Ex-girlfriend bites tongue: ಉತ್ತರ ಪ್ರದೇಶದ ಕಾನ್ಪುರದಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಗೆ ಬಲವಂತವಾಗಿ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಆತನ ಲೈಂಗಿಕ ಕಿರುಕುಳದಿಂದ ತನ್ನನ್ನು ರಕ್ಷಿಸಿಕೊಳ್ಳಲು, ಮಹಿಳೆಯು ಆತನ ನಾಲಿಗೆಯನ್ನು ಕಚ್ಚಿ ತುಂಡರಿಸಿದ್ದಾಳೆ. 

ಒತ್ತಾಯಪೂರ್ವಕವಾಗಿ ಕಿಸ್: ಮಾಜಿ ಗೆಳೆಯನಿಗೆ ಮಾತು ಬರದಂತೆ ಮಾಡಿದ ಯುವತಿ

ಹೆಂಡತಿ ಇದ್ದರೂ ವಿವಾಹಿತ ವ್ಯಕ್ತಿಯೋರ್ವ ತನ್ನ ಮಾಜಿ ಗೆಳತಿಗೆ ಮುತ್ತು ಕೊಡಲು ಹೋಗಿ ಮಾತು ಕಳೆದುಕೊಂಡಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಗೆಳತಿಯಿಂದಲೇ ನಾಲಿಗೆ ಕಳೆದುಕೊಂಡವನನ್ನು ಚಂಪಿ ಎಂದು ಗುರುತಿಸಲಾಗಿದೆ.

ವಿವಾಹ ನಿಶ್ಚಯದ ಬಳಿಕ ವಿವಾಹಿತನಿಂದ ದೂರಾಗಿದ್ದ ಗೆಳತಿ

ಹೌದು ವಿವಾಹಿತನೋರ್ವ 35 ವರ್ಷದ ಮಹಿಳೆ ಜೊತೆ ಮದುವೆಯ ನಂತರವೂ ಸಂಬಂಧ ಇರಿಸಿಕೊಂಡಿದ್ದ. ಆದರೆ ಇತ್ತೀಚೆಗೆ ಆ ಮಹಿಳೆಗೂ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಆ ಮಹಿಳೆ ಈತನಿಂದ ಅಂತರ ಕಾಯ್ದುಕೊಂಡಿದ್ದಳು. ಇದು ಆತನನ್ನು ಕುಪಿತಗೊಳ್ಳುವಂತೆ ಮಾಡಿತ್ತು. ಹೀಗಾಗಿ ಆತ ಮತ್ತೆ ಮತ್ತೆ ಆಕೆಯ ಬಳಿ ಭೇಟಿಯಾಗುವಂತೆ ಒತ್ತಾಯ ಮಾಡುತ್ತಿದ್ದ. ಈ ಮಧ್ಯೆ ಆಕೆ ಸೋಮವಾರ ಮಧ್ಯಾಹ್ನದ ವೇಳೆಗೆ ಮನೆ ಸಮೀಪದ ಕೆರೆಯ ಬಳಿ ಹೋಗಿದ್ದಾಳೆ. ಆಕೆ ಒಬ್ಬಳೇ ಹೋಗುತ್ತಿರುವುದನ್ನು ನೋಡಿದ ಆರೋಪಿ, ಆಕೆಯನ್ನು ಕೆರೆಯ ಬಳಿಗೆ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯನ್ನು ತಬ್ಬಿಕೊಂಡ ಆತ ಆಕೆಗೆ ಒತ್ತಾಯಪೂರ್ವಕವಾಗಿ ಕಿಸ್ ಮಾಡುವುದಕ್ಕೆ ಮುಂದಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಕಿಸ್ ಮಾಡಲು ಬಂದಾಗ ನಾಲಗೆ ಕಚ್ಚಿ ತುಂಡರಿಸಿದ ಯುವತಿ:

ಮಹಿಳೆ ವಿರೋಧಿಸಿದಾಗ ಇಬ್ಬರ ಮಧ್ಯೆ ಕಿತ್ತಾಟವಾಗಿದೆ. ಆತ ತನ್ನ ಕಿರುಕುಳ ಮುಂದುವರಸಿದ್ದು, ಆಕೆಗೆ ಕಿಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಆತನ ನಾಲಗೆಯನ್ನು ಗಟ್ಟಿಯಾಗಿ ಕಚ್ಚಿ ಕತ್ತರಿಸಿದ್ದಾಳೆ. ಇದರಿಂದ ವಿವಾಹಿತನ ನಾಲಗೆ ಕತ್ತರಿಸಲ್ಪಟ್ಟು ರಕ್ತ ಸೋರಿದ್ದು, ಆತ ನೋವಿನಿಂದಲೇ ಜೋರಾಗಿ ಕಿರುಚಿದ್ದಾನೆ. ಆತನ ಕಿರುಚಾಟ ಕೇಳಿ ಅಲ್ಲಿದ್ದಅಕ್ಕಪಕ್ಕದ ಮನೆಯ ಜನ ಓಡಿ ಬಂದಿದ್ದು, ಬಳಿಕ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಆತನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಅಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಆತನನ್ನು ಕಾನ್ಪುರದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಉಪ ಪೊಲೀಸ್ ಕಮೀಷನರ್ ದಿನೇಶ್ ತ್ರಿಪಾಠಿ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಜಿಪ್‌ ಲೈನ್ ಅಪಘಾತವಾಗಿದೆ ಎಂದು ಸುಳ್ಳು ಎಐ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ

ಇದನ್ನೂ ಓದಿ: ವಿದೇಶಿ ನೆಲದಲ್ಲಿ ಸೀರೆಯುಟ್ಟು ಟ್ರೆಂಡ್ ಉಲ್ಟಾ ಮಾಡಿದ ಭಾರತೀಯ ನಾರಿ: ಸೆಲ್ಪಿಕೇಳಿದ ಫಾರಿನರ್ಸ್‌