ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

ಆರ್‌ಎಸ್‌ಎಸ್ ಗೀತೆ ಹಾಡಿದ ಶಾಲಾ ಮಕ್ಕಳು: ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ತಿರುವನಂತಪುರ: ಕೇರಳದ ಎರ್ನಾಕುಲಂನಿಂದ ಬೆಂಗಳೂರಿಗೆ ಹೊಸದಾಗಿ ಉದ್ಘಾಟನೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಂದು ಕೇರಳ ಸರ್ಕಾರ ತನಿಖೆ ಆದೇಶಿಸಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳದ ಸಾರ್ವಜನಿಕ ಶಿಕ್ಷಣ ಸಚಿವ ವಿ ಶಿವಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಚಿವ ಶಿವಕುಟ್ಟಿ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಈ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಉಲ್ಲೇಖಿಸಲಾಗಿದೆ.

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಉದ್ಘಾಟನೆ ವೇಳೆ ಘಟನೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ರಾಜಕೀಯಗೊಳಿಸುವುದು ಮತ್ತು ಯಾವುದೇ ನಿರ್ದಿಷ್ಟ ಗುಂಪಿನ ಕೋಮು ಕಾರ್ಯಸೂಚಿಯನ್ನು ಉತ್ತೇಜಿಸಲು ಅವರನ್ನು ಬಳಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಧಿಕೃತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡುವಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ. ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ದೇಶದ ಜಾತ್ಯತೀತ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಸರ್ಕಾರದ್ದು, ಈ ತತ್ವಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ. ಆದರೆ ಹೊಸದಾಗಿ ಉದ್ಘಾಟನೆಗೊಂಡ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಹಾಡನ್ನು ಹಾಡಿರುವುದನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಭಾನುವಾರ ಸಮರ್ಥಿಸಿಕೊಂಡಿದ್ದಾರೆ. ಇದು ಮಕ್ಕಳ ಮುಗ್ಧ ಆಚರಣೆಯ ಭಾಗವಾಗಿತ್ತು ಎಂದು ಅವರು ತ್ರಿಶೂರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರಿಗೆ ಆ ಹಾಡನ್ನು ಹಾಡಬೇಕೆಂದು ಅನಿಸಿತು ಮತ್ತು ಅವರು ಹಾಗೆಯೇ ಮಾಡಿದರು. ಹಾಗಂತ ಹಾಡಲೇಬಾರದು ಅನ್ನುವುದಕ್ಕೆ ಅದೇನು ತೀವ್ರವಾದಿ ಹಾಡಲ್ಲ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದರು.

ಹೊಸದಾಗಿ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಆರ್‌ಎಸ್‌ಎಸ್ ಹಾಡನ್ನು ಹಾಡಿದ ಒಂದು ದಿನದ ನಂತರ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳು ವೈರಲ್ ಆಗಿ ತೀವ್ರ ಪರ ವಿರೋಧ ಚರ್ಚೆಗಳು ಶುರುವಾದ ನಂತರ ಕೇರಳ ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ ಮತ್ತು ಕೇಂದ್ರ ಸಚಿವರು ಇದಕ್ಕೆ ಸಮರ್ಥನೆಯನ್ನು ಮಾಡಿದ್ದಾರೆ.

ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಇದು ಪ್ರತಿಭಟಿಸಲು ಅರ್ಹವಾದ ವಿಚಾರ ಎಂದು ಹೇಳಿದ್ದಾರೆ. ಧಾರ್ಮಿಕ ದ್ವೇಷ ಮತ್ತು ಕೋಮು ವಿಭಜಕ ರಾಜಕೀಯವನ್ನು ನಿರಂತರವಾಗಿ ಹರಡುತ್ತಿದೆ ಎಂದು ಹೇಳಲಾಗುವ ಆರೆಸ್ಸೆಸ್‌ನ ಹಾಡನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸೇರಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ..

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಸಂಸ್ಥೆಯಾದ ರೈಲ್ವೆಯನ್ನು ಸಂಘ ಪರಿವಾರವು ತಮ್ಮ ಕೋಮು ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

ಹಾಗೆಯೇ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಕೂಡ ಇದೇ ರೀತಿ ಮಾತನಾಡಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಆರ್‌ಎಸ್‌ಎಸ್ ಹಾಡನ್ನು ಹಾಡುವಂತೆ ಮಾಡುವುದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ. ಉತ್ತರ ಭಾರತದಲ್ಲಿ ಕಂಡುಬರುವಂತೆ ಕೇರಳದಲ್ಲಿಯೂ ಬಿಜೆಪಿ ವಿಭಜನೆಯ ರಾಜಕೀಯವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ಮಕ್ಕಳು ಆರ್‌ಎಸ್‌ಎಸ್ ಗೀತೆ ಪೋಸ್ಟ್ ಮಾಡಿದ್ದರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ನಂತರ ಭಾನುವಾರ, ದಕ್ಷಿಣ ರೈಲ್ವೆ ಮತ್ತೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿದ್ಯಾರ್ಥಿಗಳು ಹಾಡಿನ ವೀಡಿಯೊವನ್ನು ಅದರ ಇಂಗ್ಲಿಷ್ ಅನುವಾದದೊಂದಿಗೆ ಪೋಸ್ಟ್ ಮಾಡಿದೆ. ಎರ್ನಾಕುಲಂ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನೆಯ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಶಾಲಾ ಗೀತೆಯನ್ನು ಸುಂದರವಾಗಿ ಪ್ರದರ್ಶಿಸಿದರು ಎಂದು ಅದು ಪೋಸ್ಟ್‌ನಲ್ಲಿ ಹೇಳಿದೆ. ಇತ್ತ ಈ ಘಟನೆಗೆ ಸಂಬಂಧಿಸಿದಂತೆ ಶಾಲೆಯೊಂದು ಪ್ರಧಾನಿಗೆ ಪತ್ರ ಬರೆದಿದ್ದು, ನಮ್ಮ ಮಕ್ಕಳು ದೇಶ ಭಕ್ತಿ ಗೀತೆಯನ್ನು ಹಾಡಬಾರದೇ ಎಂದು ಪ್ರಶ್ನೆ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಪೈಶಾಚಿಕ ಕೃತ್ಯ: ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಕಂದನ ಅಪಹರಿಸಿ ಅತ್ಯಾ*ಚಾರ
ಇದನ್ನೂ ಓದಿ:ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ: ಪಾಕಶಾಸ್ತ್ರದಲ್ಲಿ ಪದವಿ ಮಾಡ್ತಿದ್ದ ಆರು ವಿದ್ಯಾರ್ಥಿಗಳ ಬಂಧನ