ಮುಂಬೈನಲ್ಲಿ ಅರ್ಬನ್ ಕಂಪನಿ ಮೂಲಕ ಮಸಾಜ್ ಬುಕ್ ಮಾಡಿದ ಮಹಿಳೆಯೊಬ್ಬರು, ಕಳಪೆ ಮಸಾಜ್ ಬೆಡ್ ಕಾರಣಕ್ಕೆ ಸೇವೆಯನ್ನು ರದ್ದುಗೊಳಿಸಿದ್ದಾರೆ. ಇದರಿಂದ ಕೋಪಗೊಂಡ ಮಸಾಜ್ ಸಿಬ್ಬಂದಿ ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ಆರೋಗ್ಯ ಸೇವೆಯಿಂದ ಹಿಡಿದು ಪ್ರತಿಯೊಂದು ಆನ್‌ಲೈನ್ ಮೂಲಕ ಸಿಗುತ್ತಿದೆ. ಮನೆ ಬಾಗಿಲಿಗೆ ಬಂದು ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಸೇವೆ ನೀಡಲಾಗುತ್ತದೆ. ಮನೆಗೆ ಬಂದು ನಿಮಗೆ ಬ್ಯೂಟಿ ಸಂಬಂಧಿ ಸೇವೆಯನ್ನು ಮಾಡುತ್ತಾರೆ, ಫೇಶಿಯಲ್, ಐಬ್ರೂ, ಹೇರ್ ಕಟ್ಟಿಂಗ್ ಮಸಾಜ್ ಹೀಗೆ ಪ್ರತಿಯೊಂದು ಸೇವೆಯನ್ನು ಒದಗಿಸಲಾಗುತ್ತದೆ. ಇತ್ತೀಚೆಗೆ ಕೆಲ ಮಹಾನಗರಿಗಳಲ್ಲಿ ಮನೆ ಕೆಲಸದವರನ್ನು ನೀವು ಆನ್‌ಲೈನ್‌ನಲ್ಲೇ ಬುಕ್ ಮಾಡಬಹುದಾಗಿದೆ. ಈ ರೀತಿ ಸೇವೆ ನೀಡುವ ಕಂಪನಿಗಳಲ್ಲಿ ಅರ್ಬನ್ ಕಂಪನಿ ಕೂಡ ಒಂದಾಗಿದೆ. ಇದು ಮಾಸ್ಯೂಸ್ ಹೆಸರಿನಲ್ಲಿ ಮನೆಗೆ ಹೋಗಿ ಮಸಾಜ್ ಸೇವೆಯನ್ನು ನೀಡುತ್ತದೆ. ಅದೇ ರೀತಿ ಮುಂಬೈನ ವಡಾಲಾದ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಈ ಮಸಾಜ್ ಸೆಷನ್ ಅನ್ನು ಬುಕ್ ಮಾಡಿದ್ದರು. ಬುಕ್ ಮಾಡಿದ ನಂತರ ಮಾಸ್ಯೂಸ್‌ನ ಸಿಬ್ಬಂದಿ ಮನೆಗೆ ಬಂದಿದ್ದಾರೆ. ಆದರೆ ಅವರು ಮನೆಗೆ ಬಂದ ನಂತರ ಚಿಕಿತ್ಸಕರ ಪೋರ್ಟಬಲ್ ಮಸಾಜ್ ಬೆಡ್ ಕಳಪೆ ಸ್ಥಿತಿಯಲ್ಲಿದೆ ಎಂಬುದನ್ನು ಗಮನಿಸಿದ ಅವರು, ಮಸಾಜ್ ಸೆಸನ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಾಸ್ಯೂಸ್ ಸಿಬ್ಬಂದಿ ಆ ಮಹಿಳಾ ಗ್ರಾಹಕಿಯ ಮನೆಯಲ್ಲೇ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ವಡಾಲಾ ಪೂರ್ವದ 46 ವರ್ಷದ ಮಹಿಳೆ ಶಹನಾಜ್ ವಾಹಿದ್ ಸಯ್ಯದ್, ಎಂಬುವವರು ಈ ವಡಾಲಾ ಟ್ರಕ್ ಟರ್ಮಿನಲ್ (ಟಿಟಿ) ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಗ್ರಾಹಕ ಮತ್ತು ಮಸಾಜರ್ ನಡುವಿನ ಹಿಂಸಾತ್ಮಕ ವಾಗ್ವಾದದ ವೀಡಿಯೋ ವೈರಲ್ ಆಗಿದೆ. ಇಬ್ಬರು ಜಡೆ ಹಿಡಿದು ಹೊಡೆದಾಡಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಮನೆಯ ಮಲಗುವ ಕೋಣೆಯಲ್ಲಿ ಮಸಾಜ್ ಮಾಡುವವಳು ತನ್ನ ಮೊಬೈಲ್ ಫೋನ್ ಹಿಡಿದುಕೊಂಡು ಮಹಿಳಾ ಗ್ರಾಹಕಿಯ ಕಡೆಗೆ ಬೆರಳು ತೋರಿಸುತ್ತಿರುವುದನ್ನು ನೋಡಬಹುದು. ಆರಂಭದಲ್ಲಿ, ಮಹಿಳಾ ಗ್ರಾಹಕಿ ಅವಳನ್ನು ಮನೆಯಿಂದ ಹೊರಹೋಗುವಂತೆ ಹೇಳಿದಾಗ ಆಕೆ ಮನೆಯಲ್ಲಿ ಕುಳಿತುಕೊಂಡು ಆಟ ಆಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾಳೆ. ನಂತರ ಮಾತಿನ ಚಕಮಕಿ ಜೋರಾಗಿದ್ದು, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆ ಮಹಿಳಾ ಗ್ರಾಹಕಿಯ ಪುತ್ರ ಈ ದೃಶ್ಯವನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ನಂತರದ ದೃಶ್ಯಗಳಲ್ಲಿ ಮಹಿಳಾ ಗ್ರಾಹಕಿ ಮಸಾಜ್ ಮಾಡುವವರನ್ನು ಹಾಸಿಗೆಯ ಮೇಲೆ ಎಸೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ನಂತರ, ಮಸಾಜ್ ಮಾಡುವವರು ಗ್ರಾಹಕಿಯ ಕೂದಲನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು. ಈ ಹುಚ್ಚು ಮಹಿಳೆ. ನಮ್ಮ ಮನೆಯೊಳಗೆ ಬಂದು ನನ್ನ ತಾಯಿಗೆ ಹೊಡೆಯಲು ಪ್ರಾರಂಭಿಸಿದಳು. ಪೊಲೀಸರಿಗೆ ಕರೆ ಮಾಡುತ್ತೇನೆ, ನಿಮ್ಮ ವೃತ್ತಿಜೀವನ ಮುಗಿದಿದೆ ಎಂದುಮಹಿಳಾ ಗ್ರಾಹಕಿಯ ಪುತ್ರ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದು.

ವಡಾಲಾ ಪೂರ್ವದ ಭಕ್ತಿ ಪಾರ್ಕ್‌ನಲ್ಲಿ ತನ್ನ 18 ವರ್ಷದ ಮಗನೊಂದಿಗೆ ವಾಸಿಸುತ್ತಿರುವ ಸಾರ್ವಜನಿಕ ಸಂಪರ್ಕ ವೃತ್ತಿಯಲ್ಲಿ ಕೆಲಸ ಮಾಡುವ ಶಹನಾಜ್ ವಾಹಿದ್ ಸಯ್ಯದ್ ಎಂಬುವವರು ತಮ್ಮ ಭುಜದ ನೋವಿಗೆ ಅರ್ಬನ್ ಕಂಪನಿಯ ಮೂಲಕ ಮಸಾಜ್ ಸೆಷನ್ ಬುಕ್ ಮಾಡಿದ್ದರು. ಆದರೆ ಮಸಾಜ್ ಸಿಬ್ಬಂದಿ ಮನೆಗೆ ಬಂದ ನಂತರ ಚಿಕಿತ್ಸಕರ ಪೋರ್ಟಬಲ್ ಮಸಾಜ್ ಬೆಡ್ ಕಳಪೆ ಸ್ಥಿತಿಯಲ್ಲಿದೆ ಮತ್ತು ಅವಳ ಮನೆಗೆ ಸೂಕ್ತವಲ್ಲ ಎಂದು ಗಮನಿಸಿದ ಅವರು ಅಪಾಯಿಂಟ್‌ಮೆಂಟ್ ಅನ್ನು ರದ್ದುಗೊಳಿಸಿದರು. ಇದರಿಂದ ಸಿಟ್ಟಾದ ಸಿಬ್ಬಂದಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಅಂಗವಿಕಲರ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯಲು ತನ್ನದೇ ಕಾಲಿನ ಬೆರಳಗಳನ್ನು ಕತ್ತರಿಸಿದ ಯುವಕ

ಹೀಗೆ ಗ್ರಾಹಕಿ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು 32 ವರ್ಷದ ಅಶ್ವಿನಿ ಶಿವನಾಥ್ ವಾರ್ತಾಪಿ ಎಂದು ಗುರುತಿಸಲಾಗಿದೆ. ಭಾರತೀಯ ನ್ಯಾಯ ಸಂಹಿತದ ಸೆಕ್ಷನ್ 115(2) ರ ಅಡಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಬಂಧನ ಆಗಿಲ್ಲ. ಘಟನೆಯ ಬಗ್ಗೆ ಅರ್ಬನ್ ಕಂಪನಿಯನ್ನು ಸಂಪರ್ಕಿಸಿದರು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಹಿಳೆ ದೂರಿದ್ದಾರೆ. ನಂತರ ಪ್ರತಿಕ್ರಿಯಿಸಿದ ಅರ್ಬನ್ ಕಂಪನಿ ಸಿಬ್ಬಂದಿ ಘಟನೆಗೆ ಸಂಬಂಧಿಸಿದಂತೆ ಆ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವೆನಿಜುವೆಲ್ಲಾದ ಅಧ್ಯಕ್ಷರಿಗೆ ಜೊತೆಗಿದ್ದವರೇ ಬೆನ್ನಿಗೆ ಇರಿದರಾ?: ದಿ ಗಾರ್ಡಿಯನ್ ವರದಿಯಲ್ಲಿ ಏನಿದೆ?