ರೆಸ್ಟೋರೆಂಟ್‌ನಲ್ಲಿ ಉಚಿತ ನೀರು ನೀಡಲು ನಿರಾಕರಿಸಿದ್ದಕ್ಕಾಗಿ ಗ್ರಾಹಕರೊಬ್ಬರು ಹೊಟೇಲ್ ವಿರುದ್ಧ ಕೇಸು ಹಾಕಿ ಗೆದ್ದಿದ್ದಾರೆ. ಹೊಟೇಲ್‌ನಲ್ಲಿ ಉಚಿತ ನೀರು ನೀಡುವುದು ಕಡ್ಡಾಯವೇ ಕಾನೂನು ಏನಿದೆ ಇಲ್ಲಿದೆ ಡಿಟೇಲ್ ಸ್ಟೋರಿ..

ಇತ್ತೀಚೆಗೆ ಬಹುತೇಕ ಪ್ರತಿಷ್ಠಿತ ರೆಸ್ಟೋರೆಂಟ್‌ಗಳಿಗೆ ಹೋದರೆ ಅಲ್ಲಿ ನಿಮಗೆ ಉಚಿತವಾಗಿ ನೀರು ಸಿಗುವುದಿಲ್ಲ, ನೀರು ಬೇಕಾದರೆ ನೀವು ಹೆಚ್ಚುವರಿ ಹಣ ಪಾವತಿ ಮಾಡಬೇಕು. ಮೊದಲೆಲ್ಲಾ ಹೊಟೇಲ್‌ಗಳಿಗೆ ಹೋದಾಗ ಕನಿಷ್ಠ ನೀರನ್ನಾದರು ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ ಪ್ರತಿಷ್ಠಿತ ಹೊಟೇಲ್‌ಗಳು ನಿಮಗೆ ನೀರನ್ನೂ ಕೂಡ ಫ್ರಿಯಾಗಿ ನೀಡಲ್ಲ. ಹಾಗೆಯೇ ಇಲ್ಲೊಂದು ಕಡೆ ಉಚಿತವಾಗಿ ನೀರು ನೀಡದೇ ನೀರಿಗೆ 40 ರೂಪಾಯಿ ಹಣ ಪಾವತಿಸಿಕೊಂಡ ಹೊಟೇಲ್ ವಿರುದ್ಧ ಕೇಸು ಹಾಕಿದ ಗ್ರಾಹಕರೊಬ್ಬರು ಪ್ರಕರಣದಲ್ಲಿ ಗೆಲುವು ಸಾಧಿಸಿದ್ದಾರೆ.

ದೆಹಲಿ ಎನ್‌ಸಿಆರ್‌ನ ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 85 ರಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಶರ್ಮಾ ಹಾಗೂ ಅವರ ಸ್ನೇಹಿತರು ರಾತ್ರಿ 10. 30ಕ್ಕೆ ರಾತ್ರಿಯ ಭೋಜನಕ್ಕಾಗಿ ಈ ಹೊಟೇಲ್‌ಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರು ಹೊಟೇಲ್ ಮಾಣಿ ಬಳಿ ಉಚಿತ ನೀರು ನೀಡುವಂತೆ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಕುಡಿಯುವ ನೀರು ಬೇಕಾದರೆ ಬಾಟಲ್ ನೀರನ್ನು ಖರೀದಿಸುವಂತೆ ಹೇಳಿದ ರೆಸ್ಟೋರೆಂಟ್ ಸಿಬ್ಬಂದಿ ಉಚಿತ ನೀರು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಆದರೆ ಕಾನೂನಿನ ಅರಿವಿದ್ದ ಶರ್ಮಾ ಅವರು, ಹೊಟೇಲ್ ಸಿಬ್ಬಂದಿಗೆ, ಭಾರತೀಯ ಕಾನೂನುಗಳ ಬಗ್ಗೆ ತಮಗೆ ಅರಿವಿದೆ ಎಂದು ವೇಟರ್‌ಗೆ ಮಾಹಿತಿ ನೀಡಿದರು ಮತ್ತು ಮತ್ತೊಮ್ಮೆ ವೇಟರ್ ಮತ್ತು ವ್ಯವಸ್ಥಾಪಕರಿಗೆ ಬಾಟಲ್ ನೀರನ್ನು ಖರೀದಿಸಲು ಒತ್ತಾಯಿಸುವ ಬದಲು ಉಚಿತವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸುವಂತೆ ಕೇಳಿಕೊಂಡರು. ಹೀಗೆ ಗ್ರಾಹಕರಿಗೆ ಉಚಿತವಾಗಿ ನೀರು ಕೊಡದೇ ನೀರನ್ನು ಖರೀದಿಸುವಂತೆ ಒತ್ತಾಯಿಸುವುದು ನ್ಯಾಯಾಲಯಗಳು, ಗ್ರಾಹಕ ಆಯೋಗ ಮತ್ತು ಎಫ್‌ಎಸ್‌ಎಸ್‌ಎಐ(FSSAI)ಯ ವಿವಿಧ ಮಾರ್ಗಸೂಚಿಗಳ ಪ್ರಕಾರ ಕಾನೂನುಬಾಹಿರ ಎಂದು ಅವರು ಹೇಳಿದರು.

