ವಿಷಾಹಾರ ಸೇವನೆಯಿಂದಾಗಿ ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ ಖರ್ಗೊನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಬದ್ವಾ ಪ್ರದೇಶದ ನದಿ ದಂಡೆಯಲ್ಲಿ ಗಿಳಿಗಳು ಶವವಾಗಿ ಪತ್ತೆಯಾಗಿವೆ.
ಖರ್ಗೊನೆ: ವಿಷಾಹಾರ ಸೇವನೆಯಿಂದಾಗಿ ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶ ಖರ್ಗೊನೆ ಜಿಲ್ಲೆಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳಿಂದ ಬದ್ವಾ ಪ್ರದೇಶದ ನದಿ ದಂಡೆಯಲ್ಲಿ ಗಿಳಿಗಳು ಶವವಾಗಿ ಪತ್ತೆಯಾಗಿವೆ. ಗಿಳಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಕ್ಕಿ ಜ್ವರ ಅಥವಾ ಬರ್ಡ್ ಫ್ಲುನಿಂದ ಹಕ್ಕಿಗಳು ಸತ್ತಿದ್ದಲ್ಲ ಬದಲಾಗಿ ವಿಷಾಹಾರದಿಂದ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವೇಳೆ ಕೆಲವು ಗಿಳಿಗಳು ಬದುಕಿದ್ದವು. ಆದರೆ ವಿಷ ಬಹಳ ತೀವ್ರವಾಗಿದ್ದರಿಂದ ಸ್ವಲ್ಪ ಹೊತ್ತಿನಲ್ಲೇ ಅವು ಸಾವನ್ನಪ್ಪಿವೆ ಎಂದು ಜಿಲ್ಲಾ ವನ್ಯಜೀವಿ ವಾರ್ನ್ ಟೋನಿ ಶರ್ಮಾ ಹೇಳಿದ್ದಾರೆ. ರಾಶಿ ರಾಶಿ ಗಿಳಿಗಳ ಈ ಹಠಾತ್ ಸಾವು ಆ ಪ್ರದೇಶದ ಜನರಲ್ಲಿ ಭಯದ ಹುಟ್ಟಿಸಿದೆ. ಹಕ್ಕಿಜ್ವರದಿಂದಲೇನಾದರೂ ಈ ಗಿಳಿಗಳು ಸಾವನ್ನಪ್ಪಿರಬಹುದೇ ಎಂದು ಜನ ಭಯಗೊಂಡಿದ್ದರು. ಆದರೆ ಪಶುತಜ್ಞರು ಪರೀಕ್ಷಿಸಿದಾಗ ಹಕ್ಕಿ ಜ್ವರದಂತಹ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಘಟನೆಯ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿ ಹಕ್ಕಿಗಳಿಗೆ ಆಹಾರ ಹಾಕುವುದನ್ನು ಅರಣ್ಯ ವಿಭಾಗದ ಅಧಿಕಾರಿಗಳು ನಿಷೇಧಿಸಿದ್ದಾರೆ. ಇದರ ಕಟ್ಟುನಿಟ್ಟಿನ ಜಾರಿಗಾಗಿ ಘಟನೆ ನಡೆದ ನದಿ ತೀರದ ಸಮೀಪ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಿಳಿಗಳ ದೇಹದ ಆಂತರಿಕ ಭಾಗವನ್ನು ಜಬಲ್ಪುರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳ ಪ್ರಕಾರ ಆಹಾರ ವಿಷ ಮತ್ತು ವಿಚಿತ್ರ ಆಹಾರ ಪದ್ಧತಿಯೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಗಿಳಿಗಳು ಸಾವಿಗೀಡಾಗಿ ಬಿದ್ದಿರುವುದನ್ನು ನೋಡಿ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ನಂತರ ಪಶುವೈದ್ಯಕೀಯ ಮತ್ತು ಅರಣ್ಯ ಇಲಾಖೆಗಳ ತಂಡಗಳು ಹಾಗೂ ವನ್ಯಜೀವಿ ವಿಭಾಗವು ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಡಾ. ಮನಿಷಾ ಚೌಹಾಣ್, ಗಿಳಿಗಳಲ್ಲಿ ಆಹಾರ ವಿಷದ ಲಕ್ಷಣಗಳು ಕಂಡುಬಂದಿವೆ ಮತ್ತು ಪಕ್ಷಿ ಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಶಾಲೆಬಿಟ್ಟು ಮೊಬೈಲ್ ಕಳ್ಳತನಕ್ಕಿಳಿದ ಬಾಲಕ: ಆತನಿಗೆ ಬುದ್ಧಿ ಕಲಿಸಲು ಮುಂದಾದ ಪೋಷಕರ ವಿರುದ್ಧವೇ ಈಗ ಕೇಸ್
ಜನರು ಸಾಮಾನ್ಯವಾಗಿ ತಿಳಿಯದೆಯೇ ಪಕ್ಷಿಗಳಿಗೆ ಆಹಾರವನ್ನು ನೀಡುತ್ತಾರೆ, ಅದು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅವರು ಹೇಳಿದರು. ಪಶು ವೈದ್ಯಕೀಯ ವಿಸ್ತರಣಾ ಅಧಿಕಾರಿ ಡಾ. ಸುರೇಶ್ ಬಾಘೇಲ್ ಅವರು ಸತ್ತ ಪಕ್ಷಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಬೆಣಚುಕಲ್ಲುಗಳು ಕಂಡು ಬಂದಿವೆ ಎಂದು ಹೇಳಿದ್ದಾರೆ ಪ್ರಾಥಮಿಕವಾಗಿ, ಸಾವುಗಳು ವಿಷಮಯ ಆಹಾರದಿಂದ ಉಂಟಾಗಿವೆ ಎಂದು ತೋರುತ್ತಿದೆ. ಕೀಟನಾಶಕ ಸಿಂಪಡಿಸಿದ ಹೊಲಗಳಲ್ಲಿ ಆಹಾರ ನೀಡುವುದರಿಂದ ಮತ್ತು ನರ್ಮದಾ ನದಿಯ ನೀರು ಕೀಟನಾಶಕಗಳಿಗೆ ಒಡ್ಡಿಕೊಳ್ಳುವುದರಿಂದ ಈ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸೇತುವೆಗೆ ಭೇಟಿ ನೀಡಿದವರು ಬೇಯಿಸಿದ ಅಥವಾ ಉಳಿದ ಆಹಾರವನ್ನು ಪಕ್ಷಿಗಳಿಗೆ ನೀಡುತ್ತಿರುವುದು ಇದಕ್ಕೆ ಮಾರಕವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಿಲು ಹಾಕಿ ಬೆಂಕಿ: ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ವಿವಾಹಿತ ಜೋಡಿಯ ಸಜೀವದಹನ


