ಭಾರತದ ಪ್ರತಿದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಸೇನೆಯ ಡಿಜಿಎಂಒ ಭಾರತದ ಡಿಜಿಎಂಒ ಸಂಪರ್ಕಿಸಿ ಮಾತುಕತೆಗೆ ಯತ್ನಿಸಿದೆ. ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ಚರ್ಚೆಗೆ ಮುಂದಾಗಿದೆ. ಪಾಕಿಸ್ತಾನದ ನಿರಂತರ ದಾಳಿಗಳ ನಂತರ ಭಾರತದ ತೀವ್ರ ಪ್ರತಿದಾಳಿಯ ಬಳಿಕ ಈ ಬೆಳವಣಿಗೆ ನಡೆದಿದೆ. ಭಾರತೀಯ ಸೇನೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ ನಡುವೆ ಮಹತ್ವದ ಬೆಳವಣಿಗೆಯೊಂದು ಕಾಣಿಸಿದೆ. ಪಾಕಿಸ್ತಾನದ ದಾಳಿಗೆ ತೀವ್ರ ರೂಪದಲ್ಲಿ ಭಾರತವು ಉತ್ತರ ನೀಡಿದ ಬಳಿಕ ಪಾಕಿಸ್ತಾನವು ಮಾತುಕತೆಗೆ ಪ್ರಯತ್ನ ನಡೆಸಿದೆ. ಪ್ರತಿದಾಳಿ ತೀವ್ರಗೊಂಡ ಬೆನ್ನಲ್ಲೇ ಭಾರತದ ಸೇನೆಯ ಡಿಜಿಎಂಒ ಅನ್ನು ಪಾಕಿಸ್ತಾನ ಸೇನೆ ಡಿಜಿಎಂಒ (ಡೈರೆಕ್ಟರ್ ಜನರಲ್‌ ಆಫ್ ಮಿಲಿಟರಿ ಆಪರೇಷನ್) ಸಂಪರ್ಕಿಸಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚೆಗೆ ಮುಂದಾಗಿದೆ ಎಂದು ಕೇಂದ್ರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

ಭಾರತದ ಡಿಜಿಎಂಒ ಪ್ರಧಾನ ನಿರ್ದೇಶಕರಿಗೆ ಪಾಕಿಸ್ತಾನದ ಡಿಜಿಎಂಒಗಳು ಕರೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. 

ಆಪರೇಷನ್‌ ಸಿಂದೂರ ಆರಂಭಿಸಿ ಮೇ 10ರ ಇಂದಿಗೆ ನಾಲ್ಕು ದಿನಗಳಾಗಿದೆ. ಅಲ್ಲಿಂದ ಪಾಕಿಸ್ತಾನ ನಿರಂತರ ಭಾರತದ ಮೇಲೆ ದಾಳಿ ಮಾಡುತ್ತಲೇ ಇದೆ. ಆದರೆ ಇಂದು ಭಾರತದ ಪಾಕಿಸ್ತಾನದ 8 ಏರ್‌ಬೇಸ್‌ಗಳ ಮೇಲೆ ತೀವ್ರ ದಾಳಿ ನಡೆಸಿತೋ ಈ ಸಂಘರ್ಷ ಯುದ್ಧದ ಸನ್ನಿವೇಶಕ್ಕೆ ತಿರುಗಬಹುದು ಎಂಬುದು ಪಾಕಿಸ್ತಾನಕ್ಕೆ ಮನದಟ್ಟು ಆದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಜತೆಗೆ ಮಾತುಕತೆಗೆ ಇಂಡಿಯನ್‌ ಆರ್ಮಿಯ ಹೆಡ್‌ ಆಫೀಸ್‌ ನಲ್ಲಿರುವ ಡಿಜಿಎಂಓ ಸಂಪರ್ಕಿಸಿ ಮಾತನಾಡಿದೆ. ಆದರೆ ಭಾರತೀಯ ಸೇನೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.

ಪಾಕಿಸ್ತಾನ ದಾಳಿಯನ್ನು ನಿಲ್ಲಿಸಿದರೆ ಮಾತ್ರ ನಾವು ಪ್ರತಿದಾಳಿಯನ್ನು ನಿಲ್ಲಿಸಲಿದ್ದೇವೆ ಎಂದು ಮೊದಲಿನಿಂದಲೂ ಭಾರತ ಹೇಳುತ್ತಲೇ ಬಂದಿದೆ. ಎರಡೂ ದೇಶಗಳ ನಡುವೆ ಕಠಿಣ ಪರಿಸ್ಥಿತಿ ಬಂದಿರುವುದು ಪಹಲ್ಗಾಮ್ ದಾಳಿಯ ನಂತರ, ಯಾಕೆಂದರೆ ಪಹಲ್ಗಾಮ್ ದಾಳಿಗೆ ಸಂಚು ರೂಪಿಸಿದ್ದೇ ಪಾಕಿಸ್ತಾನದಲ್ಲಿ, ಪಾಕ್‌ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಈ ಸಂಚು ರೂಪಿಸಿದ್ದ ಎನ್ನುವುದು ಬಲವಾದ ಆರೋಪ. ಕಾರಣ ಅಕ್ಟೋಬರ್‌ ನಲ್ಲಿ ಆತ ನಿವೃತ್ತಿಯಾಗುತ್ತಿರುವ ಹಿನ್ನೆಲೆ ತನ್ನ ಹಿಡಿತವನ್ನು ಬಿಗಿಗೊಳಿಸಬೇಕೆನ್ನುವ ಕಾರಣಕ್ಕೆ ಭಾರತದ ಪಹಲ್ಗಾಮ್ ಮೇಲೆ ಉಗ್ರ ದಾಳಿಯನ್ನು ಮಾಡಿಸಿ ಸಂಘರ್ಷದ ವಾತಾವರಣ ಸೃಷ್ಟಿಸಿ ಇಡೀ ಪಾಕಿಸ್ತಾನವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂಬುದು ಆತನ ನಿಲುವಾಗಿತ್ತು ಎಂಬುದು ಸ್ಪಷ್ಟವಾಗಿದೆ.

ಇನ್ನೊಂದು ಕಡೆ ಭಾರತೀಯ ಮೂರು ಸೇನೆಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ, ಪಿಎಂ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಇದರ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ಮಾತುಕತೆಯಲ್ಲಿ ಭಾಗವಹಿಸಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಮಾತುಕತೆ ನಡೆಸುತ್ತಿದ್ದಾರೆ. ಭಾರತ ಅಥವಾ ಪಾಕಿಸ್ತಾನ ಸರ್ಕಾರಗಳಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಮೂಲಗಳು ಪಾಕಿಸ್ತಾನದ ನಿಲುವಿನಲ್ಲಿ ಸಂಭಾವ್ಯ ಬದಲಾವಣೆಯನ್ನು ಸೂಚಿಸಿವೆ.

ರೂಬಿಯೋ ಕರೆ:
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಕರೆ ಮಾಡಿ, ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದರು. ಎರಡೂ ಕಡೆಯವರು ಪರಸ್ಪರ ಮಾತನಾಡಬೇಕು ಮತ್ತು ತಪ್ಪು ಸಂವಹನವನ್ನು ತಪ್ಪಿಸಲು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಜೈಶಂಕರ್ ಅವರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ಸಾಧ್ಯವಾಗಿಸಲು ಅಮೆರಿಕ ಸಹಾಯ ಮಾಡಲು ಸಿದ್ಧವಾಗಿದೆ ಎಂದು ರೂಬಿಯೊ ಹೇಳಿದ್ದಾರೆ ಎಂದು ವರದಿಯಾಗಿದೆ.