ಉತ್ತರ ಪ್ರದೇಶದ ಯುವಕನೊಬ್ಬ ಅಂಗವಿಕಲರ ಕೋಟಾದಡಿ ಎಂಬಿಬಿಎಸ್ ಸೀಟು ಪಡೆಯುವ ಉದ್ದೇಶದಿಂದ ತನ್ನ ಕಾಲಿನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡಿದ್ದಾನೆ. ವೈದ್ಯಕೀಯ ಸೀಟು ಪಡೆಯುವ ತನ್ನ ಮಹತ್ವಾಕಾಂಕ್ಷೆಗಾಗಿ ಆತ ಈ ಕೃತ್ಯ ಎಸಗಿದ್ದಾನೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಯಲ್ಲಿ ವಿಶೇಷ ಚೇತನರೂ ಸೇರಿದಂತೆ ಸಮಾಜದ ದುರ್ಬಲ ವರ್ಗದವರಿಗೆ ಕೆಲ ವಿಶೇಷ ಮೀಸಲಾತಿ ಇದೆ. ಈ ಮೀಸಲಾತಿಯ ಮೂಲಕ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆಯಬೇಕು ಎಂದು ನಿರ್ಧರಿಸಿದ ಯುವಕನೋರ್ವ ತನ್ನ ಕಾಲಿನ ಬೆರಳುಗಳನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಅಂಗವಿಕಲರ ಕೋಟಾದ ಮೂಲಕ ಎಂಬಿಬಿಎಸ್ ಕೋರ್ಸ್‌ನಲ್ಲಿ ಸೀಟು ಪಡೆಯಲು ಯುವಕನೊಬ್ಬ ತನ್ನ ಕಾಲಿನ ಒಂದು ಭಾಗವನ್ನು ಕತ್ತರಿಸಿಕೊಂಡಿದ್ದಾನೆ.

ಸೂರಜ್ ಎಂಬಾತನೇ ಹೀಗೆ ತನ್ನದೇ ಕಾಲಿನ ಬೆರಳುಗಳನ್ನು ಕತ್ತರಿಸಿಕೊಂಡ ಯುವಕ. ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಯುವಕ ತನ್ನ ಕಾಲನ್ನೇ ಕಡಿದುಕೊಂಡು ಬಳಿಕ ಕೆಲ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಕತೆ ಕಟ್ಟಿದ್ದ. ಈ ಮೂಲಕ ಆತ ತನ್ನ ಪೋಷಕರು ಹಾಗೂ ಪೊಲೀಸರನ್ನು ಕೂಡ ನಂಬಿಸಿದ್ದ. ಆರಂಭದಲ್ಲಿ, ಸೂರಜ್ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿಸಿ, ಕಾಲಿನ ಬೆರಳನ್ನು ಕತ್ತರಿಸಿ, ನಂತರ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಅಲ್ಲದೆ, ಬೀದಿ ದೀಪಗಳನ್ನು ಆನ್ ಮಾಡುವ ವಿವಾದದ ಕುರಿತು ತನಗೆ ಈ ಹಿಂದೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಸೂರಜ್ ಹೇಳಿದ್ದ. ಸೂರಜ್ ದೂರಿನ ನಂತರ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದರು.

ಆದರೆ ಸೂರಜ್ ಥಕ್ಕರ್ ಅವರ ಹೇಳಿಕೆಯಲ್ಲಿ ನಂತರ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಅನುಮಾನಗೊಂಡ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದಾಗ ಯಾರೋ ಹೊರಗಿನವರು ಇವರ ಮೇಲೆ ಹಲ್ಲೆ ಮಾಡಿಲ್ಲ, ಇವರೇ ತಮಗೆ ತಾವೇ ಹಾನಿ ಮಾಡಿಕೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಅವರಿಗೆ ಬಂದ ಕರೆ ವಿವರಗಳು, ದಾಖಲೆಗಳು ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರಿಗೆ ಸಿರಿಂಜ್‌ಗಳು, ಅರಿವಳಿಕೆ ಮಾತ್ರೆಗಳು ಮತ್ತು ಕತ್ತರಿಸುವ ಯಂತ್ರ ಸಿಕ್ಕಿದ್ದವು.

