ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು? 50 ಸಾವಿರ ರೂಪಿಯಿಂದ ಹರಾಜು ಆರಂಭಗೊಂಡಿತ್ತು. ಈ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದು ಕೇವಲ 30 ವರ್ಷದ ಯುವ ಉದ್ಯಮಿ.

ಹರ್ಯಾಣ (ನ.27) ಭಾರತದಲ್ಲಿ ಹಲವು ದುಬಾರಿ ಕಾರುಗಳಿವೆ. 10 ಕೋಟಿ, 15 ಕೋಟಿ ರೂಪಾಯಿ ಮೌಲ್ಯದ ಕಾರುಗಳು ಭಾರತದಲ್ಲಿದೆ. ಇದರ ಜೊತೆಗೆ ಭಾರತದಲ್ಲಿ ಅಷ್ಟೇ ದುಬಾರಿ ರಿಜಿಸ್ಟ್ರೇಶನ್ ನಂಬರ್‌ಗಳಿವೆ. ಹಲವು ಉದ್ಯಮಿಗಳು, ಶ್ರೀಮಂತರು ತಮ್ಮಿಷ್ಟದ ಸಂಖ್ಯೆಗಳನ್ನು ದುಬಾರಿ ಹಣ ನೀಡಿ ಖರೀದಿಸಿದ್ದಾರೆ. ಇದೀಗ 30 ವರ್ಷದ ಯುವ ಉದ್ಯಮಿ ತನ್ನ ಕಾರಿಗೆ ಭಾರತದ ಅತೀ ದುಬಾರಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ. HR88 B8888 ನಂಬರ್‌ಗೆ ಈ ಯುವ ಉದ್ಯಮಿ ನೀಡಿದ್ದು 1.17 ಕೋಟಿ ರೂಪಾಯಿ. ಈ ಯುವ ಉದ್ಯಮಿ ಸುಧೀರ್ ಕುಮಾರ್. ವಿಶೇಷ ಅಂದರೆ ಈ ಉದ್ಯಮಿ ಇನ್ನೂ ವಾಹನ ಖರೀದಿಸಿಲ್ಲ, ಅದಕ್ಕೂ ಮೊದಲೇ ದುಬಾರಿ ನಂಬರ್ ಪ್ಲೇಟ್ ಖರೀದಿಸಿದ್ದರೆ.

ಹರ್ಯಾಣ ಮೂಲದ ಉದ್ಯಮಿ ಸುಧೀರ್ ಕುಮಾರ್

ಹರ್ಯಾಣ ಮೂಲದ ಉದ್ಯಮಿ ಸುಧೀರ್ ಕುಮಾರ್ ಈ ದುಬಾರಿ ನಂಬರ್ ಪ್ಲೇಟ್ ಖರೀದಿಸಿದ ಉದ್ಯಮಿ. ಟ್ರಾನ್ಸ್‌ಪೋರ್ಟ್ ಬ್ಯೂಸಿನೆಸ್, ಸಾಫ್ಟ್‌ವೇರ್ ಕಂಪನಿ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಸುಧೀರ್ ಕುಮಾರ್ ಇದೀಗ ಭಾರತದಲ್ಲಿ ಇರುವ ಅತೀ ದುಬಾರಿ ನಂಬರ್ ಪ್ಲೇಟ್ ಮಾಲೀಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಮಗೆ ಟ್ರಾನ್ಸ್‌ಪೋರ್ಟ್ ಉದ್ಯಮ ಇದೆ. ಹೀಗಾಗಿ ನಂಬರ್ ಅತೀವ ಮುಖ್ಯವಾಗುತ್ತದೆ. ಆದರೆ ರಿಜಿಸ್ಟ್ರೇಶನ್ ನಂಬರ್‌ಗೆ ಈ ರೀತಿ ಹೈಪ್ ಕೊಡುವುದು ಉತ್ತಮವಲ್ಲ ಎಂದು ಸುಧೀರ್ ಕುಮಾರ್ ಹೇಳಿದ್ದಾರೆ.

ಹರ್ಯಾಣ ಹರಾಜಿನಲ್ಲಿ ದಾಖಲೆ

ಹರ್ಯಾಣದಲ್ಲಿ HR88 B8888 ರಿಜಿಸ್ಟ್ರೇಶನ್ ನಂಬರ್ ಹರಾಜು ಹಾಕಲಾಗಿತ್ತು. ಹಲವರು ಈ ನಂಬರ್ ಖರೀದಿಸಲು ಮುಂದಾಗಿದ್ದರು. ಹೀಗಾಗಿ ಹರ್ಯಾಣ ಆರ್‌ಟಿಒ, HR88 B8888 ನಂಬರ್ ಹರಾಜು ಹಾಕಿತ್ತು. ಹರಾಜಿನಲ್ಲಿ 45 ಮಂದಿ ಪಾಲ್ಗೊಂಡಿದ್ದರು. ಆರ್‌ಟಿಒ ಈ ನಂಬರ್ ಪ್ಲೇಟ್ ಮೂಲ ಬೆಲೆ 50,000 ರೂಪಾಯಿ ನಿಗದಿಪಡಿಸಿತ್ತು. 50,000 ರೂಪಾಯಿಯಿಂದ ಹರಾಜು ಪ್ರಕ್ರಿಯೆ ಆರಂಭಗೊಂಡಿತ್ತು. 45 ಶ್ರೀಮಂತರು HR88 B8888 ನಂಬರ್ ಖರೀದಿಸಲು ತೀವ್ರ ಪೈಪೋಟಿ ನೀಡೆಸಿದ್ದರು. ಮಧ್ಯಾಹ್ನದ ವೇಳೆ 88 ಲಕ್ಷ ರೂಪಾಯಿ ತಲುಪಿತ್ತು. ಸಂಜೆ 5 ಗಂಟೆ ವೇಳೆಗೆ ಹರಾಜು 1.17 ಕೋಟಿ ರೂಪಾಯಿಗೆ ಅಂತ್ಯಗೊಂಡಿತ್ತು. ಸುಧೀರ್ ಕುಮಾರ್ ನಂಬರ್ ಖರೀದಿಸಿ ಸಂಭ್ರಮಿಸಿದ್ದಾರೆ.

