Asianet Suvarna News Asianet Suvarna News

ಕೃಷಿ ಮಸೂದೆಯಿಂದ ರೈತರಿಗೆ ಅನುಕೂಲ; ಬೇಡ ಗೊಂದಲ

ಹೊಸ ಮಸೂದೆ ಪ್ರಕಾರ ರೈತರು ಬೆಳೆದ ಬೆಳೆಗೆ, ಅದರ ಗುಣಮಟ್ಟಕ್ಕೆ ಯಾರು ಜಾಸ್ತಿ ದುಡ್ಡು ಕೊಡುತ್ತಾರೋ, ಅವರಿಗೆ ಮಾರಬಹುದು. ಒಟ್ಟಿನಲ್ಲಿ, ಅವರು ಖಾಸಗಿಯವರಿಗಾದರೂ ಮಾರಾಟ ಮಾಡಲಿ, ಸರ್ಕಾರಕ್ಕಾದರೂ ಕೊಡಲಿ, ಲಾಭವಾಗುವುದು ಮಾತ್ರ ರೈತರಿಗೆ.

farm bill 2020 know Pro and cons hls
Author
bengaluru, First Published Oct 10, 2020, 6:32 PM IST
  • Facebook
  • Twitter
  • Whatsapp

ಬೆಂಗಳೂರು (ಅ. 10): ನಮ್ಮ ದೇಶದಲ್ಲಿ ಪರಿಸ್ಥಿತಿಗಳು ಹೇಗೆ ಇದ್ದವು ಎಂಬುದನ್ನು ಅರಿಯಲು ನಮ್ಮ ಗಮನವನ್ನು ನಾವು 1991ಕ್ಕಿಂತಲೂ ಮೊದಲಿನ ದಿನಗಳಿಗೆ ವಾಲಿಸಬೇಕು. ನಮಗೆ ಫೋನ್‌ ಸಂಪರ್ಕ ಕಲ್ಪಿಸಲು, ಬಿಎಸ್‌ಎನ್‌ಎಲ್‌ಗೆ ಹೆಚ್ಚಿನ ಅಧಿ​ಕಾರ ಸಿಗುವಂತಾಗಲು ನಾವು ವರ್ಷಗಳೇ ಕಾಯಬೇಕಾಯಿತು.

ಒಂದು ಬಜಾಜ್‌ ಸ್ಕೂಟರ್‌ ಬುಕ್‌ ಮಾಡಿದರೆ, ಅದು ನಮ್ಮ ಮನೆ ಸೇರಲು ತಿಂಗಳು/ವರ್ಷಗಳೇ ಬೇಕಾಗುತ್ತಿದ್ದವು. ಒಂದು ಠೇವಣಿ ಇಡಲು, ಒಂದಷ್ಟುಸಾಲ ಪಡೆಯಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹೋಗಿ ಅಂಗಲಾಚಬೇಕಿತ್ತು. ಹೀಗೆ ಪಟ್ಟಿಬೆಳೆಯುತ್ತಲೇ ಹೋಗುತ್ತದೆ. ಇಂದಿನ ಯುವಜನಾಂಗ ಇಂತಹ ಲೈಸೆನ್ಸ್‌ ರಾಜ್‌ನ ಮಗ್ಗಲುಗಳನ್ನು ನೋಡಿಲ್ಲ, ಇತ್ತೀಚಿನ ವರ್ಷಗಳಲ್ಲಂತೂ ಇದರ ಮಾತೇ ಇಲ್ಲ. ಅದಕ್ಕೆ ಇರೋ ಒಂದು ಸಾಲಿನ ಉತ್ತರ ಎಂದರೆ, ಕಳೆದ ಆರು ವರ್ಷಗಳಿಂದ ದೇಶಕ್ಕೆ ನರೇಂದ್ರ ಮೋದಿ ಅವರಂತಹ ನಾಯಕತ್ವ ಸಿಕ್ಕಿದ್ದು.

ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಸಾಧಕ ಬಾಧಕಗಳೇನು? ಯಾಕೀ ವಿರೋಧ?

