ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಎಸ್‌ಬಿಐ ಬ್ಯಾಂಕ್‌ನ ಮೆಟ್ಟಿಲುಗಳನ್ನು ಕೆಡವಲಾಯಿತು. ಇದರಿಂದಾಗಿ, ಸಿಬ್ಬಂದಿ ಮತ್ತು ಗ್ರಾಹಕರು ಏಣಿಯ ಸಹಾಯದಿಂದ ಬ್ಯಾಂಕ್ ಪ್ರವೇಶಿಸಬೇಕಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ತಮಾಷೆಯ ಕಾಮೆಂಟ್‌ಗಳಿಗೆ ಕಾರಣವಾಯಿತು.

ಒತ್ತುವರಿ ತೆರವು ಕಾರ್ಯಾಚರಣೆಗೆ ಬ್ಯಾಂಕಿನ ಮೆಟ್ಟಿಲು ಮಾಯ:

ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮಹಡಿ ಮೇಲಿದ್ದ ಎಸ್‌ಬಿಐ ಬ್ಯಾಂಕ್‌ಗೆ ಹೋಗುವಂತಹ ಮೆಟ್ಟಿಲುಗಳನ್ನು ಕೂಡ ತೆರವುಗೊಳಿಸಿದ್ದರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ವಾಹನ ಸವಾರರು ಏಣಿ ಏರಿ ಬ್ಯಾಂಕ್‌ ಒಳಗೆ ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಒಡಿಶಾ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಶಾಖೆಯಲ್ಲಿ.

ಏಣಿ ಏರಿ ಬ್ಯಾಂಕ್‌ಗೆ ಬಂದ ಸಿಬ್ಬಂದಿ ಗ್ರಾಹಕರು:

ಸ್ಥಳೀಯಾಡಳಿತದಿಂದ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಮೇಲಿನ ಮಹಡಿಯಲ್ಲಿದ್ದ ಎಸ್‌ಬಿಐ ಬ್ಯಾಂಕ್‌ಗೆ ಹೋಗುವ ಮೆಟ್ಟಿಲುಗಳನ್ನು ಕೂಡ ತೆರವುಗೊಳಿಸಲಾಯ್ತು. ಹೀಗಾಗಿ ಗ್ರಾಹಕರು ಹಾಗೂ ಸಿಬ್ಬಂದಿ ಬ್ಯಾಂಕ್‌ಗೆ ಹೋಗುವುದಕ್ಕೆ ಏಣಿಯನ್ನು ಬಳಸಿದ್ದಾರೆ. ವೀಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಬೆನ್ನ ಮೇಲೆ ಬ್ಯಾಗ್ ಹಾಕಿ ಕೈಯಲ್ಲೊಂದು ಬ್ಯಾಗ್ ಹಿಡಿದು ನಡುಗುತ್ತಿರುವ ಏಣಿಯನ್ನು ಏರಿ ಭಯದಿಂದಲೇ ಹೋಗುವುದನ್ನು ನೋಡಬಹುದಾಗಿದೆ. ಮೇಲಿನ ಮಹಡಿಯಲ್ಲಿದ್ದ ಬ್ಯಾಂಕ್ ಸಿಬ್ಬಂದಿ ಅವರ ಕೈನಿಂದ ಬ್ಯಾಗನ್ನು ತೆಗೆದುಕೊಳ್ಳುವುದನ್ನು ನೋಡಬಹುದಾಗಿದೆ.

ಹಲವು ಕಟ್ಟಡಗಳ ತೆರವು ಕಾರ್ಯಾಚರಣೆ:

