Kota crocodile viral video: ಮನೆಯೊಂದಕ್ಕೆ ಮೊಸಳೆಯೊಂದು ನುಗ್ಗಿತ್ತು. ಭಯಗೊಂಡಿದ್ದ ಮನೆ ಮಂದಿ ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದರೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸುಳಿವಿಲ್ಲ ನಂತರ ಯುವಕನೋರ್ವ ಮೊಸಳೆಯನ್ನು ಹಿಡಿದು ತೆಗೆದುಕೊಂಡು ಹೋಗಿದ್ದಾನೆ.
ಮನೆಗೆ ನುಗ್ಗಿದ ಮೊಸಳೆ: ಕರೆ ಮಾಡಿದ್ರು ಬಾರದ ಅರಣ್ಯ ಸಿಬ್ಬಂದಿ:
ರಾಜಸ್ತಾನದ ಕೋಟಾದ ಬಂಜಾರಿ ಗ್ರಾಮದಲ್ಲಿ ಮನೆಯೊಂದಕ್ಕೆ ಮೊಸಳೆಯೊಂದು ನುಗ್ಗಿತ್ತು. ಮನೆಗೆ ಮೊಸಳೆ ನುಗ್ಗಿದ್ದರಿಂದ ಭಯಗೊಂಡಿದ್ದ ಮನೆ ಮಂದಿ, ಮನೆಗೆ ಮೊಸಳೆ ನುಗ್ಗಿದೆ ಬನ್ನಿ ಕಾಪಾಡಿ ಮೊಸಳೆಯನ್ನು ಹಿಡಿದು ತೆಗೆದುಕೊಂಡು ಹೋಗಿ ಎಂದು ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದರೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸುಳಿವಿಲ್ಲ, ಇದರಿಂದ ಧೃತಿಗೆಟ್ಟ ಗ್ರಾಮಸ್ಥರು ಈ ಅರಣ್ಯ ಇಲಾಖೆಯವರನ್ನು ಕಾದರೆ ಮೊಸಳೆಗೆ ಆಹಾರವಾಗುವುದು ಪಕ್ಕಾ ಎಂದು ಭಾವಿಸಿದ ಜನ ಸಮೀಪದ ಇತ್ವಾ ಗ್ರಾಮದ ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿರುವ ಯುವಕ ಹಯತ್ ಖಾನ್ ಟೈಗರ್ ಎಂಬುವವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಈ ಹಯಾತ್ ಅವರು ಈ ಪ್ರದೇಶಗಳಲ್ಲಿ ಹಲವು ವನ್ಯಜೀವಿಗಳ ರಕ್ಷಣೆ ಮಾಡಿದ್ದಾರೆ. ಗ್ರಾಮಸ್ಥರು ಕರೆದ ಕೂಡಲೇ ಈ ಮೊಸಳೆ ಇರುವ ಜಾಗಕ್ಕೆ ತುರ್ತಾಗಿ ಆಗಮಿಸಿದ ಹಯಾತ್ ಅವರು ಈ 8 ಅಡಿ ಉದ್ದದ ಮೊಸಳೆಯನ್ನು ಹಿಡಿದು ರಕ್ಷಣೆ ಮಾಡಿದ್ದು, ಆ ಭಾರಿ ಗಾತ್ರದ ಮೊಸಳೆಯನ್ನು ಹಿಡಿದು ಅವರು ಅಕ್ಕಿಮೂಟೆಯಂತೆ ಬೆನ್ನಲ್ಲಿ ಇರಿಸಿ ಹೊತ್ತುಕೊಂಡು ಹೋಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ನೋಡುನೋಡ್ತಿದ್ದಂಗೆ ಮನೆಯ ಬಾಗಿಲಿನ ಮೂಲಕ ಒಳಬಂದು ಕೋಣೆ ಸೇರಿದ ಮೊಸಳೆ