ಕೃಷಿ ವಲಯ ಬಡಕಲಾಗಿದ್ದು ಏಕೆ?

ದುರದೃಷ್ಟಕ್ಕೆ, ಇದಕ್ಕೂ ಮೊದಲು ದೇಶಕ್ಕೇ ಅನ್ನ ನೀಡುವ ಅನ್ನದಾತರ ವಿಷಯದಲ್ಲೂ ಸರ್ಕಾರಗಳು ಹೀಗೆಯೇ ನಡೆದುಕೊಂಡಿದ್ದು ಮಾತ್ರ ಘನಘೋರ. ಸರ್ಕಾರಗಳು ನೀತಿ-ನಿಯಮಗಳನ್ನು ರೂಪಿಸುವಲ್ಲಿ ಎಡವಿದ ಕಾರಣ ದೇಶದ ಕೃಷಿ ವಲಯ ಬಡಕಲು ಸ್ಥಿತಿಯಲ್ಲಿಯೇ ಉಳಿಯಿತು. ಅಷ್ಟಕ್ಕೂ ಇದುವರೆಗೆ ಆಳಿದ ಸರ್ಕಾರಗಳು ರೈತರ ವಿಷಯದಲ್ಲಿ ಇಬ್ಬಂದಿತನ ಪ್ರದರ್ಶಿಸುತ್ತಲೇ ಬಂದಿವೆ. ಒಬ್ಬ ರೈತ ಎಲ್ಲ ಅಪಾಯಗಳನ್ನೂ ಮೈಮೇಲೆ ಎಳೆದುಕೊಂಡು, ಕೃಷಿ ಉತ್ಪನ್ನದಲ್ಲಿ ಬೆಳೆಯುವಲ್ಲಿ ತೊಡಗುವಾಗ ಆತನನ್ನು ಒಬ್ಬ ಖಾಸಗಿ ಉದ್ಯಮಿಯಂತೆ ಬಿಂಬಿಸಲಾಯಿತು.

ಆದರೆ, ಅದೇ ರೈತ ತಾನು ಬೆಳದ ಉತ್ಪನ್ನವನ್ನು ಮಾರಾಟ ಮಾಡಬೇಕಾದಾಗ ಸಮಾಜವಾದಿ ನಿಯಂತ್ರಣದ ಮಾರಕ ನಿಬಂಧನೆಗಳಿಗೆ ಒಳಪಡುತ್ತಿದ್ದ. ಹಾಗೆ ಸುಮ್ಮನೆ ಯೋಚಿಸಿ ನೋಡಿ, ಒಬ್ಬ ಪೆನ್‌ ಉತ್ಪಾದಕನು ತಾನು ಉತ್ಪಾದಿಸಿದ ಒಂದು ಪೆನ್‌ ಮಾರಾಟ ಮಾಡಲು ತನ್ನದೇ ಆದ ಭೌಗೋಳಿಕ ವಲಯವನ್ನು ಹೊಂದಿರುತ್ತಾನೆ, ಬೆಲೆ ನಿಗದಿ ಮಾಡಲೂ ಏಜೆನ್ಸಿಗಳೇ ಇರುತ್ತವೆ ಅಥವಾ ಅವರೇ ದರ ನಿಗದಿ ಮಾಡಿರುತ್ತಾರೆ.

ಹಾಗೆಯೇ ಒಬ್ಬ ಇಂಜಿನಿಯರ್‌ಗೆ ಗ್ರಾಮೀಣ ಪ್ರದೇಶಕ್ಕೆ ತೆರಳಿ ಉದ್ಯೋಗ ಮಾಡು ಅಥವಾ ಜನರ ಕೌಶಲ ವೃದ್ಧಿಸು ಎಂದು ಸರ್ಕಾರವೇ ಸೂಚಿಸಿದರೆ, ಆತನಿಗೂ ಒಂದು ಬೆಲೆ ನಿಗದಿ ಮಾಡಲು ಏಜೆನ್ಸಿಯೇ ಬರಬೇಕಾಗುತ್ತದೆ. ಆದರೆ, ಇದಾವುದರ ಪರಿವೇ ಇಲ್ಲದೆ, ಮುಗ್ಧವಾಗಿ ಅನ್ನ ಉತ್ಪಾದಿಸುವ ರೈತರ ಪರವಾಗಿ ಯಾವುದೇ ನಿಬಂಧನೆಗಳು, ಕಾನೂನು ಇರದ ಪರಿಣಾಮ, ನಮ್ಮ ರೈತರು 70 ವರ್ಷದಿಂದ ಸಾಲ ಹಾಗೂ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ರೈತರ ಆತ್ಮಹತ್ಯೆಗಳ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅದು 1960ರಲ್ಲಿ ಉಂಟಾದ ಆಹಾರದ ಕೊರತೆಯಾಗಲಿ, 2000ನೇ ದಶಕದಲ್ಲಿ ಇದ್ದ ಸಮೃದ್ಧಿಯೇ ಇರಲಿ, ಯಾವಾಗಲೂ ರೈತರಿಗೆ ಮಾತ್ರ ಹಿನ್ನಡೆಯಾಗುತ್ತಿತ್ತು. ಮಧ್ಯವರ್ತಿಗಳ ಹಾವಳಿಯಿಂದಾಗಿಯೂ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.

ಈಗಿನ ರೈತರ ಪರಿಸ್ಥಿತಿ ಇದು

ಚುನಾವಣೆ ಬಂದಾಗ, ವೇದಿಕೆ ಸಿಕ್ಕಾಗಲೆಲ್ಲಾ ನಾವು ರೈತರ ಪರ ಎಂದು ರಾಜಕಾರಣಿಗಳು ಹೇಳುವುದು ಬಾಯಿಮಾತಿನ ಏಳಿಗೆಯಾಯಿತೇ ಹೊರತು, ಅದು ಎಂದೂ ಕಾರ್ಯರೂಪಕ್ಕೆ ಬರಲಿಲ್ಲ. ಮತ್ತೆ ಈ ಕಲ್ಯಾಣ ಎಂಬ ಪದವು ಮಧ್ಯವರ್ತಿಗಳಿಗೆ ಅನ್ವಯವಾಯಿತೇ ವಿನಃ ರೈತರಿಗೆ ಅನ್ವಯಿಸಲೇ ಇಲ್ಲ. ಏಕೆಂದರೆ ಸರ್ಕಾರದ ನೀತಿ-ನಿಯಮಗಳೇ ರೈತರಿಗೆ ಅಡ್ಡಗಾಲು ಆದವು.

ಇದಕ್ಕೆ ತಾಜಾ ಉದಾಹರಣೆ ಎಂದರೆ, ಅಗತ್ಯ ಸರಕುಗಳ ಕಾಯ್ದೆ ಅನ್ವಯ ಆಹಾರ ಧಾನ್ಯಗಳ ದಾಸ್ತಾನು ಹಾಗೂ ಸಂಗ್ರಹ ನಿಯಂತ್ರಣ (ದೇಶಾದ್ಯಂತ ಸಮೃದ್ಧವಾಗಿ ಬೆಳೆ ಬೆಳೆದಾಗಲೂ ಇಂತಹ ನಿಯಂತ್ರಣ ಕುಚೋದ್ಯವೇ ಸರಿ) ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ (ಎಪಿಎಂಸಿ) ರಚಿಸಿ ರೈತರಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಚೌಕಟ್ಟು ಹಾಕಿದ್ದು. ರೈತರು ಬೆಳೆದ ಉತ್ಪನ್ನವನ್ನು ಖರೀದಿಸಲು ಖಾಸಗಿ ಕಂಪನಿಗಳು, ಉದ್ಯಮಿಗಳ ಬಳಿ ಸರಕು-ಸಾಗಣೆ, ತಂತ್ರಜ್ಞಾನ ಹಾಗೂ ಉತ್ತಮ ಬೆಲೆ ನೀಡುವ ವ್ಯವಸ್ಥೆ ಇದೆ. ಹೀಗಿದ್ದರೂ ರೈತರು ಮಾತ್ರ ಕೃಷಿ ಉತ್ಪನ್ನವನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕಿತ್ತು, ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲೇ ಮಾರಬೇಕಿತ್ತು. ಹೀಗೆ ಇಂತಹ ನಿಯಮಗಳೇ ರೈತರಿಗೆ ಉರುಳಾಗಿವೆ. ಎಪಿಎಂಸಿ ಅಂದರೆ ಮಧ್ಯವರ್ತಿಗಳಿಗೆ ಲಾಭ ಮಾಡುವುದೇ ಆಗಿದೆ.

ವಿವಾದಿತ ಕೃಷಿ, ಎಪಿಎಂಸಿ ಕಾಯ್ದೆಗೆ ಮತ್ತೆ ಸುಗ್ರೀವಾಜ್ಞೆ..!

ಸಾಲಮನ್ನಾ ಸಮಸ್ಯೆಗೆ ಪರಿಹಾರವೇ?

ರೈತರ ವಿಷಯದಲ್ಲಿ ಪರಿಹಾರಗಳೇ, ಯೋಜನೆಗಳೇ ನಕಾರಾತ್ಮಕವಾಗಿವೆ ಹಾಗೂ ಪರಿಹಾರಗಳನ್ನೇ ರೈತರ ಮೂಗಿಗೆ ತುಪ್ಪ ಸವರಲು ಬಳಸಲಾಯಿತು ಎಂಬುದು ಮತ್ತೊಂದು ಘೋರ ದುರಂತ. ಇಂತಹ ದುರಂತದ ಮುಖವಾಗಿ ಸಾಲಮನ್ನಾ ನಮ್ಮ ಕಣ್ಣೆದುರು ಬರುತ್ತದೆ. ಹೌದು, ರೈತರ ಬದುಕು ಹಸನಾಗೇ ಬಿಟ್ಟಿತು ಎಂಬಂತೆ ಸಾಲಮನ್ನಾ ವಿಷಯವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸಾಲಮನ್ನಾ ಅಂತ ಸಾವಿರಾರು ಕೋಟಿ ರು. ನೀಡಿದರೂ, ಅದು ತಲುಪುವುದು ಶೇ.15ರಷ್ಟುರೈತರಿಗೆ ಮಾತ್ರ. ಅದೂ, ರಾಜಕಾರಣಿಗಳ ಜತೆ ಸಂಪರ್ಕ ಹೊಂದಿದವರಿಗೆ, ಶಿಫಾರಸು ಮಾಡಿಸಿಕೊಂಡವರಿಗೆ, ಇಲ್ಲೂ ರೈತರು ದಾಖಲೆ ಸಲ್ಲಿಸಲೂ ಸಹ ದಲ್ಲಾಳಿಗಳು ಗೊತ್ತಿರುವವರಿಗೆ ಸಿಗುತ್ತದೆ. ಉಳಿದ ಶೇ.85ರಷ್ಟುರೈತರಿಗೆ ಸಾಲಮನ್ನಾ ಗಗನಕುಸುಮವೇ ಆಗಿರುತ್ತದೆ. ಇನ್ನು ದೇಶದಲ್ಲಿ ಶೇ.60ರಷ್ಟುಜನ ಕೃಷಿ ಮೇಲೆಯೇ ಅವಲಂಬನೆಯಾಗಿದ್ದಾರೆ. ಆದರೆ, ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದಲ್ಲಿ ಕೃಷಿ ಪಾಲು ಮಾತ್ರ ಶೇ.15ರಷ್ಟಿದೆ. ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಜಾಸ್ತಿ ಇರುವುದಕ್ಕೂ ಕೃಷಿಯ ಕಡೆಗಣನೆಯೇ ಕಾರಣ. ಹಾಗಾಗಿ ಭಾರತ ವಿಶ್ವದಲ್ಲೇ ವಿತ್ತೀಯವಾಗಿ ಬಲಿಷ್ಠ ರಾಷ್ಟ್ರವಾಗಬೇಕು ಎಂದರೆ ಕೃಷಿಯಲ್ಲಿ ಗಹನವಾದ ಬದಲಾವಣೆ ತರಲೇಬೇಕು.

ಇದೆಲ್ಲ ಬದಲಾವಣೆ ಆಗಬೇಕು ಎಂದರೆ ರೈತರ ಏಳಿಗೆ ವಿಷಯದಲ್ಲಿ ನಾವು ಆಟದ ನಿಯಮಗಳನ್ನೇ ಬದಲಾಯಿಸಬೇಕು. ಒಂದು ಮೀನು ಗಿಡ ಹತ್ತುವ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂದರೆ, ಅದಕ್ಕೆ ನೆರವು ಬೇಕು. ಆದರೆ, ಅದೇ ಮೀನು ನೀರಿನಲ್ಲಿ ಸುಲಭವಾಗಿ ಗೆದ್ದು ಬರುತ್ತದೆ. ಮತ್ತೆ ಇದಕ್ಕೆ ಯಾವುದೇ ನೆರವು, ಸಹಕಾರ, ‘ಸಬ್ಸಿಡಿ’ ಬೇಕಾಗುವುದಿಲ್ಲ. 1950ರ ದಶಕದಲ್ಲಿ ನಿಯಂತ್ರಣ ಹಾಗೂ ಆಮದು ಸಮಸ್ಯೆಯಿಂದ ಉಂಟಾದ ಬಿಕ್ಕಟ್ಟು ಮುಂದೆಯೂ ಕಾಡಬಾರದು ಎಂದರೆ, ಕೃಷಿ ರಂಗ ಸಮೃದ್ಧವಾಗಿರಬೇಕೆಂದರೆ 2020ರ ದಶಕದಲ್ಲಿ ಬದಲಾವಣೆ ಅನಿವಾರ್ಯ.

ಬದಲಾವಣೆಯ ಹಾದಿ

ಇತಿಹಾಸದಲ್ಲಿ ನಡೆದ ತಪ್ಪುಗಳು, ಬೇಕು ಅಂತಲೇ ಮಾಡಿದ ಪ್ರಮಾದಗಳು ಭವಿಷ್ಯತ್ತಿನಲ್ಲಿ ಸರಿಹೋಗುತ್ತವೆ ಎಂಬ ಮಾತಿದೆ. ಈ ಮಾತನ್ನು ಅಕ್ಷರಶಃ ನಿಜ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಹೌದು, ಮೋದಿ ಅವರು ಪ್ರಧಾನಿಯಾದ ಬಳಿಕ ಕೃಷಿ ಕ್ಷೇತ್ರದಲ್ಲೂ ಬದಲಾವಣೆಗಳು ಆಗುತ್ತಿವೆ. ಇದನ್ನು ಹೀಗೆ ಬಾಯಿಮಾತಿನಲ್ಲೇ ಹೇಳುವುದಾದರೆ, ಬೇವು ಲೇಪಿತ ಯೂರಿಯಾ ಗೊಬ್ಬರ ಸರಬರಾಜಿನಿಂದ ರೈತರಿಗೂ ಅನುಕೂಲವಾಗುತ್ತಿದೆ, ವಾರ್ಷಿಕವಾಗಿ 10 ಸಾವಿರ ಕೋಟಿ ರು. ಉಳಿತಾಯ ಆಗುತ್ತಿದೆ. 6.5 ಕೋಟಿ ರೈತರಿಗೆ ಅವರ ಜಮೀನಿನ ಮಣ್ಣಿನ ಫಲವತ್ತತೆಯ ಕಾರ್ಡ್‌ ಸಿಕ್ಕಿದೆ. ಯಾವುದು ಬೆಳೆದರೆ ಉತ್ತಮ ಎಂಬ ಮಾಹಿತಿ ಲಭ್ಯವಾಗಿದೆ. ಇ-ನ್ಯಾಮ್‌, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ, ರಸಗೊಬ್ಬರದಲ್ಲಿ ಸ್ವಾವಲಂಬನೆ ಸಾ​ಧಿಸಲು 48 ಸಾವಿರ ಕೋಟಿ ರು. ಹೂಡಿಕೆ, ರೈತರು ಹೆಚ್ಚಿನ ಬಡ್ಡಿದರಕ್ಕೆ ಸಾಲ ಪಡೆಯುವುದರಿಂದ ಮುಕ್ತಿ ನೀಡುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ನಂತಹ ಯೋಜನೆಗಳು ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿವೆ. ಅಷ್ಟೇ ಅಲ್ಲ, ಇದೇ ದಿಸೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಸತ್ತಿನಲ್ಲಿ ಮೂರು ಮಸೂದೆ ಮಂಡಿಸಿ, ಅಂಗೀಕಾರ ಪಡೆದಿದೆ. ಇವು ದೇಶದ ಇತಿಹಾಸದಲ್ಲೇ ರೈತರ ಹಿತದೃಷ್ಟಿಯಿಂದ ಮಂಡಿಸಿದ, ನಿಜವಾಗಿಯೂ ರೈತರ ಪರ ಕಾಳಜಿ ಇರುವ, ಸುತ್ಯಾರ್ಹ ಮಸೂದೆಗಳಾಗಿವೆ.

'ಕನಸಿನ ಲೋಕದಲ್ಲಿರುವ ರಾಹುಲ್ ತಮ್ಮನ್ನು ತಾವು ರಾಜ ಅಂದುಕೊಂಡಿದ್ದಾರೆ'

ರೈತರಿಗೆ ಹೇಗೆ ಅನುಕೂಲ?

ರೈತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆನಡುವೆ ಇದ್ದ ಕಬಂಧಬಾಹುವನ್ನು ಹೊಸ ಮಸೂದೆಯು ತೊಲಗಿಸಲಿದೆ. ಎಪಿಎಂಸಿ ಮಂಡಿಗಳಿಗೇ ಹೋಗಿ ರೈತರು ಈಗ ತಮ್ಮ ಉತ್ಪನ್ನ ಮಾರಬೇಕಿಲ್ಲ. ಬೇಕಿದ್ದರೆ ಆನ್‌ಲೈನ್‌, ಇಲ್ಲದಿದ್ದರೆ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಗೆ ಹೋಗಿಯೂ ಉತ್ಪನ್ನ ಮಾರಾಟ ಮಾಡಬಹುದು. ಇಲ್ಲಿ ರೈತರು ಖಾಸಗಿಯವರಿಗೆ ಸಹ ಮಾರಾಟ ಮಾಡಬಹುದು. ಬೆಳೆದ ಬೆಳೆಗೆ, ಅದರ ಗುಣಮಟ್ಟಕ್ಕೆ ಯಾರು ಜಾಸ್ತಿ ದುಡ್ಡು ಕೊಡುತ್ತಾರೋ, ಅವರಿಗೆ ಮಾರಬಹುದು. ಒಟ್ಟಿನಲ್ಲಿ, ಅವರು ಖಾಸಗಿಯವರಿಗಾದರೂ ಮಾರಾಟ ಮಾಡಲಿ, ಸರ್ಕಾರಕ್ಕಾದರೂ ಕೊಡಲಿ, ಲಾಭವಾಗುವುದು ಮಾತ್ರ ರೈತರಿಗೆ. ಅಷ್ಟರಮಟ್ಟಿಗೆ ಮಾರುಕಟ್ಟೆಹಾಗೂ ರೈತರ ನಡುವಿನ ಅಂತರವನ್ನು ಈ ಮಸೂದೆ ಕಡಿತಗೊಳಿಸುತ್ತದೆ. ಮಾರುವವನೇ ಉತ್ಪನ್ನದ ಒಡೆಯನಾಗುತ್ತಾನೆ.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯೂ ಅಷ್ಟೇ ಪ್ರಮುಖವಾಗುತ್ತದೆ. ಈ ದಿಸೆಯಲ್ಲೂ ನರೇಂದ್ರ ಮೋದಿ ಸರ್ಕಾರ ದೂರಾಲೋಚನೆ ಮಾಡಿದ್ದು, ಮಸೂದೆಗಳ ಅನ್ವಯ ರೈತರಿಗೆ ಹೆಚ್ಚಿನ ಬೆಂಬಲ ಬೆಲೆ ಸಿಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ರೈತಪರ ಮಸೂದೆಗಳಿಗೆ ಅಂಗೀಕಾರ ದೊರೆಯುತ್ತಲೇ ಮೋದಿ ಸರ್ಕಾರವು ಹಿಂಗಾರಿನಲ್ಲಿ ಬೆಳೆಯುವ ಹೆಸರುಕಾಳಿಗೆ 225 ರು., ಮಸೂರ ಬೇಳೆಗೆ 300 ರು., ಸಾಸಿವೆಗೆ 225, ಕುಸುಬಿಗೆ 112, ಗೋ​ಗೆ 50 ಹಾಗೂ ಬಾರ್ಲಿಗೆ 75 ರು. ಬೆಂಬಲ ಬೆಲೆ ಘೋಷಿಸಿದೆ.

ದಾಸ್ತಾನು ಸಮಸ್ಯೆ ಇರಲ್ಲ

ಅಗತ್ಯ ಸರಕುಗಳ ಕಾಯ್ದೆ(ಇಸಿಎ) ಅನ್ವಯ ರೈತರು ಖಾಸಗಿ ದಾಸ್ತಾನುದಾರರ ಬಳಿಯೂ ತಮ್ಮ ಉತ್ಪನ್ನವನ್ನು ದಾಸ್ತಾನು ಮಾಡುವ, ಸಂಗ್ರಹಿಸುವ ಅವಕಾಶ ಇರುವುದರಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಖರೀದಿದಾರರು ಹುಟ್ಟುತ್ತಾರೆ. ಸರ್ಕಾರದ ದಾಸ್ತಾನುಗಳಲ್ಲಿ ಇಡಲು ಸ್ಥಳದ ಸಮಸ್ಯೆ, ಭದ್ರತೆ ಹಾಗೂ ಉತ್ಪನ್ನ ಹಾಳಾಗುವ ಸಮಸ್ಯೆ ನಿವಾರಣೆಯಾಗುತ್ತದೆ. ಯಾವುದೇ ರೈತರು ತಮ್ಮ ಉತ್ಪನ್ನ ದಾಸ್ತಾನು ಮಾಡಿ, ಅದಕ್ಕೆ ಉತ್ತಮ ಬೆಲೆ ಇದ್ದಾಗ ಮಾರಾಟ ಮಾಡಲು ಸಹಕಾರಿಯಾಗುತ್ತದೆ. ಆಗ ರೈತರು ಕೃಷಿ ಉತ್ಪನ್ನಕ್ಕೆ ಇಂತಿಷ್ಟೇ ಬೆಲೆ ನೀಡಬೇಕು ಎಂದು ದರ ನಿಗದಿ ಮಾಡಲು, ರೈತರು ಖಾಸಗಿ ಗೋದಾಮುಗಳಲ್ಲಿ ದಾಸ್ತಾನು ಮಾಡುವುದು ಜಾಸ್ತಿಯಾದಾಗ, ಖಾಸಗಿಯವರೂ ದಾಸ್ತಾನು ಬೆಲೆ ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಒಟ್ಟಾರೆಯಾಗಿ ಈ ಮಸೂದೆಗಳು ರೈತರ ಸಮಸ್ಯೆಗಳನ್ನು ಮೂಲದಿಂದಲೇ ಕಿತ್ತೆಸೆಯುವುದರಿಂದ ಬದಲಾವಣೆ ಸಾಧ್ಯ.

ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಗಾಗಿ ಇಷ್ಟೆಲ್ಲ ಯೋಜನೆ ಜಾರಿಗೊಳಿಸಿದ್ದರೂ, ಪ್ರತಿಪಕ್ಷಗಳು ಸೇರಿ ಹಲವು ಕುತ್ಸಿತ ಮನಸ್ಸುಗಳು ಸರ್ಕಾರದ ಬಗ್ಗೆ ಸುಳ್ಳುಗಳನ್ನು ಹಬ್ಬಿಸುತ್ತಿವೆ. ಜನರ ದಾರಿ ತಪ್ಪಿಸುತ್ತಿವೆ. ರೈತರ ಪರ ಮಸೂದೆಗಳ ವಿಚಾರದಲ್ಲಿಯೇ, ಕೇಂದ್ರ ಸರ್ಕಾರ ಎಪಿಎಂಸಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ, ಸರ್ಕಾರ ಇನ್ನುಮುಂದೆ ಕೃಷಿ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದೆಲ್ಲ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಸರ್ಕಾರವೇ ಖರೀದಿ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ದಲ್ಲಾಳಿಗಳ ಕಾಟ ತಪ್ಪುತ್ತೆ

ಅಷ್ಟಕ್ಕೂ ಕೃಷಿಯಲ್ಲಿ ಕೇಂದ್ರ ಸರ್ಕಾರ ತರುತ್ತಿರುವ ಬದಲಾವಣೆಯಿಂದ ರೈತರ ಮೂಲ ಸಮಸ್ಯೆಗಳೇ ಬಗೆಹರಿಯಲಿವೆ. ದಲ್ಲಾಳಿಗಳ ಕಾಟ ತಪ್ಪಲಿದೆ. ಮಾರಾಟಕ್ಕಾಗಿ ಪರಿತಪಿಸದೆ ಎಲ್ಲಿ ಲಾಭ ಸಿಗುತ್ತದೆಯೋ, ಅವರಿಗೆ ಕೃಷಿ ಉತ್ಪನ್ನ ಮಾರಾಟ ಮಾಡುವುದರಿಂದ ರೈತರಿಗೆ ಲಾಭವಾಗಲಿದೆ. ಕೃಷಿ ಪದ್ಧತಿಯಲ್ಲಿ ಹೊಸ ವ್ಯವಸ್ಥೆ ಜಾರಿಯಾಗಿ, ತಾಂತ್ರಿಕ ಸುಧಾರಣೆ ಆಗಲಿದೆ. ಹಳೇ ಪದ್ಧತಿಗಳು ನಶಿಸಿ, ಯಾಂತ್ರಿಕ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ.

ಅಷ್ಟೇ ಅಲ್ಲ, ಮಸೂದೆಗಳು ರೈತರಿಗೆ ಕಾನೂನಿನ ಭದ್ರತೆಯನ್ನೂ ಒದಗಿಸಲಿವೆ. ಸೇವಾ ಒಪ್ಪಂದಗಳಿಗೆ ಮೂರು ವರ್ಷ ನಿಗದಿ ಮಾಡಿದ್ದು, ಮೋಸ, ವಂಚನೆಗೂ ತಡೆ ನೀಡಲಾಗಿದೆ. ಅಷ್ಟಕ್ಕೂ 2018-19ನೇ ಸಾಲಿನಲ್ಲಿ ಏಳು ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಕೃಷಿ ಖಾತೆ ಸ್ಥಾಯಿ ಸಮಿತಿಯು ಎಪಿಎಂಸಿ, ಕೃಷಿ ಸೇರಿ ಹಲವು ಸಮಸ್ಯೆಗಳ ಕುರಿತು ವರದಿ ನೀಡಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಕೃಷಿ ಆಧಾರಿತ ಸುಧಾರಣೆಗಳು ಮಧ್ಯವರ್ತಿಗಳಿಗೆ ಡೆತ್‌ ವಾರೆಂಟ್‌ ಜಾರಿಗೊಳಿಸಿದಂತಾಗಿದ್ದು, ರೈತ ಕಲ್ಯಾಣ ಆಗಲಿದೆ. ವಾಸ್ತವದಲ್ಲಿ ಇದು ರೈತರಿಗೆ ಆತ್ಮನಿರ್ಭರವಾಗಲಿದೆ. ಎಪಿಎಂಸಿ ಎಂಬ ಸರ್ವಂ ಪರವಶಂ ದುಖಂ ನೀತಿಯ ಬದಲಾಗಿ, ಸುಧಾರಣೆಗಳು ಆತ್ಮವಶಂ ಸುಖಂ ಎನಿಸಲಿವೆ.

-  ಡಾ.ಸಮೀರ್‌ ಕಾಗಲ್ಕರ್‌

ಬೆಂಗಳೂರು

Follow Us:
Download App:
  • android
  • ios