ಮತ್ತೆ ನೈಋತ್ಯ ಮಾನ್ಸೂನ್ ಸಕ್ರೀಯಗೊಂಡಿದೆ. ಪರಿಣಾಮ ಸೆಪ್ಟೆಂಬರ್‌ನ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. 19 ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೇಪಾಳ ಘಟನೆ ಬಳಿಕ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ.
ನವದೆಹಲಿ (ಸೆ.02) ಪ್ರಸಕ್ತ ವರ್ಷದಲ್ಲಿ ಹಲವುಡೆ ಭಾರಿ ಮಳೆ ಸುರಿದು ಪ್ರವಾಹ ಸೃಷ್ಟಿಯಾದರೂ ಹಲವು ಕಡೆ ಬರಗಾಲ ಪರಿಸ್ಥಿತಿ ಇದೆ. ದೇಶದ ಮಳೆ ಕೊರತೆ ತೀವ್ರಗೊಳ್ಳುತ್ತಿದೆ. ಸೆಪ್ಟೆಂಬರ್ ಆರಂಭಿಕ ವಾರದಲ್ಲಿ ಮತ್ತೆ ನೈಋತ್ಯ ಮಾನ್ಸೂನ್ ಸಕ್ರೀಯಗೊಂಡಿದೆ. ಪರಿಣಾಮ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದೇಶದ 19 ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅತೀವ ಮುನ್ನಚ್ಚೆರಿಕೆ ವಹಿಸಲು ಸೂಚನೆ ನೀಡಲಾಗಿದೆ. ನೇಪಾಳದ ದಿಢೀರ್ ಪ್ರವಾಹದಿಂದ ಸೃಷ್ಟಿಯಾದ ಪರಿಸ್ಥಿತಿಗಳಿಂದ ಇದೀಗ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಆಯಾ ರಾಜ್ಯಗಳು ತ್ವರಿತ ಕ್ರಮಕ್ಕೆ ಮುಂದಾಗಿದೆ.
ಹರಿಯಾಣದಿಂದ ಈಶಾನ್ಯದವರೆಗೆ ಮಳೆ
ಹವಾಮಾನ ಇಲಾಖೆ 19 ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ. ಹರಿಯಾಣದಿಂದ ಈಶಾನ್ಯದ ವರೆಗೆ ಭಾರಿ ಮಳೆಯಾಗಲಿದೆ ಎಂದಿದೆ. ದೇಶದ ಬಹುತೇಕ ಭಾಗದಲ್ಲಿ ನೈಋತ್ಯ ಮಾನ್ಸೂನ್ ಸಕ್ರೀಯಗೊಂಡ ಪರಿಣಾಮ ಛತ್ತೀಸ್‌ಗಢ, ಒಡಿಶಾ, ಬಿಹಾರ, ಜಾರ್ಖಂಡ್ , ಮಧ್ಯಪ್ರದೇಶದಲ್ಲಿ ಸೇರಿದಂತೆ 19 ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಸೆಪ್ಟೆಂಬರ್ 7ವರೆಗೆ ಎರಡು ರಾಜ್ಯಗಳಲ್ಲಿ ಭಾರಿ ಮಳೆ
ಸೆಪ್ಟೆಂಬರ್ 7ರ ವರೆಗೆ ಹಿಮಾಚಲ ಪ್ರದೇಶ ಹಾಗೂ ಹರಿಯಾಣದಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಈ ಪೈಕಿ ಬೆಟ್ಟ ಗುಡ್ಡಗಳಿಂದ ಕೂಡಿರುವ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮುನ್ಸೂಚನೆ ಪ್ರವಾಹ ಆತಂಕ ಸೃಷ್ಟಿಸಿದೆ. ಹಿಮಾಲಯದ ತಪ್ಪಲಿನ ರಾಜ್ಯ ಈಗಾಗಲೇ ದಿಢೀರ್ ಪ್ರವಾಹ, ಭೂಕುಸಿತದಿಂದ ಕಂಗಾಲಾಗಿದೆ. ನೇಪಾಳದಲ್ಲಿ ನಡೆದ ಪ್ರವಾಹ ಪರಿಸ್ಥಿತಿಗಳ ನಡುವೆ ಹಿಮಾಚಲ ಪ್ರದೇಶದಲ್ಲಿನ ಮಳೆ ಅಲರ್ಟ್ ಮತ್ತೆ ಆತಂಕ ಹೆಚ್ಚಿಸಿದೆ.
ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂನಲ್ಲೂ ಭಾರಿ ಮಳೆ ಸೂಚನೆ ನೀಡಲಾಗಿದೆ. ಇನ್ನು ಈಶಾನ್ಯ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ, ಅಸ್ಸಾಂ ಹಾಗೂ ಮೇಘಾಲದಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ಅಸ್ಸಾಂನಲ್ಲಿ ಸೃಷ್ಟಿಯಾದ ಪ್ರವಾಹ ಪರಿಸ್ಥಿತಿಂದ ರಾಜ್ಯ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೆ ನೈಋತ್ಯ ಮುಂಗಾರು ಸಕ್ರಿಯದಿಂದ ಮತ್ತೆ ಮಳೆಯಾಗಲಿದೆ.
ಕರ್ನಾಟಕ ಕರಾವಳಿಯಲ್ಲಿ ಮಳೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಮತ್ತೆ ಉತ್ತಮ ಮಳೆಯಾಗಲಿದೆ ಎಂದಿದೆ. ಇದೇ ವೇಳೆ ಲಕ್ಷದ್ವೀಪ, ಕೇರಳದಲ್ಲೂ ಮಳೆಯಾಗಲಿದೆ.