ವಾಹನ ಮೇಲೆ ಹಚ್ಚಿದ ನಿರೀಕ್ಷೆ

ಸುಧೀರ್ ಕುಮಾರ್ ಹರಾಜು ಇದೆ ಎಂದು ಪಾಲ್ಗೊಂಡಿದ್ದಾರೆ. ಟ್ರಾನ್ಸ್‌ಪೋರ್ಟ್ ಉದ್ಯಮದ ಕಾರಣ ಸೀರಿಯಲ್ ನಂಬರ್ ಅವಶ್ಯಕ ಎಂದು ಸುಧೀರ್ ಮಾತು. ಹರಾಜು ಪ್ರಕ್ರಿಯೆಯಲ್ಲಿ 1.17 ಕೋಟಿ ರೂಪಾಯಿ ನೀಡಿ ನಂಬರ್ ಪ್ಲೇಟ್ ಖರೀದಿಸಿದ್ದಾರೆ. ಆದರೆ ವಾಹನ ಇನ್ನೂ ಖರೀದಿಸಿಲ್ಲ. ಇದೀಗ ನಂಬರ್ ಪ್ಲೇಟ್‌ಗೆ 1.17 ಕೋಟಿ ರೂಪಾಯಿ ನೀಡಿರುವಾಗ ವಾಹನ ಬೆಲೆ ಕನಿಷ್ಠ 5 ಕೋಟಿ ರೂಪಾಯಿ ಮೇಲಿರಬೇಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸುಧೀರ್ ಕುಮಾರ್ ದುಬಾರಿ ನಂಬರ್ ಪ್ಲೇಟ್ ಹೊಂದುವ ಹೊಸ ವಾಹನ ಯಾವುದು ಎಂದು ಹಲವರು ಪ್ರಶ್ನಿಸಿದ್ದರೆ. ಇದೇ ವೇಳೆ ರೋಲ್ಸ್ ರಾಯ್ಸ್ ಕಲ್ಲಿನಾನ್, ಘೋಸ್ಟ್, ಬೆಂಟ್ಲಿ ಸೇರಿದಂತೆ ಹಲವು ಕಾರುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಲವರು ಸೂಚಿಸಿದ್ದಾರೆ.

ಐದು ದಿನದಲ್ಲಿ ಪಾವತಿಸಬೇಕು ಸಂಪೂರ್ಣ ಮೊತ್ತ

ಸುಧೀರ್ ಕುಮಾರ್ ಹರಾಜಿನಲ್ಲಿ 1.17 ಕೋಟಿ ರೂಪಾಯಿಗೆ HR88 B8888 ರಿಜಿಸ್ಟ್ರೇಶನ್ ನಂಬರ್ ಖರೀದಿಸಲು ಮುಂದಾಗಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಸುಧೀರ್ ಕುಮಾರ್ ಒಟ್ಟು 11,000 ರೂಪಾಯಿ ಪಾವತಿಸಿದ್ದಾರೆ. ಈ ಪೈಕಿ 1,000 ರೂಪಾಯಿ ಹರಾಜು ಪ್ರಕ್ರಿಯೆ ರಿಜಿಸ್ಟ್ರೇಶನ್ ಶುಲ್ಕ ಹಾಗೂ 10,000 ರೂಪಾಯಿ ಭದ್ರತಾ ಠೇವಣಿಯಾಗಿದೆ. ಇದೀಗ ಸುಧೀರ್ ಕುಮಾರ್‌ಗೆ ಐದು ದಿನಗಳ ಕಾಲಾವಕಾಶವಿದೆ. ಐದು ದಿನದಲ್ಲಿ 1.17 ಕೋಟಿ ರೂಪಾಯಿ ಮೊತ್ತವನ್ನು ಹರ್ಯಾಣ ಆರ್‌ಟಿಒಗೆ ಪಾವತಿಸಬೇಕು.

ಭಾರತದಲ್ಲಿ ಹಲವು ಶ್ರೀಮಂತರು, ಉದ್ಯಮಿಗಳು ದುಬಾರಿ ನಂಬರ್ ಪ್ಲೇಟ್ ಖರೀದಿಸಿದ್ದಾರೆ. ಇತ್ತೀಚೆಗೆ ಕೇರಳದ ಟೆಕ್ ಉದ್ಯಮಿ ವೇಣು ಗೋಪಾಲಕೃಷ್ಣನ್ KL 07 DG 0007 ನಂಬರ್ ಹರಾಜಿನ ಮೂಲಕ ಖರೀದಿಸಿದ್ದರು. ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಈ ನಂಬರ್ ಪ್ಲೇಟ್ ಖರೀದಿಸಿದ್ದರು. ಈ ನಂಬರ್‌ಗಾಗಿ ವೇಣು ಗೋಪಾಲಕೃಷ್ಣನ್ 45.99 ಲಕ್ಷ ರೂಪಾಯಿ ನೀಡಿದ್ದರು.