thief leaves note after robbery: ತಮಿಳುನಾಡಿನ ತಿರುನಲ್ವೇಲಿಯಲ್ಲಿ, ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನಿಗೆ ನಿರಾಸೆಯಾಗಿದೆ. ಮನೆಯಲ್ಲಿ ಹೆಚ್ಚು ಹಣ ಸಿಗದಿದ್ದಕ್ಕೆ, "ಹಣವೇ ಇಲ್ಲದ ಮನೆಗೆ ಇಷ್ಟೊಂದು ಸಿಸಿ ಕ್ಯಾಮರಾ ಯಾಕೆ?" ಎಂದು ಮಾಲೀಕರಿಗೆ ಪತ್ರ ಬರೆದಿಟ್ಟು ಹೋಗಿದ್ದಾನೆ.

ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟ ಕಳ್ಳ:

ಮನೆಯೊಂದಕ್ಕೆ ಕಳ್ಳತನಕ್ಕೆಂದು ಬಂದ ಕಳ್ಳನೋರ್ವ ಅಲ್ಲಿ ಏನೂ ಸಿಗದೇ ಬೇಸರಗೊಂಡು ಮನೆ ಮಾಲೀಕರಿಗೆ ಪತ್ರ ಬರೆದಿಟ್ಟು ಹೋದಂತಹ ಘಟನೆಯೊಂದು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಕಳ್ಳತನವನ್ನು ಮಾಡುವುದಕ್ಕಾಗಿ ಮನೆಯ ಬೀಗ ಒಡೆದು ಒಳನುಗಿದ್ದ ಕಳ್ಳ ಅಲ್ಲಿಏನು ಸಿಗದೇ ಹೋದಾಗ ಬೇಸರಗೊಂಡು ಅಲ್ಲಿದ್ದ ಪೇಪರೊಂದರಲ್ಲಿ ಹೀಗೆ ಬರೆದಿದ್ದಾನೆ... ನಿಮ್ಮ ಮನೆಯಲ್ಲಿ ಹಣ ಇಲ್ಲವೆಂದಾದ ಮೇಲೆ ನಿಮ್ಮ ಮನೆಗೆ ಇಷ್ಟೊಂದು ಸಿಸಿ ಕ್ಯಾಮರಾ ಅಳವಡಿಸುವ ಅಗತ್ಯ ಏನಿತ್ತು. ಮುಂದಿನ ಸಲವಾದರೂ ಸ್ವಲ್ಪ ಹಣವಿಡಿ. ಮನೆಯ ಬಾಗಿಲ್ಲನ್ನು ಸುಮ್ಮನೇ ಮುರಿದಿದ್ದಕ್ಕೆ ಕ್ಷಮಿಸಿ ಎಂದು ಆತ ನೋಟ್‌ನಲ್ಲಿ ಬರೆದಿಟ್ಟಿದ್ದು, ಈ ಕಳ್ಳನ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುರಕ್ಷತೆಗಾಗಿ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದ ಕುಟುಂಬ:

ಇತ್ತೀಚೆಗೆ ಬಹುತೇಕರು ಮನೆಗೆ ಭದ್ರತೆಗಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಾರೆ. ಮೊಬೈಲ್ ಫೋನ್‌ಗಳಲ್ಲೇ ಈ ಸಿಸಿಟಿವಿಯ ಮೂಲಕ ಮನೆಯ ಮೇಲ್ವಿಚಾರಣೆಯನ್ನು ದೂರದಲ್ಲಿ ಕುಳಿತು ಮಾಡಬಹುದಾಗಿದೆ. ಹೀಗಾಗಿ ಬೇರೆ ಬೇರೆ ಉದ್ಯೋಗ ವ್ಯವಹಾರ ಅಂತ ಹೋಗುವವರು ಮನೆಗೆ ಸಿಸಿಟಿವಿ ಹಾಕಿಸುವುದು ಸಾಮಾನ್ಯವಾಗಿದೆ. ಮುಂದೆ ಯಾವುದೇ ಅಹಿತಕರ ಘಟನೆ ನಡೆದರೆ ತಿಳಿಯಲಿ ಎಚ್ಚರಿಸುವಂತಾಗಲಿ ಎಂಬ ಕಾರಣಕ್ಕೆ ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ಇತ್ತೀಚಿನ ಸಿಸಿ ಕ್ಯಾಮರಾಗಳು ಅತ್ಯಾಧುನಿಕವಾಗಿದ್ದು, ನೀವು ಅದರ ಮೂಲಕ ಮಾತನ್ನು ಆಡಬಹುದಾಗಿದೆ. ಹಾಗೆಯೇ ಈ ಕುಟುಂಬವೂ ಮನೆಗೆ ಸಿಸಿ ಕ್ಯಾಮರಾ ಅಳವಡಿಸಿತ್ತು.. ಆದರೆ ಇಲ್ಲಿ ಮನೆಗೆ ಕಳ್ಳತನಕ್ಕೆಂದು ಬಂದ ಕಳ್ಳ ಅಲ್ಲಿ ಏನು ಸಿಗದೇ ಹೋದಾಗ ಮನೆಯವರನ್ನೇ ಅಣಕಿಸಿದ್ದಾನೆ.