ಅತಿಕ್ರಮಣ ತೆರವು ಕಾರ್ಯಾಚರಣೆಯ ಸಮಯದಲ್ಲಿ ಬ್ಯಾಂಕಿನ ಮುಖ್ಯ ದ್ವಾರಕ್ಕೆ ಹಾನಿಯಾಗಿದ್ದು, ಗ್ರಾಹಕರು ಶಾಖೆಯನ್ನು ತಲುಪಲು ಏಣಿಯನ್ನು ಹತ್ತಬೇಕಾಯಿತು. ಈ ಕಾರ್ಯಾಚರಣೆಯಲ್ಲಿ ಚರಂಪಾ ಮಾರುಕಟ್ಟೆಯಿಂದ ಭದ್ರಕ್ ರೈಲು ನಿಲ್ದಾಣದವರೆಗಿನ ಅಕ್ರಮ ಕಟ್ಟಡಗಳನ್ನು ತೆಗೆದು ಹಾಕಲಾಯ್ತು. ಅನೇಕ ಅಂಗಡಿಗಳು, ಮನೆಗಳು ಮತ್ತು ಇತರ ಕಟ್ಟಡಗಳನ್ನು ಕೆಡವಿ ಹಾಕಲಾಯ್ತ. ಎಸ್‌ಬಿಐ ಶಾಖೆಯ ಕಟ್ಟಡದ ಒಂದು ಭಾಗವೂ ಅವುಗಳಲ್ಲಿ ಸೇರಿತ್ತು. ಒತ್ತುರಿಯಾದ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳಿಗೆ ತಿಳಿದ ನಂತರ ಕಟ್ಟಡದ ಮುಂಭಾಗ ಮತ್ತು ಮೆಟ್ಟಿಲುಗಳನ್ನು ಕೆಡವಲಾಗಿದೆ. ಇದರಿಂದಾಗಿ ಕಟ್ಟಡಕ್ಕೆ ಸರಿಯಾದ ಪ್ರವೇಶ ದ್ವಾರವಿಲ್ಲದೆ ಹೋಗಿದೆ. ಅತಿಕ್ರಮಣದ ಬಗ್ಗೆ ಬ್ಯಾಂಕ್ ಮತ್ತು ಮನೆ ಮಾಲೀಕರಿಗೆ ಮೊದಲೇ ತಿಳಿಸಲಾಗಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಸುಮಾತ್ರಾದ ಕಾಡಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಹೂವು: 13 ವರ್ಷಗಳ ಹುಡುಕಾಟಕ್ಕೆ ತೆರೆ

ಕಟ್ಟಡ ಕೆಡವಿದ ನಂತರ, ಬ್ಯಾಂಕ್‌ನ ಉದ್ಯೋಗಿಗಳು ಮತ್ತು ಗ್ರಾಹಕರು ಮೊದಲ ಮಹಡಿಗೆ ತಲುಪಲು ಸಾಧ್ಯವಾಗುವಂತೆ ಟ್ರ್ಯಾಕ್ಟರ್ ಮೇಲೆ ಏಣಿಯನ್ನು ಇರಿಸಿ ಮೇಲೇರಿದ್ದಾರೆ. ಆದರೆ ವೀಡಿಯೋ ವೈರಲ್ ಆದ ನಂತರ ನೆಟ್ಟಿಗರ ಹಲವು ಕಾಮೆಂಟ್‌ಗಳು ಜನರ ಮನರಂಜಿಸಿದೆ. ಇಷ್ಟು ಕಷ್ಟಪಟ್ಟು ಬ್ಯಾಂಕ್‌ಗೆ ಹೋದ ನಂತರ ಅವರು ಊಟದ ವಿರಾಮ ಆಮೇಲೆ ಬನ್ನಿ ಅಂತ ಹೇಳಿದ್ರೆ ಏನ್ ಮಾಡೋದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತದ ಉಪಗ್ರಹಗಳ ನಿರ್ಮಿಸುತ್ತಿದೆ. ಆದರೆ ಸ್ಥಳೀಯ ಬ್ಯಾಂಕಿಗೆ ಹೋಗುವುದಕ್ಕೆ ಪರ್ವತಾರೋಹಣ ಸಲಕರಣೆಗಳು ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಭಾರತ ಆರಂಭಿಕರಿಗೆ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಹೊಸ ಮೆಟ್ಟಿಲು ಅಳವಡಿಕೆ?

ಆದರೆ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಬ್ಯಾಂಕ್ ಕಾರ್ಯನಿರ್ವಹಿಸುವ ಕಟ್ಟಡದ ಮಾಲೀಕರು, ಸಿಬ್ಬಂದಿ ಮತ್ತು ಗ್ರಾಹಕರು ಶಾಖೆಯನ್ನು ತಲುಪಲು ಅನುವು ಮಾಡಿಕೊಡಲು ಕಬ್ಬಿಣದ ಮೆಟ್ಟಿಲನ್ನು ಅಳವಡಿಸಿದ್ದಾರೆ ಎಂದು ವರದಿಯಾಗಿದೆ.

View post on Instagram