ಕೋಟಾದ ಇತ್ವಾ ಉಪ ವಿಭಾಗದ ಬಂಜಾರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಸುಮಾರು 80 ಕೇಜಿ ತೂಗುವ 8 ಅಡಿ ಉದ್ದದ ಮೊಸಳೆಯೊಂದು ಮನೆಯೊಳಗೆ ನುಗ್ಗಿದೆ. ಮನೆ ಮಂದಿಯೆಲ್ಲಾ ಮನೆಯ ಹಾಲ್‌ನಲ್ಲಿ ಜೊತೆಯಾಗಿ ಕುಳಿತು ಹರಟೆ ಹೊಡೆಯುತ್ತಿದ್ದಾಗಲೇ ಮನೆಯ ಮುಖ್ಯದ್ವಾರದ ಮೂಲಕ ಮೊಸಳೆ ಒಳಗೆ ಬಂದಿದ್ದು ಮನೆ ಮಂದಿಯೆಲ್ಲಾ ಮೊಸಳೆ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಏನಾಗ್ತಿದೆ ಎಂದು ತಿಳಿಯುವಷ್ಟರಲ್ಲೇ ಈ ಮೊಸಳೆ ಮನೆಯ ಹಿಂಭಾಗದ ಕೋಣೆಗೆ ಹೋಗಿದೆ. ಈ ವೇಳೆ ಇಡೀ ಕುಟುಂಬದವರು ಭಯಗೊಂಡಿದ್ದರು ಎಂದು ಗ್ರಾಮದ ಲಾತುರ್‌ಲಾಲ್ ಎಂಬುವವರು ಹೇಳಿದ್ದಾರೆ.
ಮೊಸಳೆ ಹಿಡಿದ ಹಯಾತ್ ಖಾನ್
ಮೊಸಳೆ ಮನೆಗೆ ಬಂದ ನಂತರ ಕುಟುಂಬದವರು ಅರಣ್ಯ ಇಲಾಖೆಗೆ ಹಲವು ಬಾರಿ ಕರೆ ಮಾಡಿ ಮೊಸಳೆ ಹಿಡಿಯುವಂತೆ ಹೇಳಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಮಸುಕಾಡದೇ ಕುಳಿತಿದ್ದಾರೆ. ಹೀಗಾಗಿ ಭಯ ಹೆಚ್ಚಾಗ್ತಿದ್ದಂತೆ ಕುಟುಂಬದವರು ಪಕ್ಕದ ಗ್ರಾಮದ ಹಯಾತ್ ಖಾನ್ ಟೈಗರ್ ಅವರಿಗೆ ವಿಚಾರ ತಿಳಿಸಿದ್ದು, ಅವರು ಭಾರಿ ಗಾತ್ರದ ಈ ಮೊಸಳೆಯನ್ನು ಹಿಡಿದು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಿ ಬೇರೆಡೆ ಬಿಟ್ಟಿದ್ದಾರೆ.
ಮೊಸಳೆಯ ಬಾಯಿಗೆ ಪ್ಲಾಸ್ಟಿಕ್ ಗಮ್ ಟೇಪ್ ಅಂಟಿಸಿ ಅದನ್ನು ಅವರು ಹೆಗಲಿನ ಮೇಲೆ ಎತ್ತಿಕೊಂಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇವರು ಮೊಸಳೆ ಹಿಡಿದಿದ್ದನ್ನು ನೋಡಿದ ಗ್ರಾಮಸ್ಥರು ಅವರು ಸಿನಿಮಾದಂತೆ ಮೊಸಳೆಯನ್ನು ಹಿಡಿದರು ಎಂದು ಬಣ್ಣಿಸಿದ್ದಾರೆ. ಮೊದಲಿಗೆ ಮೊಸಳೆ ದಾಳಿ ನಡೆಸದಂತೆ ಅದರ ಬಾಯಿಯನ್ನು ಬಂದ್ ಮಾಡಿದ ಹಯಾತ್ ಖಾನ್ ಅವರ ತಂಡ ನಂತರ ಹಿಂಭಾಗ ಹಾಗೂ ಮುಂಭಾಗದ ಕಾಲುಗಳನ್ನು ಕಟ್ಟಿದ್ದಾರೆ. ನಂತರ ಬೇರೆಡೆ ಸಾಗಿಸಿದ್ದಾರೆ. ಸುಮಾರು ಒಂದು ಗಂಟೆಯಲ್ಲಿ ಈ ಕಾರ್ಯಾಚರಣೆ ಮುಗಿದಿದೆ.
