ಕೇಂದ್ರ ಮಾಜಿ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರು ತಮ್ಮ 91ನೇ ವಯಸ್ಸಿನಲ್ಲಿ ಲಾತೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಅವರು ಲೋಕಸಭೆ ಸ್ಪೀಕರ್ ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮುಂಬೈ: ಕೇಂದ್ರ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಹಾರಾಷ್ಟ್ರದ ಇಂದು ಲಾತೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ಪಾಟೀಲ್ ಅವರು ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದ ಬಳಲುತ್ತಿದ್ದರು. ಅವರಿಗೆ ಮನೆಯಲ್ಲೇ ಆರೈಕೆ ಮಾಡಲಾಗುತ್ತಿತ್ತು. ಆದರೆ ಇಂದು ಮುಂಜಾನೆ 6.30ರ ಸುಮಾರಿಗೆ ಅವರು ತಮ್ಮ ನಿವಾಸದಲ್ಲೇ ನಿಧನರಾಗಿದ್ದಾರೆ.
ಸುದೀರ್ಘ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಶಿವರಾಜ್ ಪಾಟೀಲ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಲೋಕಸಭೆಯ ಸ್ಪೀಕರ್ ಹುದ್ದೆಯನ್ನೂ ಅಲಂಕರಿಸಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಪ್ರಮುಖ ಖಾತೆಗಳನ್ನು ಒಳಗೊಂಡಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಲಾತೂರ್ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದರು.
ಇದನ್ನೂ ಓದಿ: ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಶಿವರಾಜ್ ಪಾಟೀಲ್ ಅವರು ಲೋಕಸಭಾ ಸ್ಪೀಕರ್, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಪಂಜಾಬ್ ರಾಜ್ಯಪಾಲರು ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್ 12, 1935 ರಂದು ಲಾತೂರ್ ಜಿಲ್ಲೆಯ ಚಾಕೂರ್ ಗ್ರಾಮದಲ್ಲಿ ಜನಿಸಿದ ಶಿವರಾಜ್ ಪಾಟೀಲ್ ಕಾಂಗ್ರೆಸ್ ಮೂಲಕ ಸಕ್ರಿಯವಾಗಿ ರಾಜಕೀಯ ಪ್ರವೇಶಿಸಿದರು. ಅವರು ಲಾತೂರ್ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದರು. 2004 ರಲ್ಲಿ ಸೋಲಿನ ನಂತರವೂ ಅವರ ಪ್ರಭಾವ ಕಡಿಮೆಯಾಗಲಿಲ್ಲ. ಅವರು ರಾಜ್ಯಸಭೆಯ ಮೂಲಕ ಕೇಂದ್ರ ರಾಜಕೀಯಕ್ಕೆ ಮರಳಿದರು ಮತ್ತು 2004 ರಿಂದ 2008 ರವರೆಗೆ ಕೇಂದ್ರ ಗೃಹ ಸಚಿವ ಹುದ್ದೆಯನ್ನು ಅಲಂಕರಿಸಿದ್ದರು.
ಇದಕ್ಕೂ ಮೊದಲು ಅವರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಚಿವ ಸಂಪುಟಗಳಲ್ಲಿ ರಕ್ಷಣಾ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದ್ದರು. 1991 ರಿಂದ 1996 ರವರೆಗೆ ಲೋಕಸಭೆಯ 10 ನೇ ಸ್ಪೀಕರ್ ಆಗಿದ್ದರು. ಗೃಹಸಚಿವರಾಗಿ ಸೇವೆ ಸಲ್ಲಿಸಿದ ನಂತರ, ಅವರು 2010 ರಿಂದ 2015 ರವರೆಗೆ ಪಂಜಾಬ್ ರಾಜ್ಯಪಾಲರಾಗಿ ಮತ್ತು ಚಂಡೀಗಢದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಇದನ್ನೂ ಓದಿ: ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಬಾಂಬ್ ಸಿಡಿಸಿದ ಮಾಜಿ ಗರ್ಲ್‌ಫ್ರೆಂಡ್
ಶಿವರಾಜ್ ಪಾಟೀಲ್ ಚಾಕುರ್ಕರ್ ಅವರ ವೃತ್ತಿಜೀವನದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ಘಟನೆಯೆಂದರೆ 2008 ರ 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರದ ವಿವಾದ. ದಾಳಿಯಲ್ಲಿ ಬೆಳಕಿಗೆ ಬಂದ ಭದ್ರತಾ ಲೋಪಗಳಿಗಾಗಿ ಅವರನ್ನು ವ್ಯಾಪಕವಾಗಿ ಟೀಕಿಸಲಾಯಿತು. ದಾಳಿಯ ಕೇವಲ ಎರಡು ದಿನಗಳ ನಂತರ ಅವರು 2008 ರ ನವೆಂಬರ್ 30 ರಂದು ನೈತಿಕ ಹೊಣೆ ಹೊತ್ತುಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಅವಧಿಯಲ್ಲಿ ಅವರು ಒಂದೇ ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಾಯಿಸಿದ ವಿಚಾರವೂ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತು.


