ನವದೆಹಲಿ (ಜು. 04): ಯಾರು ಏನೇ ಹೇಳಲಿ ನೆರೆಹೊರೆಯವರು ಕೆಣಕಿದಾಗ ಉತ್ತರ ಕೊಡುವ ಭಾರತದ ರೀತಿನೀತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ವಿಪರೀತ ಬದಲಾವಣೆಯಂತೂ ಸ್ಪಷ್ಟವಾಗಿ ಕಾಣುತ್ತಿದೆ. ಯುದ್ಧ ನಮಗೂ ಬೇಡ, ಆದರೆ ಯುದ್ಧ ಮಾಡುವುದೇ ಆದರೆ ಹಿಂದೆಗೆಯೋದಿಲ್ಲ ಎನ್ನುವ ಮೋದಿ ನಿಲುವು ಇಂದಿರಾ ಗಾಂಧಿ ನಂತರದ ಭಾರತಕ್ಕೆ ಹೊಸತು.

"

ಜೂನ್‌ 15ರ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾದ ಸುದ್ದಿ ಹೊರಬಂದ ನಂತರ ಸೇನಾಬಲ, ಆರ್ಥಿಕ ಬಲ, ಅಂತಾರಾಷ್ಟ್ರೀಯ ಪ್ರಭಾವದಲ್ಲಿ ನಮಗಿಂತ ಒಂದು ಹೆಜ್ಜೆ ಮುಂದೆ ಇರುವ ಚೀನಿ ಸರ್ಕಾರ ಹಾಗೂ ಸೇನೆಯ ಎದುರು ಭಾರತ ಮಂಕಾಗಬಹುದು ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಮೂರು ದಿನಗಳಲ್ಲಿ ಮೋದಿ ತೆಗೆದುಕೊಂಡ ಮೂರು ನಿರ್ಣಯಗಳು ಬದಲಾಗುತ್ತಿರುವ ಭಾರತದ ನಿಲುವನ್ನು ತೋರಿಸುತ್ತಿವೆ. ಮೊದಲನೆಯದು, 59 ಚೀನಿ ಆ್ಯಪ್‌ಗಳ ನಿಷೇಧ. ಎರಡನೆಯದು, ಹಾಂಗ್‌ಕಾಂಗ್‌ನಲ್ಲಿ ಚೀನೀಯರು ತಂದ ಕಾನೂನಿಗೆ ವಿಶ್ವಸಂಸ್ಥೆಯಲ್ಲಿ ವಿರೋಧ.

ಮೂರನೆಯದು, ಗಡಿ ರೇಖೆ ಹತ್ತಿರ ನಿಂತು ಸ್ವಯಂ ಪ್ರಧಾನಿಯೇ ಚೀನಾಕ್ಕೆ ನೀಡಿರುವ ಎಚ್ಚರಿಕೆ. ಹಿಂದೆ ಬಹುಕಾಲದವರೆಗೆ ಯುದ್ಧದ ಆತಂಕ ಮತ್ತು ಅಂತಾರಾಷ್ಟ್ರೀಯ ಒತ್ತಡದ ಕಾರಣದಿಂದ ಪಾಕಿಸ್ತಾನ ಮತ್ತು ಚೀನಾ ಏನೇ ಮಾಡಿದರೂ ಕೂಡ ಭಾರತ ಸುಮ್ಮನಿರಬೇಕು ಎಂಬ ರೀತಿಯ ದುರ್ಬಲ ಮನಸ್ಥಿತಿಗೆ ನಾವು ಒಗ್ಗಿಕೊಂಡಿದ್ದೆವು. ಆದರೆ ಈಗ ಮೋದಿ ಅಮೆರಿಕ ನಂತರದ ಬಲಿಷ್ಠ ರಾಷ್ಟ್ರ ಚೀನಾಕ್ಕೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುತ್ತಿದ್ದಾರೆ.

ಲಡಾಖ್ ಗಡಿಯಲ್ಲಿ ಮೋದಿ ಅಬ್ಬರ, ಭಾರತ ಮಾತೆಯ ವೈರಿಗಳಿಗೆ ಚಳಿಜ್ವರ

ಲಡಾಖ್‌ ಭೇಟಿಯ ಸಂದೇಶವೇನು?

