ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಭಯಾನಕ ಘಟನೆ ನಡೆದಿದೆ. ಅಜ್ಜಿಯ ಪಕ್ಕ ಮಲಗಿದ್ದ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾ*ಚಾರವೆಸಗಲಾಗಿದೆ. ಸೊಳ್ಳೆ ಪರದೆ ಕತ್ತರಿಸಿ ಕೃತ್ಯ ಎಸಗಿದ್ದು, ಮಗು ಚರಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಭಯಾನಕ ಘಟನೆ

ಕೋಲ್ಕತ್ತಾ: ಪಿಜಿ ಓದ್ತಿದ್ದ ವೈದ್ಯ ವಿದ್ಯಾರ್ಥಿನಿಯನ್ನೇ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೇ ಅತ್ಯಾ*ಚಾರವೆಸಗಿ ಕೊಲೆ ಮಾಡಿ ದೇಶದೆಲ್ಲೆಡೆ ಸುದ್ದಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈಗ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಅಜ್ಜಿ ಪಕ್ಕದಲ್ಲೇ ನಿದ್ರಿಸುತ್ತಿದ್ದ 4 ವರ್ಷದ ಪುಟ್ಟ ಬಾಲೆಯ ಮೇಲೆಯೇ ಕಾಮುಕರು ಪೈಶಾಚಿಕ ಕೃತ್ಯವೆಸಗಿದ್ದಾರೆ. ಸೊಳ್ಳೆ ಪರದೆ ಹಾಕಿ ಮಲಗಿಸಿದ್ದ ಮಗುವನ್ನು ಸೊಳ್ಳೆ ಪರದೆಯನ್ನು ಕತ್ತರಿಸಿ ಅಪಹರಿಸಿ ಅತ್ಯಾ*ಚಾರವೆಸಗಲಾಗಿದೆ. ಬಳಿಕ ಮಗುವನ್ನು ಸಮೀಪದ ಚರಂಡಿಗೆ ಎಸೆಯಲಾಗಿದ್ದು, ಚರಂಡಿಯಲ್ಲಿ ಮಗು ಪತ್ತೆಯಾಗಿತ್ತು.

ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಕಂದನನ್ನು ಬಿಡದ ಕಾಮುಕರು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ ರೈಲು ನಿಲ್ದಾಣದ ಸಮೀಪ ಇರುವ ಶೆಡ್ಡೊಂದರಲ್ಲಿ ಈ ಮಗು ತನ್ನ ಅಜ್ಜ ಹಾಗೂ ಅಜ್ಜಿಯ ಜೊತೆ ವಾಸ ಮಾಡುತ್ತಿತ್ತು. ಆದರೆ ಮಲಗಿದ್ದ ಮಗು ನಾಪತ್ತೆಯಾದ ನಂತರ ಹುಡುಕಾಟ ನಡೆಸಿದಾಗ ಸಮೀಪದ ಚರಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ. ಘಟನೆಯಿಂದಾಗಿ ಆ ಪ್ರದೇಶದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ.

ಬಂಜಾರ ಸಮುದಾಯಕ್ಕೆ ಸೇರಿದ ಈ ಮಗು ಅಜ್ಜ ಅಜ್ಜಿಯ ಜೊತೆ ವಾಸ ಮಾಡ್ತಾ ಇತ್ತು. ಸೊಳ್ಳೆ ಪರದೆ ಹಾಕಿ ಮಗುವನ್ನು ಮಲಗಿಸಲಾಗಿತ್ತು. ಆದರೆ ಕಾಮುಕರು ಸೊಳ್ಳೆ ಪರದೆಯನ್ನು ಕತ್ತರಿಸಿ ಮಗುವನ್ನು ಎತ್ತಿಕೊಂಡು ಹೋಗಿ ದುಷ್ಕೃತ್ಯ ಮೆರೆದಿದ್ದಾರೆ ಎಂದು ಮಗುವಿನ ಕುಟುಂಬದವರು ಹೇಳಿದ್ದಾರೆ.

ಚರಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಗು ಪತ್ತೆ

ಬೆಳಿಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿರಬಹುದು. ಅವಳು ನನ್ನ ಜೊತೆ ಮಲಗಿದ್ದಳು. ಯಾರೋ ಅವಳನ್ನು ಕರೆದುಕೊಂಡು ಹೋಗಿದ್ದಾರೆ. ಎಂದು ಬಾಲಕಿಯ ಅಜ್ಜಿ ಹರಿದ ಸೊಳ್ಳೆ ಪರದೆಯನ್ನು ಕೈಯಲ್ಲಿ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾರೆ ಎಂದು ಸ್ಥಳೀಯ ಸುದ್ದಿವಾಹಿನಿಯೊಂದು ವರದಿ ಮಾಡಿತ್ತು. ಆಕೆಯನ್ನು ಯಾರೋ ತೆಗೆದುಕೊಂಡು ಹೋದಾಗ ನನಗೆ ಗೊತ್ತಾಗಲಿಲ್ಲ. ಅವಳನ್ನು ಯಾವಾಗ ಕರೆದುಕೊಂಡು ಹೋದರು ಅಂತ ನನಗೆ ತಿಳಿದಿರಲಿಲ್ಲ. ಅವಳನ್ನು ಕರೆದುಕೊಂಡು ಹೋದವರು ಯಾರೆಂದು ನನಗೆ ತಿಳಿದಿಲ್ಲ. ಅವರು ಸೊಳ್ಳೆ ಪರದೆ ಕತ್ತರಿಸಿ ಆಕೆಯನ್ನು ತೆಗೆದುಕೊಂಡು ಹೋದರು. ನಂತರ ಅವಳು ಬೆತ್ತಲೆಯಾಗಿ ಕಂಡುಬಂದಳು ಎಂದು ಮಗುವಿನ ಅಜ್ಜಿ ಕಣ್ಣೀರನ್ನು ತಡೆದುಕೊಳ್ಳಲು ಹೆಣಗಾಡುತ್ತಾ ಹೇಳಿದ್ದಾರೆ.

ತಮ್ಮ ಮನೆಯನ್ನು ಧ್ವಂಸ ಮಾಡಿದಾಗಿನಿಂದ ನಾವು ಬೀದಿಯಲ್ಲಿ ಬದುಕುತ್ತಿದ್ದೇವೆ. ನಾವು ಎಲ್ಲಿಗೆ ಹೋಗೋದು ನಮಗೆ ಯಾವುದೇ ಮನೆ ಇಲ್ಲ ಎಂದು ಅಜ್ಜಿ ಗೋಳಾಡಿದ್ದಾರೆ. ಘಟನೆಯ ನಂತರ ಮಗು ತಾರಕೇಶ್ವರ ರೈಲ್ವೆಯ ಚರಂಡಿಯಲ್ಲಿ ಪತ್ತೆಯಾಗಿದ್ದು, ಆಕೆಯ ದೇಹದಲ್ಲೆಲ್ಲಾ ರಕ್ತದ ಕಲೆಗಳಿದ್ದವು. ಕೂಡಲೇ ಆಕೆಯನ್ನು ತಾರಕೇಶ್ವರ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೋಸ್ಕೋ ಸೇರಿದಂತೆ ಸಂಬಂಧಿತ ಕಾಯ್ದೆಗಳ ಅಡಿ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದ್ದಾರೆ. 4 ವರ್ಷದ ಕಂದನನ್ನು ತಾರಕೇಶ್ವರದ ಬಳಿ ಅತ್ಯಾ*ಚಾರ ಮಾಡಲಾಗಿದೆ. ಕುಟುಂಬದವರು ಪೊಲೀಸ್ ಠಾಣೆಗೆ ಹೋದರು ಆದರೆ ಕೂಡಲೇ ಕೇಸು ದಾಖಲು ಮಾಡಲಿಲ್ಲ. ತಾರಕೇಶ್ವರ ಪೊಲೀಸರು ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇದು ಮಮತಾ ಬ್ಯಾನರ್ಜಿಯವರ ನಿಜವಾದ ಮುಖ. ಈ ಘಟನೆಯಿಂದ ಒಂದು ಮಗುವಿನ ಬದುಕು ಸ್ತಬ್ಧವಾಗಿದೆ. ಆದರೂ ಪೊಲೀಸರು ರಾಜ್ಯ ಸರ್ಕಾರವನ್ನು ರಕ್ಷಿಸುತ್ತಿದ್ದಾರೆ. ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಸುವೇಂದು ಅಧಿಕಾರಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ: ಪಾಕಶಾಸ್ತ್ರದಲ್ಲಿ ಪದವಿ ಮಾಡ್ತಿದ್ದ ಆರು ವಿದ್ಯಾರ್ಥಿಗಳ ಬಂಧನ

ಇದನ್ನೂ ಓದಿ: ಜಲಪಾತ ನೋಡಲು ಹೋಗಿ 19, 20ರ ಹರೆಯದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು