ನದಿಯಲ್ಲಿ ಸ್ನಾನ ಮಾಡುತ್ತಿದ್ದ 57 ವರ್ಷದ ಮಹಿಳೆಯನ್ನು ಮೊಸಳೆಯೊಂದು ಎಳೆದೊಯ್ದಿದೆ. ಗ್ರಾಮಸ್ಥರು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಮಹಿಳೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನದಿಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆಯನ್ನು ಎಳೆದೊಯ್ದ ಮೊಸಳೆ
ಭುವನೇಶ್ವರ್: ನದಿಯೊಂದರಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಮೊಸಳೆಯೊಂದು ಹೊತ್ತುಕೊಂಡು ಹೋದಂತಹ ಘಟನೆಯೊಂದು ಒಡಿಶಾದ ಜಾಜ್ಪುರ ಜಿಲ್ಲೆಯ ಖರಸ್ರೊಟಾ ನದಿಯಲ್ಲಿ ನಡೆದಿದೆ. ನದಿಯಲ್ಲಿ ಸ್ನಾನ ಮಾಡಲು ತೆರಳಿದ 57 ವರ್ಷದ ಮಹಿಳೆಯನ್ನು ಮೊಸಳೆ ಎಳೆದೊಯ್ದ ನಂತರ ಅವರು ನಾಪತ್ತೆಯಾಗಿದ್ದಾರೆ. ಬಿಂಜಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಟಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೊಸಳೆ ಎಳೆದೊಯ್ದುಕೊಂಡು ಹೋದ ಮಹಿಳೆಯನ್ನು57 ವರ್ಷದ ಸೌದಾಮಿನಿ ಮಹಲಾ ಎಂದು ಗುರುತಿಸಲಾಗಿದೆ. ಘಟನೆ ನಡೆಯುವ ವೇಳೆ ಅವರು ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನದ ನಂತರ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಹಿಳೆಯನ್ನು ಮೊಸಳೆ ಎಳೆದೊಯ್ಯುತ್ತಿರುವ ದೃಶ್ಯವಿದೆ. ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಖರಸ್ರೋಟಾ ನದಿಯಲ್ಲಿ ಮಹಿಳೆ ಸೌದಾಮಿನಿ ಅವರು ಸ್ನಾನ ಮಾಡುತ್ತಿದ್ದರು. ಈ ವೇಳೆ ಮೊಸಳೆಯೊಂದು ಅವರನ್ನು ಎಳೆದುಕೊಂಡು ಹರಿವು ಹೆಚ್ಚಿರುವ ಸ್ಥಳದತ್ತ ಹೋಗಿದೆ. ಈ ವೇಳೆ ನದಿ ತಟದಲ್ಲಿದ್ದ ಗ್ರಾಮಸ್ಥರು ಮೊಸಳೆಯನ್ನುಓಡಿಸಿ ಮಹಿಳೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಮಹಿಳೆಗಾಗಿ ಶೋಧ
ಮಹಿಳೆಯನ್ನು ಮೊಸಳೆ ಎಳೆದೊಯ್ದ ವಿಚಾರ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ನದಿಯಲ್ಲಿ ಶೋಧ ಕಾರ್ಯ ನಡೆಸಿದರು ಮಹಿಳೆಯ ದೇಹ ಪತ್ತೆಯಾಗಿಲ್ಲ. ಮಹಿಳೆಯನ್ನು ಮೊಸಳೆ ಎಳೆದೊಯ್ದ ದೃಶ್ಯ ನೋಡಿ ನಾವು ಆಕೆಯನ್ನು ರಕ್ಷಿಸುವುದಕ್ಕೆ ನದಿಗೆ ಹಾರಿದೆವು. ಆದರೆ ಯಾವ ಪ್ರಯತ್ನವೂ ಕೈಗೂಡಲಿಲ್ಲ ಎಂದು ಪ್ರತ್ಯಕ್ಷದರ್ಶಿ ಕಿಶೋರ್ ಮಹಲಾ ಹೇಳಿದ್ದಾರೆ.
ಇದನ್ನೂ ಓದಿ: ಆರ್ಯನ್ ಖಾನ್ vs ಸಮೀರ್ ವಾಂಖೆಡೆ ಕೇಸ್: ನಿರ್ಮಾಪಕ, ನೆಟ್‌ಫ್ಲಿಕ್ಸ್‌ಗೆ ಹೈಕೋರ್ಟ್ ನೋಟಿಸ್
ಇದನ್ನೂ ಓದಿ: ಅಬುಧಾಬಿ ಟೂರಿಸಂ ಜಾಹೀರಾತಿಗಾಗಿ ಹಿಜಾಬ್ ಧರಿಸಿದ ದೀಪಿಕಾ ಪಡುಕೋಣೆ
