ರಾಜಸ್ಥಾನದ ರಾಂಪುರದಲ್ಲಿ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯ ದುಸ್ಥಿತಿಯ ವಿರುದ್ಧ 'ಜಿರಳೆ ಜನತಾ ಪಕ್ಷ' ನಡೆಸಿದ ಹೋರಾಟ ಯಶಸ್ವಿಯಾಗಿದೆ. 'ಸ್ಕೂಲ್‌ ಠೀಕ್‌ ಕರೋ' ಅಭಿಯಾನದ ಭಾಗವಾಗಿ ನಡೆದ ಈ ಪ್ರತಿಭಟನೆಯ ನಂತರ, ರಾಜಸ್ಥಾನ ಸರ್ಕಾರವು ಅದೇ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದೆ.

ಜೈಪುರ: ಜೈಪುರ ಬಳಿಯ ರಾಂಪುರದ ದನದ ಕೊಟ್ಟಿಗೆಯೊಂದರಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಶಾಲೆಯೊಂದರ ದುಃಸ್ಥಿತಿಯನ್ನು ‘ಸ್ಕೂಲ್‌ ಠೀಕ್‌ ಕರೋ’ ಅಭಿಯಾನದ ಅಂಗವಾಗಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಬಿಚ್ಚಿಟ್ಟಿತ್ತು. ಅದರ ಬೆನ್ನಲ್ಲೇ, ಅಲ್ಲಿ 18 ಲಕ್ಷ ರು. ವೆಚ್ಚದಲ್ಲಿ ಹೊಸ ಶಾಲೆ ಕಟ್ಟಡ ನಿರ್ಮಿಸುವುದಾಗಿ ರಾಜಸ್ಥಾನ ಸರ್ಕಾರ ಘೋಷಿಸಿದೆ.

ಶುಕ್ರವಾರ ಈ ಹಳ್ಳಿಗೆ ಭೇಟಿ ನೀಡಿದ್ದ ಸಿಜೆಪಿ ಕಾರ್ಯಕರ್ತರನ್ನು ಕೆಲವರು ತಡೆದು ಥಳಿಸಿದ್ದರು. ‘ಥಳಿಸಿದವರು ಬಿಜೆಪಿಗರು’ ಎಂದು ಸಿಜೆಪಿಗರು ದೂರಿದ್ದರು. ಅದಾದ ಮರುದಿನವೇ ಹೊಸ ಶಾಲೆ ನಿರ್ಮಾಣದ ಘೋಷಣೆಯಾಗಿದೆ.

ಇದಕ್ಕೆ ಸಿಜೆಪಿ ವಕ್ತಾರ ಆಶುತೋಷ್‌ ರಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ. ‘ನಾವು ಮತ ಕೇಳಲು ಹೋಗಿರಲಿಲ್ಲ. ಬದಲಿಗೆ ಶಾಲೆಯನ್ನು ಸರಿ ಮಾಡುವಂತೆ ಆಗ್ರಹಿಸಲು ಹೋಗಿದ್ದೆವು. ಇದೀಗ ನಾವು ನೀಡಿದ್ದ 2 ದಿನಗಳ ಸಮಯಾವಕಾಶದೊಳಗೆ ಸೆ.1ರಿಂದ ಕೆಲಸ ಆರಂಭಿಸುವುದಾಗಿ ಸರ್ಕಾರ ಹೇಳಿದೆ’ ಎಂದಿದ್ದಾರೆ.

ಜತೆಗೆ, ‘ಸರ್ಕಾರಕ್ಕೆ ಮಕ್ಕಳ ಭವಿಷ್ಯದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಶಾಲೆಗಳನ್ನು ದುರಸ್ತಿ ಮಾಡಿಸಲಿ’ ಎಂದಿದ್ದು, ಶಾಲೆಗಳಿಗೆ ಭೇಟಿ ನೀಡಿ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಅಂತೆಯೇ, ಸುಮಾರು 3 ಸಾವಿರ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, 611 ಶಾಲೆಗಳು ಕಟ್ಟಡಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರ ಹೇಳಿದ್ದೇನು?

2025ರ ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ ರಾಂಪುರ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಪತ್ತೆಯಾದ ಕಾರಣ ಆ ಕಟ್ಟಡದ ಬಳಕೆ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ಆ ಶಾಲೆ ದೂರವಾಗುತ್ತದೆ ಎಂಬ ಕಾರಣ ನೀಡಿ ಗ್ರಾಮಸ್ಥರು ಅದನ್ನು ವಿರೋಧಿಸಿದ್ದರು. ಹೀಗಾಗಿ ದನದ ಕೊಟ್ಟಿಗೆಯಲ್ಲಿ ಶಾಲೆ ನಡೆಸಲಾಗುತ್ತಿತ್ತು.

ಇಂದು ಜಿರಳೆ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಜು.25ರಂದು ತಮ್ಮ ದೇಶವ್ಯಾಪಿ ಪ್ರತಿಭಟನೆಯನ್ನು ಹಿಂಪಡೆಯುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳ ಪ್ರಸ್ತುತ ಸ್ಥಿತಿಗತಿಯನ್ನು ಪರಾಮರ್ಶಿಸಲು ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸೋಮವಾರ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದೆ. ಭರವಸೆಗಳನ್ನು ಈಡೇರಿಸುವ ಕುರಿತು ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಅದು ಆಕ್ಷೇಪಿಸಿದೆ.

‘ಸಭೆಯಲ್ಲಿ ಕೇಂದ್ರದ ಭರವಸೆಗಳ ಈಡೇರಿಕೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಚರ್ಚಿಸಲಾಗುವುದು. ಅಗತ್ಯಬಿದ್ದರೆ ದೇಶವ್ಯಾಪಿ ಮತ್ತೊಂದು ಶಾಂತಿಯುತ ಹೋರಾಟವನ್ನು ಆರಂಭಿಸುವ ಸಾಧ್ಯತೆಯನ್ನೂ ಮುಕ್ತವಾಗಿಡಲಾಗಿದೆ. ದೇಶದ ಯುವಜನತೆಗೆ ಸರ್ಕಾರ ಕೊಟ್ಟ ಮಾತನ್ನು ನಂಬಿ ಸೌಹಾರ್ದಯುತವಾಗಿ ಹೋರಾಟವನ್ನು ಹಿಂಪಡೆಯಲಾಗಿತ್ತು. ಆದರೆ ಈ ನಂಬಿಕೆಯನ್ನು ಸರ್ಕಾರ ದೌರ್ಬಲ್ಯವೆಂದು ಪರಿಗಣಿಸಲು ಬಿಡುವುದಿಲ್ಲ. ಸಭೆಯ ನಂತರ ಹೊರಬೀಳಲಿರುವ ನಿರ್ಧಾರಕ್ಕೆ ವಿದ್ಯಾರ್ಥಿಗಳು ಹಾಗೂ ಯುವಕರು ಸಿದ್ಧರಾಗಿರಬೇಕು’ ಎಂದು ಸಂಘಟನೆ ಕರೆ ನೀಡಿದೆ.