ಭಾರತ-ಪಾಕ್ ಸಮರ ನಿಲ್ಲಿಸಲು ಭಾರತ ಎಂದಿಗೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಬಯಸಿರಲಿಲ್ಲ ಎಂದು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ರಾಹುಲ್ ಗಾಂಧಿಯವರನ್ನು ಹೊಗಳಿದ್ದು, ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
ಯುದ್ಧ ನಿಲ್ಲಿಸಲು ಭಾರತ ಎಂದಿಗೂ ಮೂರನೇ ವ್ಯಕ್ತಿಯನ್ನು ಬಯಸಿರಲಿಲ್ಲ
ಇಸ್ಲಾಮಾಬಾದ್: ಭಾರತ- ಪಾಕ್ ಸಮರ ನಿಲ್ಲಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 30ಕ್ಕೂ ಹೆಚ್ಚು ಬಾರಿ ಸುಳ್ಳು ಹೇಳಿದ ಬೆನ್ನಲ್ಲೇ, ‘ಯುದ್ಧ ನಿಲ್ಲಿಸಲು ಭಾರತ ಎಂದಿಗೂ ಮೂರನೇ ವ್ಯಕ್ತಿಯನ್ನು’ ಬಯಸಿರಲಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಬಹಿರಂಗಪಡಿಸಿದ್ದಾರೆ.
ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿರುವ ದಾರ್, ‘ನಮಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಅಭ್ಯಂತರವಿರಲಿಲ್ಲ. ಆದರೆ ಇದು ದ್ವಿಪಕ್ಷೀಯ ವಿಷಯ ಎಂದು ಭಾರತ ಸ್ಪಷ್ಟವಾಗಿ ಹೇಳಿತ್ತು. ಜು.25ರಂದು ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರನ್ನು ಭೇಟಿಯಾದಾಗ ಈ ವಿಚಾರದ ಬಗ್ಗೆ ಕೇಳಿದ್ದೆವು. ಆಗ ಅವರು ಭಾರತ ಇದು ದ್ವಿಪಕ್ಷೀಯ ವಿಷಯ ಎಂದು ಹೇಳುತ್ತದೆ. ಮಧ್ಯಸ್ಥಿಕೆಗೆ ಒಪ್ಪಿರಲಿಲ್ಲ ಎಂದು ಹೇಳಿದ್ದರು’ ಎಂದು ನುಡಿದ್ದಾರೆ. ಅಲ್ಲದೇ ಯುದ್ಧ ನಿಲ್ಲಿಸಿದ್ದು ನಾನೇ ಎನ್ನುವ ಟ್ರಂಪ್ ಹೇಳಿಕೆ ಟೀಕಿಸಿರುವ ದಾರ್, ‘ಎರಡೂ ದೇಶಗಳ ಮಿಲಿಟರಿ ನಡುವಿನ ಮಾತುಕತೆಯ ಬಳಿಕ ಕದನ ವಿರಾಮಕ್ಕೆ ಬರಲಾಯಿತು’ ಎಂದು ಸ್ಪಷ್ಟಪಡಿಸಿದ್ದಾರೆ.
ಮೋದಿ ತೆಗಳಿ ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ ಆಫ್ರಿದಿ: ಬಿಜೆಪಿ ಗರಂ
ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ‘ರಾಹುಲ್ ಗಾಂಧಿ ಸಕಾರಾತ್ಮಕ ಮನಸ್ಥಿತಿ ಹೊಂದಿರುವ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾರತ- ಪಾಕ್ ಪಂದ್ಯದ ಬಗ್ಗೆ ಟೀವಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅಫ್ರಿದಿ, ‘ ಭಾರತದಲ್ಲಿರುವ ಕೇಂದ್ರ ಸರ್ಕಾರ ಯಾವಾಗಲೂ ಅಧಿಕಾರದಲ್ಲಿ ಉಳಿಯಲು ಧರ್ಮ, ಹಿಂದೂ- ಮುಸ್ಲಿಂ ಅಸ್ತ್ರ ಪ್ರಯೋಗಿಸುತ್ತದೆ, ಇದು ತುಂಬಾ ಕೆಟ್ಟ ಮನಸ್ಥಿತಿ. ರಾಹುಲ್ ಗಾಂಧಿ ಅವರದ್ದು ಸಕಾರಾತ್ಮಕ ಮನೋಭಾವ. ಅವರು ಮಾತಿನ ಮೇಲೆ ನಂಬಿ ಇಡುತ್ತಾರೆ’ ಎಂದು ಹಾಡಿ ಹೊಗಳಿದ್ದಾರೆ. ಶಾಹಿದ್ ಈ ನಡೆಗೆ ಬಿಜೆಪಿ ಕಿಡಿ ಕಾರಿದ್ದು, ‘ಉಗ್ರ ಹಫೀಜ್ ಸಯೀದ್ ಬಳಿಕ ಇದೀಗ ಶಾಹಿದ್ ಅಫ್ರಿದಿ ರಾಹುಲ್ ಗಾಂಧಿಯವರನ್ನು ಹೊಗಳುತ್ತಿದ್ದಾರೆ, ಇದು ಅಚ್ಚರಿಯ ವಿಷಯವಲ್ಲ. ಭಾರತವನ್ನು ವಿರೋಧಿಸುವ ಪ್ರತಿಯೊಬ್ಬರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರಲ್ಲಿ ಮಿತ್ರತ್ವ ಕಂಡುಕೊಳ್ಳುತ್ತಾರೆ’ ಎಂದಿದೆ.
ಇದನ್ನೂ ಓದಿ: 75ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ದೇಶಾದ್ಯಂತ ಬಿಜೆಪಿಯಿಂದ ಹಲವು ಸೇವಾ ಕಾರ್ಯಕ್ರಮ
ಇದನ್ನೂ ಓದಿ: ಭಾರತ ಬಹಾವಲ್ಪುರದ ಮೇಲೆ ನಡೆಸಿದ ದಾಳಿಯಲ್ಲಿ ಕುಟುಂಬದ 10 ಜನ ಹತ

