ದೆಹಲಿಯನ್ನು ಟಾರ್ಗೆಟ್ ಮಾಡಿ ಕ್ಷಿಪಣಿ ಹಾರಿಸಿದ ಪಾಕ್, ಹೊಡೆದುರಳಿಸಿದ ಭಾರತ
ಮೇ 10 ರಂದು ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಭಾರತ ಕ್ಷಿಪಣಿಯನ್ನು ತಡೆದು ಪ್ರತಿದಾಳಿ ನಡೆಸಿದೆ. ಪಾಕಿಸ್ತಾನವು ಭಾರತದ ವಾಯುನೆಲೆಗಳು, ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ, ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಪ್ರತಿದಾಳಿ ನಡೆಸಿದೆ.

ಮೇ 10ರ ಶನಿವಾರ ಮುಂಜಾನೆ ದೆಹಲಿಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ದಾಳಿ ಮಾಡಿದ್ದು, ಹರಿಯಾಣದ ಸಿರ್ಸಾ ಬಳಿ ಪಾಕಿಸ್ತಾನದ ಫತಾಹ್ 2 ಕ್ಷಿಪಣಿಯನ್ನು ಭಾರತ ತಡೆ ಹಿಡಿದಿದೆ. ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಲು ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಬಳಸಿದೆ ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿವೆ. ಇದರ ಜೊತೆಗೆ ಭಾರತದ ವಾಯುನೆಲೆಗಳು, ಆಸ್ಪತ್ರೆಗಳು, ಶಾಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ 1.40 ರಿಂದ ಪಾಕಿಸ್ತಾನ ನಿರಂತರ ದಾಳಿ ನಡೆಸಿದೆ. ಭಾರತದ ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿವೆ.
ಪಾಕಿಸ್ತಾನ 26 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಪಾಕಿಸ್ತಾನವು ಪಶ್ಚಿಮದ ಮುಂಭಾಗದಲ್ಲಿರುವ ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು, ಜೆಟ್‌ಗಳನ್ನು ಬಳಸಿದೆ. ಪಾಕಿಸ್ತಾನದ ಕ್ಷಿಪಣಿಯನ್ನು ತಡೆಯಲು ಬ್ಯಾಲೆಸ್ಟಿಕ್ ಕ್ಷಿಪಣಿ ಯನ್ನು ಭಾರತ ಬಳಸಿದೆ. ಪಾಕಿಸ್ತಾನದ ಎರಡು ಫೈಟರ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನವು ಯುದ್ಧ ಮಾಡುವಂತೆ ಪ್ರಚೋದಿಸುತ್ತಿದೆ ಎಂದು ಭಾರತ ಹೇಳಿದೆ. ಇದರ ಜೊತೆಗೆ ಪಾಕಿಸ್ತಾನವು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಇದಕ್ಕೆ ಭಾರತವು ದಾಖಲೆ ಸಮೇತ ಸ್ಪಷ್ಟ ಉತ್ತರ ನೀಡಿದೆ. ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿ ಸಿರ್ಸಾ ಏರ್ ಬೇಸ್ ಸುರಕ್ಷಿತವಾಗಿದೆ ಎಂದು ಹೇಳಿದೆ.
ಪಾಕಿಸ್ತಾನದ ನಿರಂತರ ದಾಳಿ ಪ್ರತ್ಯುತ್ತರವಾಗಿ ಭಾರತ ಕೂಡ ದಾಳಿ ನಡೆಸಿದ್ದು, ಪಾಕಿಸ್ತಾನದ 6 ವಾಯನೆಲೆಗಳ ಮೇಲೆ ದಾಳಿಮಾಡಿದೆ. ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ನೂರ್ ಖಾನ್ ವಾಯುನೆಲೆ , ಚಕ್ಲಾಲಾ ನಗರದ ಮುರಿಯ್ ವಾಯುನೆಲೆ , ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫೀಕಿ ವಾಯುನೆಲೆ, ಮುರಿಯದ್ ವಾಯುನೆಲೆ , ಸುಕ್ಕೂರ್ ಮತ್ತು ಚುನಿಯನ್ ವಾಯನೆಲೆ ಮೇಲೆ ದಾಳಿ ಮಾಡಿದೆ.
ಶನಿವಾರ ಮುಂಜಾನೆ ಪಾಕಿಸ್ತಾನ ಸೇನೆಯು ಶಂಭು ದೇವಸ್ಥಾನದಂತಹ ಹಲವು ಧಾರ್ಮಿಕ ಸ್ಥಳಗಳು ಮತ್ತು ಜಮ್ಮುವಿನ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದು ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿ, "ಪಾಕಿಸ್ತಾನವು ಮೇ 10, 2025 ರಂದು ಪ್ರಸಿದ್ಧ ಶಂಭು ದೇವಸ್ಥಾನ ಮತ್ತು ಜಮ್ಮುವಿನ ವಸತಿ ಪ್ರದೇಶಗಳಂತಹ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದನ್ನು ಮುಂದುವರೆಸಿದೆ. ರಾತ್ರಿಯಿಡೀ ಸಶಸ್ತ್ರ ಡ್ರೋನ್‌ಗಳನ್ನು ಹಾರಿಸಿದ್ದು, ನಾಗರಿಕರು ಮತ್ತು ಧಾರ್ಮಿಕ ಸ್ಥಳಗಳನ್ನೇ ಟಾಗೆಟ್ ಮಾಡಿ ಅಪಾಯವನ್ನುಂಟುಮಾಡುತ್ತಿದೆ. ಭಾರತೀಯ ಸಶಸ್ತ್ರ ಪಡೆಗಳು ಜಾಗರೂಕವಾಗಿವೆ ಮತ್ತು ರಾಷ್ಟ್ರದ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿವೆ." ಎಂದು ಹೇಳಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ , ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿ ನಡೆಸಿದ್ದು, ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರದಲ್ಲಿನ ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿ ಮಾಡಿದೆ. ಭಾರತದ ಮೇಲೆ ಪದೇ ಪದೇ ಪಾಕಿಸ್ತಾನ ದಾಳಿ ಮಾಡಿ ಯುದ್ಧಕ್ಕೆ ಪ್ರಚೋದಿಸುತ್ತಿದೆ. ನಾವು ಪಾಕಿಸ್ತಾನದ ಏರ್ ಬೇಸ್ ಮೇಲೆ ಮಾತ್ರ ದಾಳಿ ಮಾಡಿದ್ದೇವೆ. ಆದರೆ ಪಾಕ್ ನಮ್ಮ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದಿದ್ದಾರೆ.