ಏನೂ ಇಲ್ಲದ ಈ ಮನೆಗೆ ಇಷ್ಟೊಂದು ಸಿಸಿ ಕ್ಯಾಮರಾ ಅಳವಡಿಸುವ ಅಗತ್ಯವೇನಿತ್ತು?

ತಿರುನಲ್ವೇಲಿ ಜಿಲ್ಲೆಯಲ್ಲಿ ಪಲಯಪೆಟ್ಟೈ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ, ಗಮನಾರ್ಹ ಪ್ರಮಾಣದ ನಗದು ಅಥವಾ ಆಭರಣ ಇರಬಹುದು ಎಂದು ಭಾವಿಸಿಕೊಂಡು ಮನೆಯ ಬೀಗ ಒಡೆದಿದ್ದಾನೆ. ಆದರೆ ಅಲ್ಲಿ ಆತ ಬಯಸಿದಂತೆ ಏನೂ ಸಿಗದೇ ಹೋದಾಗ ಏನೂ ಇಲ್ಲದ ಈ ಮನೆಗೆ ಇಷ್ಟೊಂದು ಸಿಸಿ ಕ್ಯಾಮರಾ ಅಳವಡಿಸುವ ಅಗತ್ಯವೇನಿತ್ತು ಎಂದು ಆತ ಕೇಳಿದ್ದಾನೆ. ಈತನ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಪೋಸ್ಟ್ ನೋಡಿದ ಅನೇಕರು ಹಲವು ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: 17 ಲಕ್ಷದ ಚಿನ್ನದ ಪೆಂಡೆಂಟ್‌ ನುಂಗಿದ ಕಳ್ಳ, ಬಾತ್‌ರೂಮ್‌ನ ಹೊರಗಡೆ ಕಾಯುತ್ತಾ ನಿಂತ ಪೊಲೀಸ್‌!

37 ವರ್ಷದ ಜೇಮ್ಸ್ ಪೌಲ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಅವರು ತಮ್ಮ ಮನೆಗೆ ಬೀಗ ಹಾಕಿ ತಮ್ಮ ಪತ್ನಿಯೊಂದಿಗೆ ಮಗಳನ್ನು ನೋಡುವುದಕ್ಕಾಗಿ ಮಧುರೈಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮನೆಯಿಂದ ಹೊರಡುವ ವೇಳೆ ಅವರು ಸಿಸಿಟಿವಿ ಕೆಲಸ ಮಾಡುತ್ತಿದೆ ಎಂಬುದನ್ನು ಮೊಬೈಲ್ ಮೂಲಕ ಗಮನಿಸಿದ್ದಾರೆ. ಆದರೆ ಮರುದಿನ ಮನೆಯ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಏನೂ ಆಗಿದೆ ಎಂಬ ಅನುಮಾನದಲ್ಲಿ ಅವರು ಪಕ್ಕದ ಮನೆಯವರಿಗೆ ಹೋಗಿ ನೋಡುವಂತೆ ಹೇಳಿದ್ದಾರೆ. ಅದರಂತೆ ಪಕ್ಕದ ಮನೆಯವರು ಅಲ್ಲಿಗೆ ಹೋಗಿ ನೋಡಿದಾಗ ಮನೆಯ ಮುಂದಿನ ಬಾಗಿಲು ಒಡೆದಿರುವುದು ಕಂಡು ಬಂದಿದೆ. ಕೂಡಲೇ ಮಧುರೈನಿಂದ ವಾಪಸ್ ಬಂದ ಅವರು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪರ್ಸ್‌ನಲ್ಲಿ ಇಟ್ಟಿದ್ದ 25 ಸಾವಿರ ರೂಪಾಯಿ ಕಳವಾಗಿರುವುದು ಕಂಡು ಬಂದಿದೆ.

ಇದನ್ನೂ ಓದಿ: ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು

ಇಷ್ಟು ಮೊತ್ತದ ಹಣವನ್ನು ಕದ್ದ ನಂತರವೂ ಕಳ್ಳ, ಮನೆಯಲ್ಲಿ ದುಡ್ಡೇ ಇಲ್ಲ ಹೀಗಿದ್ರೂ ಸಿಸಿ ಕ್ಯಾಮರಾ ಏಕೆ ಹಾಕಿದ್ದೀರಾ ಎಂದು ನೋಟ್ ಬರೆದಿಟ್ಟು ಹೋಗಿದ್ದು ಅಚ್ಚರಿ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೆಟ್ಟೈ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಪೊಲೀಸರು ಹೋಗಿ ನೋಡಿದಾಗ ಕಳ್ಳ ಬರೆದಿಟ್ಟ ಈ ಪತ್ರ ಸಿಕ್ಕಿದೆ. ಈ ಪತ್ರವನ್ನು ವಶಪಡಿಸಿಕೊಂಡ ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.