ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಿದ ಬಳಿಕ ಹಸ್ತಲಾಘವ ನಿರಾಕರಿಸಿದ ಭಾರತೀಯ ತಂಡ. ಪೆಹಲ್ಗಾಂ ಉಗ್ರದಾಳಿಯನ್ನು ಖಂಡಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಭಟನೆಯಾಗಿ ಪಾಕಿಸ್ತಾನ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೂರು ನೀಡಿದೆ.

ದುಬೈ: ಏಷ್ಯಾಕಪ್ ಟೂರ್ನಿಯ ಬದ್ದ ಎದುರಾಳಿಗಳ ನಡುವಿನ ಕಾದಾಟದಲ್ಲಿ ಪಾಕಿಸ್ತಾನ ಎದುರು ಟೀಂ ಇಂಡಿಯಾ ಗೆದ್ದು ಬೀಗಿದೆ. ಇನ್ನು ಪಂದ್ಯ ಮುಕ್ತಾಯದ ಬಳಿಕ ಕ್ರೀಡಾಸ್ಪೂರ್ತಿಯ ಭಾಗವಾಗಿ ಉಭಯ ಆಟಗಾರರು ಶೇಕ್‌ಹ್ಯಾಂಡ್ ಮಾಡುವುದು ಸಾಮಾನ್ಯ. ಆದರೆ ಭಾರತೀಯ ಆಟಗಾರರು ಪೆಹಲ್ಗಾಂ ಉಗ್ರದಾಳಿಯನ್ನು ಖಂಡಿಸಿ, ಇದರ ಪ್ರತಿರೋಧದ ಭಾಗವಾಗಿ ಪಾಕ್ ನಾಯಕ ಹಾಗೂ ತಂಡದ ಜತೆ ಹಸ್ತಲಾಘವ ಮಾಡಲಿಲ್ಲ. ಇದನ್ನು ಪ್ರತಿಭಟಿಸಿ ಪಾಕಿಸ್ತಾನ ಅಧಿಕೃತವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೂರು ದಾಖಲಿಸಿದೆ.

ಪಾಕ್ ಬಗ್ಗುಬಡಿದ ಭಾರತ

ಹೌದು, ಭಾರತ ಹಾಗೂ ಪಾಕಿಸ್ತಾನ ನಡುವಿನ 'ಎ' ಗುಂಪಿನ ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, 7 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಕೇವಲ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಕುಲ್ದೀಪ್ ಯಾದವ್ ಮೂರು ವಿಕೆಟ್ ಕಬಳಿಸಿ ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಮೂರು ವಿಕೆಟ್ ಕಳೆದುಕೊಂಡು ಇನ್ನೂ 25 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತ್ತು.