ಪುಣೆಯ ಕಾಲೇಜೊಂದರಲ್ಲಿ ತನ್ನ ಮಗಳಿಗೆ ಆನ್‌ಲೈನ್ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಯುವಕನಿಗೆ, ವಿದ್ಯಾರ್ಥಿನಿಯ ತಂದೆ ಕ್ಯಾಂಪಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಪುಣೆ (ಮಾ.5): ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಸತತವಾಗಿ ಕಿರುಕುಳ ನೀಡುತ್ತಿದ್ದ ಯುವಕನಿಗೆ, ಆಕೆಯ ತಂದೆ ಕಾಲೇಜು ಕ್ಯಾಂಪಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಸಂತ್ರಸ್ತ ಯುವತಿಯು ಕಳೆದ ಹಲವಾರು ದಿನಗಳಿಂದ ಆರೋಪಿ ವಿದ್ಯಾರ್ಥಿಯಿಂದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಿರುಕುಳ ಅನುಭವಿಸುತ್ತಿದ್ದಳು. ಸುಮಾರು 15 ದಿನಗಳಿಂದ ಆತ ಸತತವಾಗಿ ಸಂದೇಶಗಳನ್ನು ಕಳುಹಿಸುತ್ತಾ, ಸಂಪರ್ಕಿಸಲು ಯತ್ನಿಸುತ್ತಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದ (Stalking) ಎಂದು ಯುವತಿ ಆರೋಪಿಸಿದ್ದಾಳೆ. ಈ ನಿರಂತರ ಕಿರುಕುಳದಿಂದಾಗಿ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ವರದಿಯಾಗಿದೆ.
ಯುವತಿಯ ತಂದೆಯಿಂದ ಧರ್ಮದೇಟು
ಈ ಕಿರುಕುಳದಿಂದ ಬೇಸತ್ತ ಯುವತಿ ಅಂತಿಮವಾಗಿ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ಆರೋಪಿ ವಿದ್ಯಾರ್ಥಿ ಕಾಲೇಜು ಆವರಣದಲ್ಲೇ ಇರುವ ವಿಷಯ ತಿಳಿದ ತಂದೆ, ಕೂಡಲೇ ಅಲ್ಲಿಗೆ ಧಾವಿಸಿ ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆರಳಿದ ತಂದೆ ಆ ವಿದ್ಯಾರ್ಥಿಗೆ ಮನಬಂದಂತೆ ಹೊಡೆಯುತ್ತಿರುವುದು ಕಂಡುಬಂದಿದೆ.
ಈ ಘಟನೆಯಿಂದಾಗಿ ಕಾಲೇಜು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆರೋಪ
ಕಿರುಕುಳದ ಬಗ್ಗೆ ತಾವು ಮೊದಲೇ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಹಲವಾರು ದಿನಗಳು ಕಳೆದರೂ ಕಾಲೇಜು ಮಂಡಳಿ ಮೌನ ವಹಿಸಿದ್ದೇ ಈ ಘರ್ಷಣೆಗೆ ಕಾರಣವಾಯಿತು ಎಂದು ಕುಟುಂಬದವರು ದೂರಿದ್ದಾರೆ. ಈ ಘಟನೆಯು ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಇಂತಹ ಸಂದರ್ಭಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟುಹಾಕಿದೆ.


