90ರ ದಶಕದ ಹೊಸ ವರ್ಷದ ರೆಸಲ್ಯೂಶನ್‌ಗಳು ಹೇಗಿದ್ದವು ಗೊತ್ತಾ? ನಂಗೆ ಬಾಯ್‌ ಫ್ರೆಂಡ್ಸ್ ಬೇಕು, ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಬೇಕು, ವಡಾ ಪಾವ್ ತಿನ್ನಬೇಕು, ಪಾವ್ ಭಾಜಿ ತಿನ್ನಬೇಕು, ಒಂದು ಟ್ರಿಪ್ ಹೋಗಬೇಕು, ಬುಕ್ ಇಲ್ಲದೇ ಕಾಲೇಜಿಗೆ ಹೋಗಬೇಕು ಎನ್ನುವ ರೆಸಲ್ಯೂಶನ್ ಅನ್ನು ಹೇಳಿಕೊಂಡಿದ್ದಾರೆ.

ಹೊಸ ವರ್ಷದ ರೆಸಲ್ಯೂಶನ್, ಅಂದರೆ ಹೊಸ ವರ್ಷದಲ್ಲಿ ಜಾರಿಗೆ ತರಬೇಕಾದ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳದವರು ಕಡಿಮೆ. ಜಿಮ್‌ಗೆ ಹೋಗಬೇಕು, ಡಯಟ್ ಮಾಡಬೇಕು, ಹಣ ಉಳಿಸಬೇಕು ಹೀಗೆ ಅನೇಕ ವಿಷಯಗಳಿರುತ್ತವೆ. ಆದರೆ, ಕೆಲವು ವರ್ಷಗಳ ಹಿಂದೆ ಜನರ ಹೊಸ ವರ್ಷದ ರೆಸಲ್ಯೂಶನ್ ಹೇಗಿರುತ್ತಿತ್ತು? ಅಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ. 

1997ರಲ್ಲಿ ಬಿಡುಗಡೆಯಾದ ವಿಡಿಯೋ ಇದು. ಸಾಮಾನ್ಯ ಭಾರತೀಯರು ತಮ್ಮ ಹೊಸ ವರ್ಷದ ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಎರಡು ದಶಕಗಳ ಹಿಂದಿನ ಈ ವಿಡಿಯೋ ತಮಾಷೆಯಾಗಿದ್ದು, ಹಳೆಯ ನೆನಪುಗಳನ್ನು ಕೆದಕುವಂತಿದೆ.

ನಾಲ್ಕು ಪ್ಲೇಟ್ ಪಾವ್ ಭಾಜಿ ತಿನ್ನಬೇಕು:

The90sIndia ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 1997ರಲ್ಲಿ ಶೇಖರ್ ಸುಮನ್ ನಡೆಸಿಕೊಡುತ್ತಿದ್ದ ಜನಪ್ರಿಯ ಟಾಕ್ ಶೋ 'ಮೂವರ್ಸ್ ಆ್ಯಂಡ್ ಶೇಕರ್ಸ್'ನ ವಿಡಿಯೋ ಇದಾಗಿದೆ. ಮಹಿಳೆಯೊಬ್ಬರಿಗೆ ಹೊಸ ವರ್ಷದ ರೆಸಲ್ಯೂಶನ್ ಬಗ್ಗೆ ಕೇಳಿದಾಗ, 'ನಾನು ಕಟ್ಟುನಿಟ್ಟಾದ ಡಯಟ್ ಪಾಲಿಸುತ್ತೇನೆ' ಎನ್ನುತ್ತಾರೆ. ಚಾಟ್ ಅಥವಾ ಸಿಹಿತಿಂಡಿ ಏನನ್ನೂ ತಿನ್ನುವುದಿಲ್ಲ ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಅವರು ನಾಲ್ಕು ಪ್ಲೇಟ್ ಪಾವ್ ಭಾಜಿ ಮತ್ತು ಬಟರ್ ಆರ್ಡರ್ ಮಾಡುತ್ತಾರೆ.

ಮತ್ತೊಬ್ಬ ಹುಡುಗಿಗೆ ವಿಭಿನ್ನವಾದ ಗುರಿ ಇತ್ತು. 'ನಾನು ತುಂಬಾ ಬಾಯ್‌ಫ್ರೆಂಡ್ಸ್‌ಗಳನ್ನು ಮಾಡಿಕೊಳ್ಳಬೇಕು' ಎಂದು ಆಕೆ ಹೇಳಿದಳು. ಆದರೆ, ಇನ್ನೊಬ್ಬ ಯುವತಿ ಹಣದ ಬಗ್ಗೆ ಮಾತನಾಡಿದಳು. 'ನಾನು ಕಡಿಮೆ ಖರ್ಚು ಮಾಡುತ್ತೇನೆ' ಎಂದು ಆಕೆ ಹೇಳಿದಳು. ಮತ್ತೊಬ್ಬರು 'ನಾನು ಮನೆಯಿಂದ ಓಡಿಹೋಗುತ್ತೇನೆ' ಎಂದರು.

View post on Instagram

ಮುಂದಿನ ವರ್ಷವಾದರೂ ಪ್ಯಾಂಟ್ ಮತ್ತು ಟಿ-ಶರ್ಟ್ ಹಾಕಬೇಕು

ಇಷ್ಟೇ ಅಲ್ಲದೆ, ಇತರ ಪುರುಷರು ಮತ್ತು ಮಕ್ಕಳು ಕೂಡ ತಮ್ಮ ಹೊಸ ವರ್ಷದ ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಯುವಕ, 'ನಾನು ಮುಂದಿನ ವರ್ಷವಾದರೂ ಪ್ಯಾಂಟ್ ಮತ್ತು ಟಿ-ಶರ್ಟ್ ಧರಿಸುತ್ತೇನೆ' ಎನ್ನುತ್ತಾನೆ. ಒಂದು ಮಗು 'ನಾನು ಶಾಲೆಗೆ ಪುಸ್ತಕ ತೆಗೆದುಕೊಂಡು ಹೋಗುವುದಿಲ್ಲ' ಎನ್ನುತ್ತದೆ. ಒಟ್ಟಿನಲ್ಲಿ, ಈ ತಮಾಷೆಯ ವಿಡಿಯೋ ಈಗ ಜನರ ಗಮನ ಸೆಳೆದಿದೆ. ಅಂದಿನ ಕಾಲದ ಜನರು ಕೂಲ್ ಆಗಿದ್ದರು, ಅವರ ಇಂಗ್ಲಿಷ್ ಮತ್ತು ಮಾತಿನ ಶೈಲಿ ಉತ್ತಮವಾಗಿತ್ತು ಎಂಬಂತಹ ಕಾಮೆಂಟ್‌ಗಳು ವಿಡಿಯೋಗೆ ಬರುತ್ತಿವೆ.