8 ಉದ್ದದ ಮೊಸಳೆಯನ್ನು ಕಟ್ಟಿ ಹೆಗಲಲ್ಲಿರಿಸಿಕೊಂಡು ಹೋದ ಹಯಾತ್ ಖಾನ್
ವೈರಲ್ ಆದ ವೀಡಿಯೋದಲ್ಲಿ ಹಯಾತ್ ಖಾನ್ ಅವರು ಮೊಸಳೆಯನ್ನು ಹೆಗಲಿನ ಮೇಲೆ ಎತ್ತಿ ಹಿಡಿದಿದ್ದರೆ ಅಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ನಂತರ ಈ ಮೊಸಳೆಯನ್ನು ಶನಿವಾರ ಗೀತಾ ಪ್ರದೇಶ ಚಂಬಲ್ ನದಿಗೆ ಸುರಕ್ಷಿತವಾಗಿ ಬಿಡಲಾಯ್ತು. ಈ ಮೊಸಳೆ ಅಂದಾಜು 8 ಅಡಿ ಉದ್ದ ಇದ್ದು, 80 ಕೇಜಿ ತೂಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಬಂಜಾರಿ ಗ್ರಾಮದಲ್ಲಿ ಇದು ಇಂತಹ 3ನೇ ಕಾರ್ಯಾಚರಣೆ ಎಂದು ಹಯಾತ್ ಅವರು ಸ್ತಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ.
ಈ ಗ್ರಾಮದ ಸಮೀಪದಲ್ಲೇ ಇರುವ ಕೆರೆಯೂ ಹಲವು ಮೊಸಳೆಗಳಿಗೆ ಆವಾಸಸ್ಥಾನವಾಗಿದೆ. ಹೀಗಾಗಿ ಇಲ್ಲಿ ಓಡಾಡುವುದಕ್ಕೆ ಭಯವಾಗ್ತಿದೆ. ಮೊಸಳೆಗಳಿಂದಾಗಿ ಕೆರೆ ನೀರನ್ನು ಬಳಸುವುದಕ್ಕೆ ಭಯ ಆಗ್ತಿದೆ. ಮೊಸಳೆಗಳ ಸಂಖ್ಯೆ ಹೆಚ್ಚಾಗ್ತಿರೋದ್ರಿಂದ ಇಲ್ಲಿ ಭಯದ ವಾತಾವರಣವಿದೆ ಎಂದು ಇಲ್ಲಿನ ಸ್ಥಳೀಯರು ಹೇಳಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 4ನೇ ಮಗು ಹೆಣ್ಣಾಗಿದ್ದಕ್ಕೆ ದುಃಖಿಸಿದ ಪೋಷಕರು: ದುಃಖ ಅರಿತಂತೆ ಚಿಂತೆಯಿಂದ ಗಲ್ಲಕ್ಕೆ ಕೈಯಿಟ್ಟ ಕಂದ
ಇದನ್ನೂ ಓದಿ: ಕಸ ಎಸಿಬೇಡಿ ಎಂದ ವಿದೇಶಿ ಯುವತಿಗೆ ಕಿರುಕುಳ: ಮಕ್ಕಳ ವರ್ತನೆಗೆ ಆಘಾತಗೊಂಡ ವಿದೇಶಿ ಯುವತಿ