ನಂತರ ಸೂರಜ್‌ನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ ಆತನ ಬಳಿ ಇದ್ದ ಡೈರಿಯನ್ನು ವಶಪಡಿಸಿಕೊಂಡಾಗ ಈ ಅಪರಾಧ ಬಯಲಾಗಿದೆ. ಆ ಡೈರಿಯಲ್ಲಿ ಅವರು 2026 ರಲ್ಲಿ ಯಾವುದೇ ಬೆಲೆ ತೆತ್ತಾದರೂ ಎಂಬಿಬಿಎಸ್ ಕೋರ್ಸ್ ಪಡೆಯಬೇಕು ಎಂಬ ತಮ್ಮ ದೃಢಸಂಕಲ್ಪವನ್ನು ಬರೆದಿದ್ದರು. ತನಿಖೆಯ ಪ್ರಕಾರ ಅವರು 2025 ರ ಅಕ್ಟೋಬರ್‌ನಲ್ಲಿ ಅಂಗವೈಕಲ್ಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಬಿಎಚ್‌ಯುಗೆ ಹೋಗಿದ್ದರು, ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು. ನಂತರ ಸೂರಜ್, ಔಷಧ ಕ್ಷೇತ್ರದಲ್ಲಿ ತನ್ನ ಕೌಶಲ್ಯವನ್ನು ಬಳಸಿಕೊಂಡು ಸ್ವತಃ ಈ ಕೃತ್ಯವನ್ನು ಸ್ವತಃ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ: ವೆನಿಜುವೆಲ್ಲಾದ ಅಧ್ಯಕ್ಷರಿಗೆ ಜೊತೆಗಿದ್ದವರೇ ಬೆನ್ನಿಗೆ ಇರಿದರಾ?: ದಿ ಗಾರ್ಡಿಯನ್ ವರದಿಯಲ್ಲಿ ಏನಿದೆ?

ಜೌನ್‌ಪುರದ ಲೈನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೂರಜ್ ತನ್ನ ಎಡಗಾಲಿನ ನಾಲ್ಕು ಬೆರಳುಗಳನ್ನು ಕತ್ತರಿಸಿ, ಹೆಬ್ಬೆರಳು ಮಾತ್ರ ಹಾಗೆಯೇ ಉಳಿಸಿದ್ದಾನೆ. ಈ ಕೃತ್ಯದ ಬಗ್ಗೆ ತನ್ನ ಗೆಳತಿಗೂ ಆತ ತಿಳಿಸಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೂರಜ್ ಖಲೀಲ್‌ಪುರದ ನಿವಾಸಿಯಾಗಿದ್ದು, ತನ್ನ ತಾಯಿ, ಅಣ್ಣ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದ. ಸೂರಜ್‌ನ ಅಣ್ಣ ಉದ್ಯೋಗದಲ್ಲಿದ್ದರೆ, ಸೂರಜ್ ಡಿ-ಫಾರ್ಮಾ ಪದವಿ ಪಡೆದಿದ್ದು, ಪರೀಕ್ಷೆ ಬರೆಯಲು ಮತ್ತು ಎಂಬಿಬಿಎಸ್‌ಗೆ ಪ್ರವೇಶಿಸಲು ತಯಾರಿ ನಡೆಸುತ್ತಿದ್ದ. ಜನವರಿ 18 ರ ಸಂಜೆ ಸೂರಜ್ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮರುದಿನ ಬೆಳಗ್ಗೆ, ಸೂರಜ್‌ನ ಕತ್ತರಿಸಿದ ಕಾಲು ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನು ಓದಿ: ಮಣಿಪುರ: ಕುಕಿ ಸಮುದಾಯದ ಪ್ರೇಯಸಿ ನೋಡಲು ಬಂದ ಮೈಥಿ ಸಮುದಾಯದ ಯುವಕನ ಕೊಲೆ