ಗ್ಯಾಸ್ ಡೀಲರ್‌ಗಳು ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ, ಅವರ ವಿರುದ್ಧ ದೂರು ನೀಡಲು ಅವಕಾಶವಿದೆ. ಗ್ಯಾಸ್ ಕಂಪನಿಯ ಅಧಿಕೃತ ಪೋರ್ಟಲ್ ಅಥವಾ ಜಿಲ್ಲಾ ಪೂರೈಕೆ ಅಧಿಕಾರಿಗೆ ದೂರು ಸಲ್ಲಿಸುವ ಮೂಲಕ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು.

LPG Cylinder Complaint: ಗ್ಯಾಸ್ ಡೀಲರ್ ನಿಮಗೆ ಸರಿಯಾದ ಕ್ರಮದಲ್ಲಿ ಗ್ಯಾಸ್ ನೀಡದಿದ್ದರೆ ಅಥವಾ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಒತ್ತಾಯಿಸಿದರೆ, ನೀವು ಈ ಮನಬಂದಂತೆ ವರ್ತಿಸುವವರ ವಿರುದ್ಧ ಧ್ವನಿ ಎತ್ತಬಹುದು. ಜಿಲ್ಲಾ ಪೂರೈಕೆ ಅಧಿಕಾರಿಯಿಂದ ಹಿಡಿದು ಗ್ಯಾಸ್ ಕಂಪನಿಯವರೆಗೆ ದೂರು ನೀಡಲು ಅವಕಾಶವಿದೆ. ಆ ಪ್ರಕ್ರಿಯೆ ಏನು? ಇಲ್ಲಿದೆ ವಿವರ. ಎಲ್‌ಪಿಜಿ ಸಿಲಿಂಡರ್ ಇಂದು ಪ್ರತಿಯೊಂದು ಮನೆಯ ಅಗತ್ಯವಾಗಿದೆ. ಆದರೆ ಹಲವು ಬಾರಿ ಡೀಲರ್ ಅಥವಾ ಏಜೆನ್ಸಿಯ ಸಿಬ್ಬಂದಿ ಗ್ರಾಹಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಅಧಿಕ ಹಣ ಕೇಳುವುದು, ಇಲ್ಲದ ಸಲ್ಲದ ಚಾರ್ಜ್‌ಗಳನ್ನು ವಿಧಿಸುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ ಎಲ್‌ಪಿಜಿ ಅನಿಲದ ಕೊರತೆಯಿದೆ ಎಂಬ ವದಂತಿ ಹಬ್ಬಿದ್ದೇ ತಡ, ಹಲವೆಡೆ ಸಿಲಿಂಡರ್ ಖರೀದಿಸಲು ಗ್ರಾಹಕರ ಉದ್ದನೆಯ ಸಾಲು ಕಂಡುಬರುತ್ತಿದೆ.

Add Asianetnews Kannada as a Preferred SourcegooglePreferred

ಇದರ ಲಾಭ ಪಡೆಯುತ್ತಿರುವ ಕೆಲವರು 'ಡೆಲಿವರಿ ಚಾರ್ಜ್' ಹೆಸರಿನಲ್ಲಿ ಅಥವಾ 'ಕೊರತೆ ಇದೆ' ಎಂಬ ನೆಪವೊಡ್ಡಿ ಗ್ರಾಹಕರಿಂದ 100 ರಿಂದ 500 ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲಿ ಜಿಲ್ಲಾ ಪೂರೈಕೆ ಅಧಿಕಾರಿ ಮತ್ತು ತೈಲ ಕಂಪನಿಗಳಿಗೆ ದೂರು ನೀಡುವ ಮೂಲಕ ಇವರ ಮನಬಂದಂತೆ ವರ್ತನೆಗೆ ಬ್ರೇಕ್ ಹಾಕಬಹುದು.

ಇಂತಹ ದೂರುಗಳನ್ನು ಇತ್ಯರ್ಥಪಡಿಸಲು ಕಂಪನಿಗಳು ಸಹ ವೇಗವಾದ ಮತ್ತು ಸರಳವಾದ ಪದ್ಧತಿಯನ್ನು ಅನುಸರಿಸುತ್ತಿವೆ. ಕೇಂದ್ರ ಸರ್ಕಾರವು ದೇಶದಲ್ಲಿ ಅಗತ್ಯ ವಸ್ತುಗಳ ಸೇವಾ ಕಾಯ್ದೆಯನ್ನು (Essential Commodities Act) ಜಾರಿಗೆ ತಂದಿದೆ.

ದೂರನ್ನು ಎಲ್ಲಿ ದಾಖಲಿಸಬೇಕು?

ಗ್ಯಾಸ್ ಡೀಲರ್ ಹೆಚ್ಚುವರಿ ಹಣ ಪಡೆಯುತ್ತಿದ್ದರೆ, ಸಿಲಿಂಡರ್ ನೀಡಲು ನಿರಾಕರಿಸುತ್ತಿದ್ದರೆ ಅಥವಾ ಇನ್ನಾವುದೇ ತೊಂದರೆ ನೀಡುತ್ತಿದ್ದರೆ ನೀವು ಈ ಕೆಳಗಿನಂತೆ ದೂರು ನೀಡಬಹುದು

ಕಂಪನಿಯ ಅಧಿಕೃತ ಪೋರ್ಟಲ್: ಇಂಡೇನ್ (Indane), ಎಚ್‌ಪಿ (HP), ಅಥವಾ ಭಾರತ್ ಗ್ಯಾಸ್ (Bharat Gas) ನಂತಹ ಸರ್ಕಾರಿ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ 'ದೂರು ವಿಭಾಗ'ದಲ್ಲಿ (Complaint Cell) ನಿಮ್ಮ ದೂರನ್ನು ದಾಖಲಿಸಲು ಅವಕಾಶವಿದೆ.

ಯಾವೆಲ್ಲಾ ದೂರುಗಳನ್ನು ನೀಡಬಹುದು?: ರೀಫಿಲ್ ಪೂರೈಕೆಯಲ್ಲಿ ವಿಳಂಬ, ಸಿಲಿಂಡರ್‌ನಲ್ಲಿ ಗ್ಯಾಸ್ ಕಡಿಮೆ ಇರುವುದು, ಹೆಚ್ಚುವರಿ ಹಣ ವಸೂಲಿ, ಕಳಪೆ ಸೇವೆ ಅಥವಾ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ನೀವು ದೂರು ಸಲ್ಲಿಸಿದ ನಂತರ ಕಂಪನಿಯು ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳುತ್ತದೆ ಮತ್ತು ಆ ಕುರಿತ ಮಾಹಿತಿಯನ್ನು ನಿಮಗೆ ನೀಡುತ್ತದೆ.

ಜಿಲ್ಲಾ ಪೂರೈಕೆ ಅಧಿಕಾರಿ (DSO): ನೀವು ನೇರವಾಗಿ ಜಿಲ್ಲಾಧಿಕಾರಿ ಕಚೇರಿಯ ಅಡಿಯಲ್ಲಿ ಬರುವ ಜಿಲ್ಲಾ ಪೂರೈಕೆ ಅಧಿಕಾರಿಗಳಿಗೂ ದೂರು ನೀಡಬಹುದು. ಇವರು ಪೂರೈಕೆ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.

ಈ ಮಾಹಿತಿಯನ್ನು ಮರೆಯಬೇಡಿ

ಆನ್‌ಲೈನ್‌ನಲ್ಲಿ ದೂರು ದಾಖಲಿಸುವಾಗ ಗ್ರಾಹಕರು ಕೆಲವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಅದರಲ್ಲಿ ಪ್ರಮುಖವಾಗಿ LPG ID, ಆ ನಂತರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಗ್ರಾಹಕ ಸಂಖ್ಯೆ (Consumer Number) ಈ ಮಾಹಿತಿಯ ಆಧಾರದ ಮೇಲೆ ಕಂಪನಿಯು ಗ್ರಾಹಕರನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ದೂರು ನೀಡಿದ ನಂತರ ಅದರ ಸ್ಥಿತಿಗತಿಯನ್ನು (Status) ಸಹ ನೀವು ಪರಿಶೀಲಿಸಬಹುದು.