ಬೆಂಗಳೂರಿನ ಗಿರಿನಗರದಲ್ಲಿ, ಹೈಟೆನ್ಷನ್ ವೈಯರ್ ಮೇಲೆ ಕುಳಿತಿದ್ದ ಸಾಕು ಗಿಳಿಯನ್ನು ರಕ್ಷಿಸಲು ಯತ್ನಿಸಿದ 32 ವರ್ಷದ ಯುವಕನೊಬ್ಬ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ ಬಳಸಿ ಗಿಳಿಯನ್ನು ಓಡಿಸಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ.
ಬೆಂಗಳೂರು: ಹೈಟೆನ್ಷನ್ ವೈಯರ್ ಕಂಬದ ಮೇಲೆ ಕುಳಿತಿದ್ದ ಸಾಕಿದ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ಗಿರಿನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಮಂಡ್ಯದ ನಾಗಮಂಗಲ ಮೂಲದ ಅರುಣ್ ಕುಮಾರ್ (32) ಮೃತ ದುರ್ದೈವಿ.
ಮೃತ ಅರುಣ್ ಕುಮಾರ್ ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ಕೆಲ ತಿಂಗಳ ಅರುಣ್ ತಂದೆಗೆ ಕಾಲಿನ ಆಪರೇಷನ್ ಆಗಿ ಬೆಡ್ ರಿಡನ್ ಆಗಿದ್ದಾರೆ. ಕಳೆದ ತಿಂಗಳು ಅರುಣ್ ತಾಯಿಗೆ ಖದೀಮರು ಚಾಕು ಇರಿದಿದ್ದರು. ನಡೆಕೊಂಡು ಹೋಗುತ್ತಿದ್ದಾಗ ಕತ್ತಿನಲ್ಲಿದ್ದ ಚೈನ್ ಕಳ್ಳತನಕ್ಕೆ ಯತ್ನ ಮಾಡಿ ವಿರೋಧಿಸಿದಾಗ ಅರುಣ್ ತಾಯಿಗೆ ಚಾಕು ಇರಿದಿದ್ದರು. ಇದೀಗ ಅರುಣ್ ವಿಧಿಯಾಟಕ್ಕೆ ಬಲಿಯಾಗಿದ್ದು, ಕುಟುಂಬ ಕಣ್ಣೀರಿಡುತ್ತಿದೆ. ಅರುಣ್ ಪೋಷಕರಿಗೆ ಮೂವರು ಮಕ್ಕಳು, ಇದರಲ್ಲಿ ಇಬ್ಬರು ಸಹೋದರಿಯರು.
ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದು ಪ್ರಾಣ ಹೋಯ್ತು
ಅರುಣ್ ಕುಮಾರ್ ತಮ್ಮ ಚಿಕ್ಕಮ್ಮ ಲಿಖಿತ ಅವರ ಜತೆ ಗಿರಿನಗರದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ. ಇವರ ಚಿಕ್ಕಮ್ಮ ಗಿಳಿಯನ್ನು ಸಾಕಿದ್ದು, ಆ ಗಿಳಿ ಮನೆಯಿಂದ ಹಾರಿಹೋಗಿ ಅಪಾರ್ಟ್ಮೆಂಟ್ನ ಆವರಣದಲ್ಲಿರುವ ಹೈಟೆನ್ಷನ್ ವೈಯರ್ ಕಂಬದ ಮೇಲೆ ಕುಳಿತುಕೊಂಡಿತ್ತು. ಇದನ್ನು ನೋಡಿದ ಅರುಣ್ ಕುಮಾರ್ ಬೆಳಗ್ಗೆ 10.30 ರ ಸುಮಾರಿಗೆ ಗಿಳಿ ರಕ್ಷಣೆಗೆ ಮುಂದಾಗಿದ್ದಾರೆ. ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೈಟೆನ್ಷನ್ ವೈಯರ್ನಿಂದ ವಿದ್ಯುತ್ ಶಾಕ್ ಹೊಡೆದು ಅರುಣ್ ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಗಿರಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2 ಲಕ್ಷ ಬೆಲೆಯ ಫಾರಿನ್ ಗಿಳಿ?
ಅರುಣ್ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಉಳಿದುಕೊಳ್ಳುತ್ತಿದ್ದರು. ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಗಿರಿನಗರ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಅರುಣ್ ರಕ್ಷಣೆಗೆ ಮುಂದಾಗಿದ್ದು 2 ಲಕ್ಷ ರು. ಬೆಲೆ ಬಾಳುವ ಫಾರಿನ್ ಗಿಳಿ ಎನ್ನಲಾಗಿದೆ.
ನಿವಾಸಿಗಳ ಆಕ್ರೋಶ:
ಇನ್ನು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಾರ್ಟ್‌ಮೆಂಟ್ ಒಳಗೆ 60 ಸಾವಿರ ಕೆ.ವಿ ಸಾಮರ್ಥ್ಯದ ವೈಯರ್ಗಳು ಇರುವುದಕ್ಕೆ ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈಲೈಟ್ಸ್
- ಮೃತ ದುರ್ದೈವಿ ಅರುಣ್ ತಮ್ಮ ಚಿಕ್ಕಮ್ಮನ ಜತೆ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ
- ಚಿಕ್ಕಮ್ಮ ಸಾಕಿದ್ದ ಗಿಳಿ ಹಾರಿಹೋಗಿ ಅಪಾರ್ಟ್‌ಮೆಂಟ್ ಆವರಣದ ವಿದ್ಯುತ್ ಕಂಬದ ಮೇಲೆ ಕುಳಿತಿದೆ
- ಆಗ ಅರುಣ್ ಅಪಾರ್ಟ್‌ಮೆಂಟ್ ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ಗೆ ಕಟ್ಟಿಗೆ ಸೇರಿಸಿ ಗಿಳಿ ಓಡಿಸಲು ಯತ್ನಿಸಿದ್ದಾನೆ.
- ಈ ವೇಳೆ ಹೈಟೆನ್ಷನ್ ವೈಯರ್ನಿಂದ ಶಾಕ್ ಹೊಡೆದು ಅರುಣ್ ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾನೆ.