ಜೂನ್‌ 30ರಂದು ಭಾರತ ಮತ್ತು ಚೀನಾದ ಸೇನಾ ಕಮಾಂಡರ್‌ಗಳ ನಡುವೆ ಸುಮಾರು 12 ತಾಸು ಮಾತುಕತೆ ನಡೆದಿದೆ. ಆದರೆ ಪ್ಯಾಂಗಾಂಗ್‌ ತ್ಸೋ ಮತ್ತು ಗಲ್ವಾನ್‌ ಕಣಿವೆಯಲ್ಲಿ ಏಪ್ರಿಲ್‌ ನಂತರ ಹಿಡಿದಿಟ್ಟುಕೊಂಡಿರುವ ಪ್ರದೇಶಗಳಿಂದ ಹಿಂದೆ ಹೋಗಲು ಚೀನಾ ತಯಾರಿಲ್ಲ. ಚಳಿಗಾಲ ಇನ್ನೂ 5 ತಿಂಗಳು ದೂರವಿದೆ. ಹೀಗಿರುವಾಗ ಭಾರತದ ಮುಂದಿರುವ ಆಯ್ಕೆಗಳು: 1.ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ. ಆದರೆ ಇದಕ್ಕೆ ಚೀನಾ ಸೊಪ್ಪು ಹಾಕುತ್ತಿಲ್ಲ. 2.ಲಿಮಿಟೆಡ್‌ ಆ್ಯಕ್ಷನ್‌, ಅಂದರೆ ನಿರ್ದಿಷ್ಟಪ್ರದೇಶಗಳಲ್ಲಿ ಎಲ್ಲಿ ಚೀನಾ ಒಳಕ್ಕೆ ಬಂದು ಕುಳಿತಿದೆಯೋ ಆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವುದು. ಆದರೆ ಇದು ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಯಾವುದೇ ನಿರ್ಣಯ ತೆಗೆದುಕೊಳ್ಳದೇ ಸುಮ್ಮನೆ ಇರುವುದು ದೇಶದ ಹಿತದೃಷ್ಟಿಯಿಂದ ಕೂಡ ಒಳ್ಳೆಯದಲ್ಲ.

ಹಿಂದೆ 1960ರಲ್ಲಿ ಅಣ್ವಸ್ತ್ರ ಪರೀಕ್ಷೆ ಬಗ್ಗೆ ನಿರ್ಣಯಿಸಲು ಹಿಂಜರಿದಿದ್ದರಿಂದ ಇವತ್ತಿನವರೆಗೂ ನಾವು ನ್ಯೂಕ್ಲಿಯರ್‌ ಪೂರೈಕೆ ರಾಷ್ಟ್ರಗಳಲ್ಲಿ ಸೇರಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಏಕೆ, ಪಾಕಿಸ್ತಾನ 1990 ರಿಂದ ಸತತವಾಗಿ ಗಡಿಯಿಂದ ನುಸುಳುಕೋರರನ್ನು ಕಳುಹಿಸಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದರೂ ನಿರ್ಣಯ ತೆಗೆದುಕೊಳ್ಳಲಾರದೆ ಅನುಭವಿಸಿದ್ದೇ ಹೆಚ್ಚು. ಆದರೆ 2019ರಲ್ಲಿ ಪುಲ್ವಾಮಾ ನಂತರ ನಡೆದ ಬಾಲಾಕೋಟ್‌ ದಾಳಿ ನಾವು ಮೊದಲು ನೀಡಿದ ನೇರ ಉತ್ತರವಾಗಿತ್ತು.

ಚೀನಾ ಗಡಿ ಖ್ಯಾತೆ: ಬೆಳ್ಳಂಬೆಳಗ್ಗೆ ಲಡಾಖ್‌ಗೆ ಬಂದಿಳಿದ ಪ್ರಧಾನಿ ಮೋದಿ..!

ಪಾಕ್‌ಗೆ ಉತ್ತರ ನೀಡಿದರೆ ಯುದ್ಧವೇ ಆಗಿ ಹೋಗಬಹುದು, ಅಂತಾರಾಷ್ಟ್ರೀಯ ಒತ್ತಡ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಈಗ ಚೀನಾದ ಸರದಿ; ಪಾಕ್‌ ಮೇಲೆ ನಡೆಸಿದಂತೆ ಸರ್ಜಿಕಲ್‌ ಸ್ಟೆ್ರೖಕ್‌ ಚೀನಾದ ಮೇಲೆ ಸಾಧ್ಯವಿಲ್ಲ. ಆದರೆ ಚೀನಾ ಆಡುವಂತೆಯೇ ಒತ್ತಡ ಹೇರಿ ಸಾಮರ್ಥ್ಯ ಪ್ರದರ್ಶನಕ್ಕೆ ನಾವು ತಯಾರು ಎಂದು ಮೋದಿ ಲಡಾಖ್‌ಗೆ ಹೋಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನಿಸುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