ಸಾನಿಯಾ ಮಿರ್ಜಾ, ದುಬೈನಲ್ಲಿನ ಉದ್ವಿಗ್ನ ರಾಜಕೀಯ ಪರಿಸ್ಥಿತಿ ಮತ್ತು ಮಗನ ಸುರಕ್ಷತೆಯ ಕಾಳಜಿಯಿಂದಾಗಿ ಹೈದರಾಬಾದ್‌ಗೆ ಮರಳಿದ್ದಾರೆ. ತಮ್ಮ ಮನೆಯ ಬಳಿ ಫೈಟರ್ ಜೆಟ್‌ಗಳ ಹಾರಾಟದ ಅನುಭವದ ನಂತರ, ಅವರು ಈದ್ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಭಾರತಕ್ಕೆ ವಾಪಸಾಗುವ ನಿರ್ಧಾರ ಮಾಡಿದ್ದಾರೆ.

ಹೈದರಾಬಾದ್‌ (ಮಾ.17): ಭಾರತದ ಮಾಜಿ ಟೆನಿಸ್‌ ಅಟಗಾರ್ತಿ ಸಾನಿಯಾ ಮಿರ್ಜಾ ಭಾರತಕ್ಕೆ ವಾಪಸಾಗಿದ್ದಾರೆ. ದುಬೈನಲ್ಲಿ ವಾಸ ಮಾಡುತ್ತಿದ್ದ ಅವರು ಅಲ್ಲಿನ ಉದ್ವಿಗ್ನ ಹಾಗೂ ಅನಿಶ್ಚಿತ ವಾತಾವರಣದ ಬೆನ್ನಲ್ಲಿಯೇ ಭಾರತಕ್ಕೆ ವಾಪಾಸಗುವ ನಿರ್ಧಾರ ಮಾಡಿದ್ದಾರೆ. ಮಾಜಿ ಟೆನಿಸ್ ತಾರೆ ಈದ್‌ಗೆ ಮುಂಚಿತವಾಗಿಯೇ ಹೈದರಾಬಾದ್‌ನಲ್ಲಿರುವ ತಮ್ಮ ಮನೆಗೆ ವಾಪಸಾಗಿದ್ದು, ದುಬೈ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವ ನಡುವೆ ತಮ್ಮ ಮಗನ ಸೌಕರ್ಯ ಹಾಗೂ ಸುರಕ್ಷತೆಗೆ ಅವರು ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಂದಾಗಿ ದುಬೈನಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು 39 ವರ್ಷದ ಸಾನಿಯಾ ಮಿರ್ಜಾ ಹೇಳಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಹೆಚ್ಚಾಗಿ ಸುರಕ್ಷಿತವಾಗಿದ್ದರೂ, ಹತ್ತಿರದ ಚಟುವಟಿಕೆಗಳು ಮತ್ತು ವಾಯುಪ್ರದೇಶದ ಘಟನೆಗಳ ವರದಿಗಳು ಆತಂಕದ ವಾತಾವರಣವನ್ನು ಸೃಷ್ಟಿಸಿವೆ. ಎನ್‌ಡಿಟಿವಿ ಜೊತೆ ಮಾತನಾಡುವ ವೇಳೆ ದುಬೈಅನ್ನು ತೊರೆದು ಭಾರತಕ್ಕೆ ವಾಪಾಸಾಗಲು ನಿರ್ಧಾರ ಮಾಡಿದ ಒಂದು ಪ್ರಮುಖ ಘಟನೆಯೊಂದನ್ನು ಅವರು ಹಂಚಿಕೊಂಡಿದ್ದಾರೆ.

"ನಮ್ಮ ಮನೆಯ ಮೇಲೆ ನಾವು ಫೈಟರ್ ಜೆಟ್‌ಗಳ ಹಾರಾಟದ ಶಬ್ದ ಕೇಳಿದ್ದೆವು. ಹಾಗೂ ಇಂಟರ್‌ಸೆಪ್ಟರ್‌ಗಳನ್ನೂ ಕಂಡಿದ್ದೆವು. ನಾವು ವಾಸಿಸುವ ಸ್ಥಳದಿಂದ ಸುಮಾರು 400-500 ಮೀಟರ್ ದೂರದಲ್ಲಿ ಅವಶೇಷಗಳು ಬಿದ್ದಿದ್ದವು, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ದುಬೈ ನನ್ನ ಎರಡನೇ ಮನೆ. ಕೆಲವು ಘಟನೆಗಳು ನಡೆದವು, ಮತ್ತು ಆ ಸಮಯದಲ್ಲಿ, ಭಾರತಕ್ಕೆ ಹಿಂತಿರುಗುವುದು ಉತ್ತಮ ಎಂದು ನಾನು ಭಾವಿಸಿದೆ. ನಮಗೆ ಅಸುರಕ್ಷಿತವೆನಿಸಲಿಲ್ಲ, ಆದರೆ ಅದು ಅನಿಶ್ಚಿತವೆನಿಸಿತು' ಎಂದು ಹೇಳಿದ್ದಾರೆ.

