ಹದಿಹರೆಯದವರ ಸಮ್ಮತಿಯ ಪ್ರೇಮ ಸಂಬಂಧಗಳ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯ ದುರುಪಯೋಗವನ್ನು ತಡೆಯಲು 'ರೋಮಿಯೋ ಜ್ಯೂಲಿಯೆಟ್ ನಿಯಮ' ಜಾರಿಗೆ ತರುವ ಬಗ್ಗೆ ಚಿಂತಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ನವದೆಹಲಿ: ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಕರಣದಲ್ಲಿ, 'ರೋಮಿಯೋ ಜ್ಯೂಲಿಯೆಟ್ ನಿಯಮ' ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012ರ (ಪೋಕ್ಸೊ ಕಾಯ್ದೆ- POCSO Act) ಕುರಿತಾದ ಜಾಮೀನು ಪ್ರಕರಣದಲ್ಲಿ ಅಲಾಹಾಬಾದ್ ಹೈಕೋರ್ಟ್ ಹೊರಡಿಸಿದ್ದ ತೀರ್ಪಿನ ವಿಚಾರಣೆ ಸಮಯದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್ ಕೆ ಸಿಂಗ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯನ್ನು ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪಿನ ಬಗ್ಗೆ ಹೇಳುವುದಾದರೆ, ಪೋಕ್ಸೊ ಕಾಯ್ದೆಯು ಮಕ್ಕಳ ರಕ್ಷಣೆಯ ಆಶಯವನ್ನು ಹೊಂದಿದೆ. ಆದರೆ, ಕೆಲವೊಮ್ಮೆ ಹದಿಹರೆಯದವರ ಪರಸ್ಪರ ಸಮ್ಮತಿಯ ಪ್ರೇಮ ಸಂಬಂಧಗಳನ್ನು ಇದೇ ಕಾಯ್ದೆಯ ಅಡಿ ದಾಖಲು ಮಾಡಿ ಆ ಜೋಡಿ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಇಂಥವುಗಳಿಂದ ಆ ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಎಂದಿರುವ ಸುಪ್ರೀಂಕೋರ್ಟ್ ರೋಮಿಯೋ ಜ್ಯೂಲಿಯೆಟ್ ಅನುಚ್ಛೇದ ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆಯನ್ನು ನೀಡಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಹದಿಹರಯದ ಪ್ರೇಮ ಸಂಬಂಧಕ್ಕೂ ಪೋಕ್ಸೋ ತರುವುದನ್ನು ತಪ್ಪಿಸಬೇಕಿದೆ ಎನ್ನುವುದು ಕೋರ್ಟ್ ಅಭಿಮತ.
ಏನಿದು ಕೇಸ್?
ಪೋಕ್ಸೊ ಪ್ರಕರಣವೊಂದರೆ ವಿಚಾರಣೆಯ ವೇಳೆ ಅಲಹಾಬಾದ್ ಹೈಕೋರ್ಟ್, ತನಿಖೆ ನಡೆಸುತ್ತಿರುವ ಆರಂಭದಲ್ಲೇ ಸಂತ್ರಸ್ತರ ವಯಸ್ಸನ್ನು ನಿರ್ಧರಿಸಲು ಪೊಲೀಸರು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಜಾಮೀನು ಅರ್ಜಿಗಳನ್ನು ಆಲಿಸುವ ಕೋರ್ಟ್ಗಳು ಶಾಲಾ ದಾಖಲಾತಿ ಅಥವಾ ಜನನ ಪ್ರಮಾಣಪತ್ರ ಸಂಶಯಾಸ್ಪದವೆಂದು ಕಂಡರೆ ಅವುಗಳನ್ನು ಪರಿಶೀಲಿಸಿ ತಿರಸ್ಕರಿಸಬಹು ಎಂದು ಆದೇಶಿಸಿತ್ತು. ಆದರೆ ಇದನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಲಿಲ್ಲ. ಜಾಮೀನು ಅರ್ಜಿಯನ್ನು ವಿಚಾರಿಸುವ ಸಂದರ್ಭದಲ್ಲೇ ಇಂತಹ ನಿರ್ದೇಶನಗಳನ್ನು ನೀಡುವ ಮೂಲಕ ಹೈಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಕೋರ್ಟ್ಗಳೇ ಟ್ರಯಲ್ ನಡೆಸುವುದು ಸಲ್ಲ
ಜಾಮೀನು ನೀಡುವಾಗ ಯಾವುದೇ ಕೋರ್ಟ್ಗಳು ಮಿನಿ ಟ್ರಯಲ್ ನಡೆಸುವುದು ಸರಿಯಲ್ಲ. ಸಂತ್ರಸ್ತರು ಅಥವಾ ಆರೋಪಿಗಳ ವಯಸ್ಸು ಸೇರಿದಂತೆ ಈ ರೀತಿಯ ವಿವಾದಿತ ವಾಸ್ತವಾಂಶಗಳನ್ನು ಅಂತಿಮವಾಗಿ ನಿರ್ಧರಿಸಲು ಸಾಧ್ಯವಿಲ್ಲ ಹಾಗೂ ವಯಸ್ಸು ನಿರ್ಧಾರಕ್ಕೆ ಸಂಸತ್ತು ನಿಗದಿಪಡಿಸಿರುವ ಕ್ರಮ ಮೀರುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಹದಿಹರೆಯದವರು ಪರಸ್ಪರ ಸಮ್ಮತಿ ಮೇರೆಗೆ ಇಂಥ ಕ್ರಮ ನಡೆಸಿರುವಾಗ, ಅವರ ನಡುವಿನ ಪ್ರೇಮ ಸಂಬಂಧ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯನ್ನು ತರುತ್ತಿರುವುದರಿಂದ ಮಕ್ಕಳ ರಕ್ಷಣೆ ಮಾಡಬೇಕಿದೆ ಎಂದಿದೆ.
ಪರಸ್ಪರ ಒಮ್ಮತ ಸಂಬಂಧ
ಇದೇ ವೇಳೆ ವಿಚಾರಣೆ ವೇಳೆ ನಡೆಯುತ್ತಿರುವ ಕೆಲವೊಂದು ಘಟನೆಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳು, ಪರಸ್ಪರ ಒಪ್ಪಿಗೆಯೊಂದಿಗೆ ಹದಿಹರೆಯದವರ ನಡುವಿನ ವ್ಯಕ್ತಿಗಳ ಸಂಬಂಧಗಳಿದ್ದರೂ, ಬಾಲಕನನ್ನು ಪೋಕ್ಸೊ ಕಾಯ್ದೆಯ ಕಠಿಣ ವಿಧಿಗಳ ವ್ಯಾಪ್ತಿಗೆ ತರುವ ಉದ್ದೇಶದಿಂದ ಬಾಲಕಿಯ ವಯಸ್ಸನ್ನು ಸುಳ್ಳೇ 18ಕ್ಕಿಂತ ಕಡಿಮೆ ಎಂದು ತೋರಿಸಲಾಗುತ್ತಿದೆ. ಇವರ ನಡುವಿನ ಸಂಬಂಧಗಳನ್ನು ವಿರೋಧಿಸುವ ಕುಟುಂಬಗಳು ಈ ಕಾಯ್ದೆಯನ್ನು ಪ್ರತೀಕಾರ ಅಥವಾ ಒತ್ತಡದ ಸಾಧನವಾಗಿ ಬಳಸುತ್ತಿರುವುದು ಗಂಭೀರ ಅನ್ಯಾಯಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ವಯಸ್ಸು ನಿರ್ಧಾರಕ್ಕೆ ಸಂಬಂಧಿಸಿದಂತೆ, ಬಾಲ ನ್ಯಾಯ ಕಾಯಿದೆಯಲ್ಲಿ ನಿಗದಿಪಡಿಸಿರುವ ಕ್ರಮವನ್ನು ಪಾಲಿಸಬೇಕು. ವೈದ್ಯಕೀಯ ಪರೀಕ್ಷೆಗಳು ಕೊನೆಯ ಆಯ್ಕೆಯಾಗಿದ್ದು, ಪ್ರತಿಯೊಂದು ಪ್ರಕರಣದಲ್ಲೂ ಅದನ್ನು ಕಡ್ಡಾಯವಾಗಿ ಮಾಡಬಾರದು ಎಂದು ತಿಳಿಸಿದೆ.
