Female DSP steals Money: ಭೋಪಾಲ್‌ನಲ್ಲಿ, ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸ್ನೇಹಿತೆಯ ಮನೆಯಿಂದಲೇ ₹2 ಲಕ್ಷ ನಗದು ಮತ್ತು ಮೊಬೈಲ್ ಫೋನ್ ಕದ್ದ ಪರಾರಿಯಾಗಿದ್ದಾರೆ. ಅವರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಾಗಿದೆ.
ಸ್ನೇಹಿತೆಯ ಮನೆಯಲ್ಲಿ ಕಳ್ಳತನ ಮಾಡಿದ ಮಹಿಳಾ ಡಿಎಸ್‌ಪಿ
ಭೋಪಾಲ್: ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೇ ಕಳ್ಳತನವೆಸಗಿ ಪರಾರಿಯಾಗಿರುವ ವಿಚಿತ್ರ ಹಾಗೂ ನಾಚಿಕೆಗೇಡಿನ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದ್ದು, ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿದೆ. ಮಧ್ಯಪ್ರದೇಶ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಡೆಪ್ಯೂಟಿ ಸೂಪರಿಟೆಂಡೆಂಟ್ ಪೊಲೀಸ್ ಆಗಿರುವ ಕಲ್ಪನಾ ರಘುವಂಶಿ ಎಂಬುವವರೇ ಹೀಗೆ ಕಳ್ಳತನವೆಸಗಿ ಪರಾರಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿ. ಇವರು ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರೀಗ ತಮ್ಮ ಸ್ನೇಹಿತೆಯ ಮನೆಯಿಂದಲೇ 2 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಕದ್ದಿರುವ ಆರೋಪ ಎದುರಿಸುತ್ತಿದ್ದಾರೆ.
ಸಿಸಿಟಿವಿ ಹಿರಿಯ ಪೊಲೀಸ್ ಅಧಿಕಾರಿಯ ಕೃತ್ಯ ಸೆರೆ
ಭೋಪಾಲ್‌ನ ಜಹಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಕಲ್ಪನಾ ರಘುವಂಶಿ ಅವರ ಸ್ನೇಹಿತೆ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನಲ್ಲಿ ಮಹಿಳೆ ತಾನು ಮೊಬೈಲ್ ಫೋನ್ ಚಾರ್ಜ್‌ಗೆ ಇಟ್ಟು ಸ್ನಾನಕ್ಕೆ ಹೋಗಿದ್ದಾಗ ಡಿಎಸ್‌ಪಿ ಕಲ್ಪನಾ ರಘುವಂಶಿ ತಮ್ಮ ಮನೆಗೆ ನುಗ್ಗಿ ಹಣ ಹಾಗೂ ಚಾರ್ಜ್‌ಗೆ ಇಟ್ಟಿದ್ದ ಫೋನ್ ಸೇರಿದಂತೆ ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿದ್ದ ಫೋನನ್ನು ಕದ್ದುಕೊಂಡು ಹೋಗಿದ್ದಾರೆ. ಸ್ನಾನ ಮಾಡಿ ವಾಪಸ್ ಬಂದು ನೋಡಿದಾಗ ಫೋನ್ ಹಾಗೂ ಹಣ ಎರಡು ನಾಪತ್ತೆಯಾಗಿದೆ. ನಂತರ ಅವರು ಮನೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಅದರಲ್ಲಿ ಡಿಎಸ್‌ಪಿ ರಘುವಂಶಿ ಅವರು ಮನೆಗೆ ಬಂದು ಹೋಗಿರುವ ದೃಶ್ಯ ರೆಕಾರ್ಡ್ ಆಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
ಸಿಸಿಟಿವಿ ದೃಶ್ಯ ಆಧರಿಸಿ ಅಧಿಕಾರಿ ವಿರುದ್ಧ ಎಫ್‌ಐಆರ್, ಅಧಿಕಾರಿ ಪರಾರಿ:
ಡಿಎಸ್‌ಪಿ ಕಲ್ಪನಾ ಅವರು ನೋಟಿನ ಬಂಡಲ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಹೋಗುತ್ತಿರುವ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಕೂಡಲೇ ಅವರು ಪೊಲೀಸರನ್ನು ಸಂಪರ್ಕಿಸಿ ಡಿಎಸ್‌ಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಕಲ್ಪನಾ ರಘುವಂಶಿ ವಿರುದ್ಧ ಕಳ್ಳತನದ ಕೇಸ್ ದಾಖಲಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅಧಿಕಾರಿ ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಅಧಿಕಾರಿ ಬಿಟ್ಟು ಶರ್ಮಾ ಅವರು ಮಾತನಾಡಿದ್ದು, ದೂರುದಾರ ಮಹಿಳೆಯ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಫೋನ್ ಆರೋಪಿ ಅಧಿಕಾರಿಯ ಮನೆಯಲ್ಲಿ ಇತ್ತು. ಹಾಗೂ ಘಟನೆ ನಡೆದ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಇರುವುದು ಕಾಣುತ್ತಿದೆ. ಆದರೆ ಅವರು ಕದ್ದ ಎರಡು ಲಕ್ಷ ರೂಪಾಯಿ ಎಲ್ಲೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಬಳಿಕ ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿಯಿಂದ ಕಳ್ಳತನದ ಆರೋಪಿಯಾಗಿರುವ ಅಧಿಕಾರಿ ಕಲ್ಪನಾ ರಘುವಂಶಿಗೆ ಇಲಾಖಾ ನೋಟೀಸ್ ನೀಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮದ ಪ್ರಕ್ರಿಯೆ ನಡೆಯುತ್ತಿದೆ. ಈ ಘಟನೆಯು ಪೊಲೀಸ್ ಇಲಾಖೆಗೆ ಆಘಾತ ನೀಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆಂತರಿಕ ಮುಜುಗರಕ್ಕೆ ಕಾರಣವಾಗಿದೆ. ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಕಠಿಣ ಮತ್ತು ಪಾರದರ್ಶಕ ತನಿಖೆಗೆ ಕರೆ ನೀಡಿದ್ದು, ಯಾವುದೇ ಅಧಿಕಾರಿಯನ್ನು ಹೊಣೆಗಾರಿಕೆಯಿಂದ ರಕ್ಷಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಪಘಾತದ ನಂತರ ಸಾರಿ ಕೇಳಿದ್ರು ಬಿಡದೇ ಬೈಕ್ ಸವಾರರ ಕಾರಿನಲ್ಲಿ ಚೇಸ್ ಮಾಡಿ ಕೊಂದ ದಂಪತಿ
ಇದನ್ನೂ ಓದಿ: ಎಐನಿಂದ ಬದುಕಿಗೆ ಬಿತ್ತು ಕತ್ತರಿ: ರಾತ್ರಿ ಬೆಳಗಾಗುವುದರೊಳಗೆ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ಅಮೇಜಾನ್