ಇನ್ನು ಭಾರತಕ್ಕೆ ವಾಪಾಸಾಗುವ ನಿರ್ಧಾರ ಮಾಡಿದ ಪ್ರಮುಖ ಅಂಶವೆಂದರೆ, ಆಕೆಯ ಮಗ ಅಲ್ಲಿನ ಉದ್ವಿಗ್ನ ವಾತಾವರಣವನ್ನು ನೋಡಿದ ಬಳಿಕ ಈ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದ್ದ. ಇದರಿಂದಾಗಿ ತಾನು ಭಾರತಕ್ಕೆ ಮರಳುವ ನಿರ್ಧಾರ ಮಾಡಬೇಕಾಯಿತು ಎಂದಿದ್ದಾರೆ.

"ನಿಮ್ಮ ಮಗುವಿನ ಮನಸ್ಸಿನಲ್ಲಿ ಇಂಥ ವಿಚಾರಗಳೆಲ್ಲಾ ಹೋಗಬಾರದು ಎಂದು ಬಯಸುತ್ತೀರಿ. ಅವನು ಪ್ರಶ್ನೆಗಳನ್ನು ಕೇಳುತ್ತಿದ್ದ. ಅದು ಅಸುರಕ್ಷಿತವೆನಿಸಲಿಲ್ಲ, ಆದರೆ ಅದು ಅನಿಶ್ಚಿತತೆ ಮತ್ತು ಆತಂಕವನ್ನುಂಟುಮಾಡಿತು. ಮುಂದಿನ ವಾರ ಶಾಲೆ ಪ್ರಾರಂಭವಾಗಬೇಕಿತ್ತು, ಆದರೆ ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತೇವೆ. ನಾನು ಹೈದರಾಬಾದ್‌ಗೆ ಬಂದಿದ್ದೇನೆ. ಇಲ್ಲಿ ನನ್ನ ಕುಟುಂಬದ ಮನೆ ಕೂಡ ಇರುವುದು ನನಗೆ ಖುಷಿ ನೀಡಿದೆ' ಎಂದು ಹೇಳಿದ್ದಾರೆ.

ಈದ್‌ ಸಂಭ್ರಮಕ್ಕಾಗಿ ಆಗಮಿಸಿದ ಸಾನಿಯಾ

ಹೈದರಾಬಾದ್‌ಗೆ ವಾಪಸಾಗಿರುವ ಸಾನಿಯಾ ಮಿರ್ಜಾ, ಪವಿತ್ರ ರಂಜಾನ್‌ ತಿಂಗಳಲ್ಲಿ ಕುಟುಂಬದೊಂದಿಗೆ ಸಂಭ್ರಮ ಕಳೆಯಲು ಬಯಸಿದ್ದಾರೆ. ತವರಿನಲ್ಲಿ ಈದ್‌ ಹಬ್ಬವನ್ನು ಆಚರಿಸುವುದು ತಮ್ಮ ಪಾಲಿಗೆ ಬಹಳ ಸ್ಪೆಷಲ್‌ ಎಂದು ಅವರು ಹೇಳಿದ್ದಾರೆ.

"ವಿಷಯಗಳು ಬೇಗ ಸರಿಯಾಗಲಿ ಎಂದು ಆಶಿಸುತ್ತೇನೆ. ನಾನು ಪ್ರತಿ ಈದ್‌ಗೆ ಬರುತ್ತೇನೆ. ರಂಜಾನ್‌ನ ಕೊನೆಯ ವಾರವನ್ನು ಹೈದರಾಬಾದ್‌ನಲ್ಲಿ ಕಳೆಯಲು ನಾವು ಪ್ರಯತ್ನಿಸುತ್ತೇವೆ ಏಕೆಂದರೆ ಇಲ್ಲಿ ರಂಜಾನ್ ಅನ್ನು ಅನುಭವಿಸಬೇಕು. ಕುಟುಂಬದ ಸುತ್ತಲೂ ಇರುವುದು ಯಾವಾಗಲೂ ಒಳ್ಳೆಯದು' ಎಂದು ಹೇಳಿದ್ದಾರೆ. "ನನ್ನ ಮಗನಿಗೆ ತನ್ನ ಅಜ್ಜ-ಅಜ್ಜಿಯರ ಬಳಿಗೆ ಬರಲು ಇಷ್ಟ ಏಕೆಂದರೆ ಇಲ್ಲಿ ಯಾರೂ ಯಾವುದಕ್ಕೂ ಬೇಡ ಎಂದು ಹೇಳುವುದಿಲ್ಲ. ಅವನು ಈಗಾಗಲೇ ಸಾಕಷ್ಟು ಪ್ರಯಾಣಿಸಿದ್ದಾನೆ, ಆದ್ದರಿಂದ ಅವನು ಎಲ್ಲಾ ಕಡೆಗೂ ಹೊಂದಿಕೊಳ್ಳುತ್ತಾನೆ." ಅವರು ಹೇಳಿದರು.