ನಿಜವಾಗಿಯೂ ರಕ್ಷಣೆ ಅಗತ್ಯವಿರುವ ಮಕ್ಕಳು ಬಡತನ, ಭಯ ಅಥವಾ ಸಾಮಾಜಿಕ ಮುದ್ರೆಯ ಕಾರಣದಿಂದ ನ್ಯಾಯ ವ್ಯವಸ್ಥೆಯನ್ನು ತಲುಪಲಾಗದೆ ಉಳಿಯುತ್ತಿರುವಾಗ, ಅಧಿಕಾರ, ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕ ಬಲ ಹೊಂದಿರುವವರು ಕಾನೂನನ್ನು ತಮ್ಮ ಲಾಭಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವ ಸಮಾಜದ ಅಸಮಾನತೆಯನ್ನು ನ್ಯಾಯಮೂರ್ತಿಗಳು ತೀವ್ರವಾಗಿ ಟೀಕಿಸಿದ್ದಾರೆ. ಜೊತೆಗೆ, ಇಂಥ ಪ್ರಕರಣಗಳನ್ನು ನಡೆಸುವ ವಕೀಲರು ಪ್ರತೀಕಾರದ ಉದ್ದೇಶ ಸ್ಪಷ್ಟವಾಗಿರುವ ಸಂದರ್ಭಗಳಲ್ಲಿ ಅಂಥ ಪ್ರಕರಣಗಳನ್ನು ದಾಖಲಿಸಬಾರದು ಎಂದಿದ್ದಾರೆ.
ಕಾನೂನೇನು?1940 ರ ದಶಕದಿಂದ 70 ವರ್ಷಗಳಿಗೂ ಹೆಚ್ಚು ಕಾಲ, ಭಾರತದಲ್ಲಿ ಹುಡುಗಿಯರ ಕಾನೂನುಬದ್ಧ ಒಪ್ಪಿಗೆಯ ವಯಸ್ಸು 16 ವರ್ಷಗಳು. 2012 ರಲ್ಲಿ, ಸರ್ಕಾರ POCSO ಕಾಯ್ದೆಯನ್ನು ಅಂಗೀಕರಿಸಿದಾಗ, ಅದು ಎಲ್ಲರಿಗೂ ಒಪ್ಪಿಗೆಯ ವಯಸ್ಸನ್ನು 18 ವರ್ಷಗಳಿಗೆ ಏರಿಸಿತು. ಹೊಸ 18 ವರ್ಷ ವಯಸ್ಸು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶವನ್ನು (UNCRC, 1990) ಅನುಸರಿಸುತ್ತದೆ, ಇದು 18 ವರ್ಷದೊಳಗಿನ ಯಾರನ್ನಾದರೂ ಮಗು ಎಂದು ವ್ಯಾಖ್ಯಾನಿಸುತ್ತದೆ.
ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ 2013 ರ ಪ್ರಕಾರ, 18 ವರ್ಷದೊಳಗಿನ ವ್ಯಕ್ತಿಯೊಂದಿಗೆ ಯಾವುದೇ ಲೈಂಗಿಕ ಚಟುವಟಿಕೆಯನ್ನು ಒಪ್ಪಿಗೆಯನ್ನು ಲೆಕ್ಕಿಸದೆ "ಕಾನೂನುಬದ್ಧ ಅ*ತ್ಯಾಚಾರ" ಎಂದು ಪರಿಗಣಿಸಲಾಗುತ್ತದೆ.