ಇದನ್ನೂ ಓದಿ: ಮಸಾಜ್ ಮಾಡಲು ಬಂದು ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ ಅರ್ಬನ್ ಕಂಪನಿ ಉದ್ಯೋಗಿ

ಹೊಟೇಲ್ ಸಿಬ್ಬಂದಿಯ ಮನವೊಲಿಸುವ ಅವರ ಪ್ರಯತ್ನದ ಹೊರತಾಗಿಯೂ ಅವರಿಗೆ ಹೊಟೇಲ್‌ನವರು ಉಚಿತ ನೀರು ನೀಡಲು ನಿರಾಕರಿಸಿದರು. ತಮ್ಮ ಹಠಕ್ಕೆ ಬದ್ಧರಾದ ಆ ಹೊಟೇಲ್‌ನ ಮ್ಯಾನೇಜರ್ ಮತ್ತು ವೇಟರ್ ಇಬ್ಬರೂ , ಬೇಕಿದ್ದರೆ ತಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಆದರೆ ತಮ್ಮ ನಿಲುವನ್ನು ಮಾತ್ರ ಬದಲಿಸುವುದಿಲ್ಲ ಎಂದು ಹೇಳಿದರು. ಹೀಗಾಗಿ ಶರ್ಮಾ ಅವರು ಕೊನೆಗೆ ತಮಗೆ ಹಾಗೂ ಸ್ನೇಹಿತರಿಗಾಗಿ ಅಲ್ಲಿ ಎರಡು ಬಾಟಲ್ ನೀರನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಎದುರಾಯ್ತು. ಇದರಿಂದ ನೊಂದ ಶರ್ಮಾ, ಫರಿದಾಬಾದ್ ಗ್ರಾಹಕ ಆಯೋಗದಲ್ಲಿ ಈ ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.

ಇದನ್ನೂ ಓದಿ: ಅಂಗವಿಕಲರ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯಲು ತನ್ನದೇ ಕಾಲಿನ ಬೆರಳಗಳನ್ನು ಕತ್ತರಿಸಿದ ಯುವಕ

ಭಾರತದಲ್ಲಿನ ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳಿಗೆ ಇರುವ ಪ್ರಸ್ತುತ ಕಾನೂನುಗಳು ಮತ್ತು ನಿಯಮಗಳ ಪ್ರಕಾರ, ವಿಶೇಷವಾಗಿ ಗ್ರಾಹಕ ವ್ಯವಹಾರಗಳ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೊರಡಿಸಿದ ಮಾರ್ಗಸೂಚಿಗಳು ಹಾಗೂ ಆದೇಶಗಳ ಪ್ರಕಾರ, ಪ್ರತಿಯೊಂದು ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಉಚಿತ ಕುಡಿಯುವ ನೀರನ್ನು ಒದಗಿಸಬೇಕು ಮತ್ತು ಬಾಟಲಿ ನೀರನ್ನು ಖರೀದಿಸಲು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆದ್ದರಿಂದ, ರೆಸ್ಟೋರೆಂಟ್‌ನ ಕೃತ್ಯವು ಕಾನೂನು ಬಾಹಿರವಾಗಿದೆ ಎಂದ ನ್ಯಾಯಾಲಯವೂ ಗ್ರಾಹಕನಿಗೆ ನೀರು ಕೊಡದೇ ಕಿರುಕುಳ ನೀಡಿದ ರೆಸ್ಟೋರೆಂಟ್‌ಗೆ ನೀರಿನ ಬಾಟಲಿಯ 40 ರೂಪಾಯಿ ಪರಿಹಾರವಾಗಿ 3000 ರೂಪಾಯಿ ಪಾವತಿಸುವಂತೆ ಆದೇಶಿಸಿತು.