ಭಾರತ-ಪಾಕ್ ಉದ್ವಿಗ್ನತೆಯಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ೧೩೮ ದೇಶೀ-ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಭದ್ರತೆ ಹೆಚ್ಚಿಸಿ, ಪುಣೆ, ನಾಸಿಕ್ ವಿಮಾನ ನಿಲ್ದಾಣಗಳಲ್ಲಿ ಮೇ ೧೫, ೨೦೨೫ರವರೆಗೆ ವಾಣಿಜ್ಯ, ಅನಿಗದಿತ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಪ್ರಯಾಣಿಕರು ವಿಮಾನ ಸ್ಥಿತಿ ಪರಿಶೀಲಿಸಿ, ವಿಮಾನ ನಿಲ್ದಾಣಕ್ಕೆ ಬೇಗ ಬರಲು ಸೂಚಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ದೇಶದ ರಾಜಧಾನಿ ದೆಹಲಿಯನ್ನು ಟಾರ್ಗೆಟ್‌ ಮಾಡಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 138 ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳು ರದ್ದಾಗಿವೆ. ಭದ್ರತೆ ಹೆಚ್ಚಿರುವ ಕಾರಣ ದೇಶದ ಕೆಲ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ವಿಮಾನ ನಿಲ್ದಾಣ ಅಧಿಕಾರಿಗಳ ಪ್ರಕಾರ, ರದ್ದಾದ ವಿಮಾನಗಳಲ್ಲಿ 4 ಅಂತರರಾಷ್ಟ್ರೀಯ ಆಗಮನಗಳು, 5 ಅಂತರರಾಷ್ಟ್ರೀಯ ನಿರ್ಗಮನಗಳು, 63 ದೇಶೀಯ ಆಗಮನಗಳು ಮತ್ತು 66 ದೇಶೀಯ ನಿರ್ಗಮನಗಳು ಸೇರಿವೆ.

ಅನಿಶ್ಚಿತ ಪರಿಸ್ಥಿತಿಯ ಕಾರಣ, ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಬೇಗ ವಿಮಾನ ನಿಲ್ದಾಣಕ್ಕೆ ಬರುವಂತೆ ಕೇಳಿದ್ದಾರೆ. ಭದ್ರತಾ ತಪಾಸಣೆಗೆ ಹೆಚ್ಚು ಸಮಯವಾಗಬಹುದು ಎಂದು ಸೂಚನೆ ನೀಡಿದ್ದಾರೆ. ಪ್ರಯಾಣಿಕರು ತಮ್ಮ ಮನೆಗಳಿಂದ ಹೊರಡುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ವಿಮಾನ ನಿಲ್ದಾಣದ ಕಾರ್ಯಗಳು ಸಾಮಾನ್ಯವಾಗಿವೆ, ಆದರೆ ಭದ್ರತೆ ಹೆಚ್ಚಿರುವುದರಿಂದ ಕೆಲವು ವಿಳಂಬಗಳಾಗಬಹುದು" ಎಂದಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಕಾರ್ಯಚರಣೆಗಳು ಈಗ ಸಾಮಾನ್ಯವಾಗಿವೆ ಎಂದು DIAL (ದೆಹಲಿ ವಿಮಾನ ನಿಲ್ದಾಣ ಸಂಸ್ಥೆ) ಈ ಬಗ್ಗೆ ಟ್ವೀಟ್‌ ಅಂದರೆ ಈಗಿನ X ನಲ್ಲಿ ತಿಳಿಸಿದೆ. "ಆದರೆ, ವಾಯುಪ್ರದೇಶದ ಪರಿಸ್ಥಿತಿಗಳು ಬದಲಾಗುತ್ತಿವೆ ಮತ್ತು ಭದ್ರತೆ ಹೆಚ್ಚಿಸಲಾಗಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ನೀಡಿದ ಆದೇಶದಂತೆ, ಕೆಲ ವಿಮಾನಗಳ ವೇಳಾಪಟ್ಟಿಗೆ ಪರಿಣಾಮ ಆಗಬಹುದು ಹಾಗೂ ಭದ್ರತಾ ತಪಾಸಣೆಗೆ ಹೆಚ್ಚು ಸಮಯ ಬೇಕಾಗಬಹುದು." ಎಂದಿದೆ.

ಇನ್ನೊಂದೆಡೆ, ಪುಣೆ ಮತ್ತು ನಾಸಿಕ್ (ಓಜರ್) ವಿಮಾನ ನಿಲ್ದಾಣಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಎಲ್ಲಾ ನಿಗದಿತವಲ್ಲದ ವಿಮಾನಗಳಿಗೆ ನಿಷೇಧವಿದೆ ಮತ್ತು ಮೇ 15, 2025 ರವರೆಗೆ ಕೆಲ ವಾಣಿಜ್ಯ ವಿಮಾನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

"ಪುಣೆ ಮತ್ತು ಓಜರ್ ವಿಮಾನ ನಿಲ್ದಾಣಗಳು ಕೆಲವು ವಾಣಿಜ್ಯ ವಿಮಾನಗಳು ಮತ್ತು ಎಲ್ಲಾ ನಿಗದಿತವಲ್ಲದ ವಿಮಾನಗಳಿಗೆ ಮೇ 15ರವರೆಗೆ ಮುಚ್ಚಲ್ಪಟ್ಟಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಓಜರ್ ಮತ್ತು ಪುಣೆಗೆ ನಿಗದಿತವಲ್ಲದ ವಿಮಾನ ಸಂಚಾರವನ್ನು ಈ ದಿನಾಂಕದವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ" ಎಂದು ಹೇಳಲಾಗಿದೆ.

ದೆಹಲಿ ಮೂಲಕ ಪ್ರಯಾಣಿಸುವವರು ತಮ್ಮ ವಿಮಾನಗಳಿಗೆ ತಾವು ಸಮಯಕ್ಕೆ ಮುಂಚಿತವಾಗಿ ತಲುಪಬೇಕು ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಸೂಚಿಸಲಾಗಿದೆ. ವಿಮಾನ ನಿಲ್ದಾಣ ಅಧಿಕಾರಿಗಳು, ವಿಮಾನದ ಬಗ್ಗೆ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಬಳಸಿ ಎಂದು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.

ಯಾವುದೇ ತೊಂದರೆ ಇಲ್ಲದೆ ಕಾರ್ಯಚರಣೆ ನಡೆಯುತ್ತಿವೆ ಎಂಬ ಭರವಸೆಯಿದ್ದರೂ, ಶುಕ್ರವಾರ ಹಲವು ವಿಮಾನಯಾನ ಸಂಸ್ಥೆಗಳು ದೆಹಲಿಗೆ ಬರುವ ಮತ್ತು ಅಲ್ಲಿಂದ ಹೋಗುವ ಕನಿಷ್ಠ 138 ವಿಮಾನಗಳನ್ನು ರದ್ದುಗೊಳಿಸಿದ್ದವು. ಇದು ಪ್ರಾದೇಶಿಕ ಭದ್ರತಾ ಪರಿಸ್ಥಿತಿ ನಾಗರಿಕ ವಿಮಾನಯಾನ ಸೇವೆಗಳ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುತ್ತದೆ.

Scroll to load tweet…