ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ವೇಯಲ್ಲಿ, ಕಾರಿನಲ್ಲಿದ್ದ ದಂಪತಿಗಳ ಖಾಸಗಿ ಕ್ಷಣವನ್ನು ಸಿಸಿಟಿವಿಯಲ್ಲಿ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ. ಎಟಿಎಂಎಸ್ ವ್ಯವಸ್ಥಾಪಕನೇ ಈ ಕೃತ್ಯ ಎಸಗಿದ್ದು, ಹಣ ಸುಲಿಗೆ ಮಾಡಿ ವಿಡಿಯೋವನ್ನು ವೈರಲ್ ಮಾಡಿದ್ದಾನೆ. 

ಲಕ್ನೋ (ಡಿ.9): ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಯಾಣಿಸುತ್ತಿದ್ದರೆ, ಜಾಗರೂಕರಾಗಿರಿ. ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ನವವಿವಾಹಿತ ದಂಪತಿಗಳ ಖಾಸಗಿ ವೀಡಿಯೊ ರೆಕಾರ್ಡ್‌ ಆಗಿದೆ. ಕಾರ್‌ನಲ್ಲಿದ್ದ ದಂಪತಿಗಳು ಟೋಲ್ ಪ್ಲಾಜಾದ ಮುಂದೆ ಕಾರನ್ನು ನಿಲ್ಲಿಸಿ ಪ್ರಣಯ ಆರಂಭಿಸಿದರು. ಎಕ್ಸ್‌ಪ್ರೆಸ್‌ವೇಯ ಸಂಚಾರ ವಿರೋಧಿ ನಿರ್ವಹಣಾ ವ್ಯವಸ್ಥೆಯ (ATMS) ಸಹಾಯಕ ವ್ಯವಸ್ಥಾಪಕ ಸಿಸಿಟಿವಿಯಲ್ಲಿ ದಾಖಲಾದ ಈ ಖಾಸಗಿ ಕ್ಷಣದ ರೆಕಾರ್ಡ್‌ ಬಳಸಿ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ.

ಅವರಿದ್ದ ಸ್ಥಳಕ್ಕೆ ಬಂದು ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ ಎನ್ನಲಾಗಿದೆ. ವೀಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಸಿ 32,000 ರೂಪಾಯಿಗಳನ್ನು ಸುಲಿಗೆ ಮಾಡಿದ್ದಲ್ಲದೆ, ಬಳಿಕ ಆ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಸಾರ ಕೂಡ ಮಾಡಿದ್ದಾನೆ. ಹಾಗಂತ ಈ ದಂಪತಿಗಳು ಅವನಿಂದ ಸಂತ್ರಸ್ಥರಾದ ಮೊದಲ ವ್ಯಕ್ತಿಗಳಲ್ಲ.

ಐದರಿಂದ ಆರು ಸಂತ್ರಸ್ಥರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸುಲ್ತಾನ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಎಕ್ಸ್‌ಪ್ರೆಸ್‌ವೇ ಅಧಿಕಾರಿಗಳಿಗೆ ಲಿಖಿತ ದೂರುಗಳನ್ನು ಸಲ್ಲಿಸಿದ್ದು, ದಾಖಲೆಗಳನ್ನೂ ಒದಗಿಸಿದ್ದಾರೆ. ಎಟಿಎಂಎಸ್‌ ವ್ಯವಸ್ಥಾಪಕ ಅಶುತೋಷ್ ಸರ್ಕಾರ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಎಂದಿದ್ದು, ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್‌ ಮಾಡಿದ್ದಲ್ಲದೆ, ಬಳಿಕ ಅವರನ್ನು ಸಂಪರ್ಕಿಸಿ ಹಣ ಸುಲಿಗೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಟೋಲ್ ಪ್ಲಾಜಾ ಸುತ್ತಮುತ್ತಲಿನ ಮೂರು ಹಳ್ಳಿಗಳ ಹಲವಾರು ಮಹಿಳೆಯರು ಮತ್ತು ಹುಡುಗಿಯರ ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯ ಹಲಿಯಾಪುರ ಟೋಲ್ ಪ್ಲಾಜಾದಲ್ಲಿ ಈ ಘಟನೆ ಸಂಭವಿಸಿದೆ.

ಎಫ್‌ಐಆರ್ ದಾಖಲಾಗುವ ಮೊದಲೇ ಟೋಲ್ ಮ್ಯಾನೇಜರ್ ವಜಾ!

ಮಾಧ್ಯಮಗಳಲ್ಲಿ ಘಟನೆ ವರದಿ ಆದ ನಂತರ 'ಆಂಟಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್' (ಎಟಿಎಂಎಸ್) ಕೆಲಸವನ್ನು ನೋಡಿಕೊಳ್ಳುತ್ತಿದ್ದ ಗುತ್ತಿಗೆ ಕಂಪನಿಯು ಬ್ಲ್ಯಾಕ್‌ಮೇಲರ್ ಡೆಪ್ಯುಟಿ ಮ್ಯಾನೇಜರ್ ಅಶುತೋಷ್ ಸರ್ಕಾರ್ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಆದರೆ ಅದರಲ್ಲೂ ಕಂಪನಿ ಡ್ರಾಮಾ ಮಾಡಿದೆ. ಆರೋಪಿ ಅಶುತೋಷ್ ಸರ್ಕಾರ್‌ನನ್ನು ನವೆಂಬರ್‌ 30 ರಂದು ವಜಾ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಆದರೆ, ಸಂತ್ರಸ್ಥರು ಸಿಎಂ ಯೋಗಿ, ಸುಲ್ತಾನ್‌ಪುರ ಡಿಎಂ ಮತ್ತು ಎಸ್‌ಪಿಗೆ ದೂರು ನೀಡಿದ್ದೇ ಡಿಸೆಂಬರ್‌ 2 ರಂದು.

ಅಶುತೋಷ್ ಸೂಪರ್-ವೇವ್ ಕಮ್ಯುನಿಕೇಷನ್ಸ್ ಮತ್ತು ಇನ್ಫ್ರಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (SCIPL) ನ ಉದ್ಯೋಗಿ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಪ್ಯಾಕೇಜ್ 3 ರ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಕಂಪನಿಯು ಅವರ ಬಳಿ ಖಾಸಗಿ ವೀಡಿಯೊ ಇದ್ದು ಅದನ್ನು ಸೋರಿಕೆ ಮಾಡಿದೆ ಎಂದು ಆರೋಪಿಸಿದೆ.

ಆರೋಪಿ ಸಹಾಯಕ ವ್ಯವಸ್ಥಾಪಕ ಅಶುತೋಷ್ ಸರ್ಕಾರ್ ಸುದ್ದಿಗಾರರೊಂದಿಗೆ ಮಾತನಾಡಿ, "ನನ್ನ ಸ್ವಂತ ಇಲಾಖೆಯ ಸಹೋದ್ಯೋಗಿಗಳು ನಾನು ಇಲ್ಲದ ಸಮಯದಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ ನಂತರ ಅವುಗಳನ್ನು ವೈರಲ್ ಮಾಡಿದರು. ಇದೆಲ್ಲವೂ ನನ್ನನ್ನು ತೆಗೆದುಹಾಕುವ ಪಿತೂರಿಯ ಭಾಗವಾಗಿತ್ತು. ಕೆಲವು ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ' ಎಂದು ಹೇಳಿದ್ದಾರೆ.

ಕಾರಿನಲ್ಲಿದ್ದ ದಂಪತಿಗಳ ಮೇಲೆ ಫೋಕಸ್‌ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ, ಭದ್ರತಾ ನಿಯಮಗಳ ಪ್ರಕಾರ ಅದು ಅಗತ್ಯವಾಗಿತ್ತು ಎಂದು ಅವರು ಹೇಳಿದರು.