆಂಬುದನ್ನು ಪ್ರೂಫ್ ಸಮೇತ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅರೆಬರೆ ಮಾಹಿತಿ ನಂಬಿ ಹೀಯಾಳಿಸುವವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಸಲಿ ವಿವಾದವೇನು?
ಇತ್ತೀಚೆಗೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ (RCB team) ಸತತ ಎರಡನೇ ಗೆಲುವು ದಾಖಲಿಸಿದಾಗ, ನುಶ್ರತ್ ಭರುಚ್ಚಾ ತಮ್ಮ ಆಪ್ತ ಸ್ನೇಹಿತರೊಂದಿಗೆ ಮ್ಯಾಚ್ ವೀಕ್ಷಿಸುತ್ತಾ ಸಂಭ್ರಮಿಸಿದ್ದರು. ಈ ಖುಷಿಯ ಕ್ಷಣವನ್ನು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಆದರೆ ಆ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಬಂದ ಕೆಲವು ವಿಚಿತ್ರ ಹಾಗೂ ಆಕ್ಷೇಪಾರ್ಹ ಧ್ವನಿಗಳು (Objectionable Audio) ನೆಟ್ಟಿಗರ ಕಣ್ಣು ಕೆಂಪಗಾಗಿಸಿತ್ತು. ಜನರು ಆ ಧ್ವನಿಯನ್ನು ತಮಗೆ ಬೇಕಾದಂತೆ ಅತ್ಯಂತ ಅಸಭ್ಯವಾಗಿ ಅರ್ಥೈಸಿಕೊಂಡು, ನಟಿಯ ವಿರುದ್ಧ ಟ್ರೋಲ್ ಮಾಡಲು ಆರಂಭಿಸಿದರು. ದಿನಕಳೆದಂತೆ ಈ ಅನಗತ್ಯ ವಿವಾದ ದೊಡ್ಡದಾಗುತ್ತಿದ್ದಂತೆ ನುಶ್ರತ್ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು.
ನಾಯಿಮರಿಯ ಮತ್ತೊಂದು ವಿಡಿಯೋ ಶೇರ್ ಮಾಡಿದ ನುಶ್ರತ್
ಘಟನೆ ನಡೆದು ನಾಲ್ಕು ದಿನಗಳ ನಂತರ ವಿಡಿಯೋದ ಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿರುವ ನುಶ್ರತ್, "ನಿಮ್ಮ ವಿಕೃತ ಆಲೋಚನೆಗಳಿಗೆ ಮೊದಲು ಬ್ರೇಕ್ ಹಾಕಿ" ಎಂದು ಕಿಡಿಕಾರಿದ್ದಾರೆ. ತಾವು ಮ್ಯಾಚ್ ನೋಡುತ್ತಿದ್ದ ಸ್ನೇಹಿತನ ಮನೆಯಲ್ಲಿದ್ದ ಒಂದು ಪುಟ್ಟ ನಾಯಿಮರಿ (Puppy) ಆ ಸಮಯದಲ್ಲಿ ವಿಚಿತ್ರವಾಗಿ ಅಳುವಂತಹ ಧ್ವನಿ ಮಾಡುತ್ತಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಪುರಾವೆಯಾಗಿ ಅದೇ ನಾಯಿಮರಿಯ ಮತ್ತೊಂದು ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಮುಂದೆ ಹೀಗೆಲ್ಲಾ ತಪ್ಪು ವಿವಾದ ಆಗಬಹುದು ಎಂಬ ಭಯದಿಂದ ನನ್ನ ಆಪ್ತರು ಆ ವಿಡಿಯೋ ಡಿಲೀಟ್ ಮಾಡಲು ಸಲಹೆ ನೀಡಿದ್ದರು, ಹಾಗಾಗಿ ನಾನು ಡಿಲೀಟ್ ಮಾಡಿದ್ದೆ. ಆದರೆ ಜನರು ಅದನ್ನೇ ದೊಡ್ಡದು ಮಾಡಿ ತಮಗೆ ಬೇಕಾದಂತೆ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ. ಕೈಯಲ್ಲೊಂದು ಮೊಬೈಲ್ ಫೋನ್ ಇದೆ ಎಂದಾಕ್ಷಣ ಯಾರಿಗಾದರೂ ಕಿರುಕುಳ (Harassment) ನೀಡುವ ಹಕ್ಕು ಯಾರಿಗೂ ಸಿಗುವುದಿಲ್ಲ. ಯಾವುದೇ ವಿಷಯವನ್ನು ಕುರುಡಾಗಿ ನಂಬಬೇಡಿ, ಜವಾಬ್ದಾರಿಯಿಂದ ವರ್ತಿಸಿ" ಎಂದು ನುಶ್ರತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

40ನೇ ವರ್ಷಕ್ಕೆ ಕಾಲಿಟ್ಟ ನುಶ್ರತ್ ಭರುಚ್ಚಾ
ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಇತ್ತೀಚೆಗಷ್ಟೇ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ವಿಶೇಷ ಪಾರ್ಟಿಯಲ್ಲಿ ಜ್ಯಾಕ್ವೆಲಿನ್ ಫರ್ನಾಂಡಿಸ್, ಮೃಣಾಲ್ ಠಾಕೂರ್, ರಾಕುಲ್ ಪ್ರೀತ್ ಕೌರ್ ಸೇರಿದಂತೆ ಹಲವು ಪ್ರಮುಖ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ನುಶ್ರತ್ ಅವರು ಕೊನೆಯದಾಗಿ ತೆರೆಮೇಲೆ ಹಾರರ್ ಥ್ರಿಲ್ಲರ್ ಚಿತ್ರವಾದ 'ಚೋರಿ 2' (Chhorii 2) ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

