ಐದು ವರ್ಷದ ಮಗುವಿನ ಮೇಲೆ ಮೊಸಳೆ ದಾಳಿ. ತಾಯಿ ಮಾಯಾ ಧೈರ್ಯದಿಂದ ಮೊಸಳೆಯನ್ನು ಎದುರಿಸಿ ಮಗುವನ್ನು ರಕ್ಷಿಸಿದರು.
ಲಕ್ನೋ: ಮಗನನ್ನು ಮೊಸಳೆಯಿಂದ ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ತಾಯಿ. ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಸೋಮವಾರ ಸಂಜೆ ಧಕಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ಹತ್ತಿರದ ಕೆರೆಯ ಬಳಿ ಆಟವಾಡುತ್ತಿದ್ದ ಐದು ವರ್ಷದ ವೀರು ಎಂಬ ಮಗುವಿನ ಮೇಲೆ ಮೊಸಳೆ ದಾಳಿ ಮಾಡಿತ್ತು. ಮೊಸಳೆ ಮಗುವನ್ನು ನೀರಿಗೆ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ ತಾಯಿ ಮಾಯಾ (40) ಕಿರುಚಾಟ ಕೇಳಿ ಓಡಿ ಬಂದಿದ್ದಾರೆ..
ಮೊಸಳೆ ಮತ್ತು ತಾಯಿ ನಡುವೆ ಐದು ನಿಮಿಷಗಳ ಕಾಲ ಹೋರಾಟ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಮಾಯಾ ಧೈರ್ಯದಿಂದ ಮೊಸಳೆಯನ್ನು ಎದುರಿಸಿದರು. ಮೊದಲು ಕೈಗಳಿಂದ, ನಂತರ ಕಬ್ಬಿಣದ ರಾಡ್‌ನಿಂದ ಮೊಸಳೆಯಿಂದ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರು ಎಂದು ಸ್ಥಳೀಯರು ಹೇಳಿದ್ದಾರೆ.
ಮೊಸಳೆಗೆ ಕಬ್ಬಿಣದ ರಾಡ್‌ನಿಂದ ಹೊಡೆದ ಮಹಿಳೆ
'ನಾನು ಕಿರುಚಿದೆ, ನನ್ನ ಪ್ರಾಣದ ಬಗ್ಗೆ ಯೋಚಿಸದೆ ನೀರಿಗೆ ಹಾರಿದೆ'. 'ಮೊಸಳೆ ಮಗನನ್ನು ಬಾಯಿಂದ ಕಚ್ಚಿ ಕೆಳಗೆ ಎಳೆದಿತ್ತು, ಆದರೆ ನಾನು ಎಲ್ಲಾ ಶಕ್ತಿಯನ್ನು ಬಳಸಿ ಅವನನ್ನು ಹಿಡಿದುಕೊಂಡೆ. ನಾನು ಅದನ್ನು ಹೊಡೆದು ಕೆರೆದುಕೊಂಡೆ. ಕೊನೆಗೆ, ಕಬ್ಬಿಣದ ರಾಡ್‌ನಿಂದ ಹೊಡೆದಾಗ ಮೊಸಳೆ ನಮ್ಮನ್ನು ತನ್ನ ಹಿಡಿತದಿಂದ ಬಿಟ್ಟಿತು. ನನ್ನ ಮಗ ಬದುಕುಳಿದಿದ್ದಾನೆ ಎಂಬುದೇ ಮುಖ್ಯ,' ಎಂದು ಅವರು ಹೇಳಿದರು.
ಘಟನೆಯಲ್ಲಿ ಮಾಯಾ ಮತ್ತು ವೀರು ಗಾಯಗೊಂಡಿದ್ದಾರೆ. ಮಾಯಾ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ, ಪ್ರಥಮ ಚಿಕಿತ್ಸೆ ನಂತರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿರುವ ವೀರು ಚಿಕಿತ್ಸೆಯಲ್ಲಿದ್ದಾರೆ.
ಗ್ರಾಮಸ್ಥರಿಗೆ ಮೊಸಳೆ ಸೆರೆ ಹಿಡಿಯುವ ಭರವಸೆ ನೀಡಿದ ಅರಣ್ಯಾಧಿಕಾರಿಗಳು
ಈ ,ಕುರಿತು ಗ್ರಾಮದ ಮಾಜಿ ಮುಖ್ಯಸ್ಥ ರಾಜ್‌ಕುಮಾರ್ ಸಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಭಾಗೀಯ ಅರಣ್ಯ ಅಧಿಕಾರಿ ರಾಮ್ ಸಿಂಗ್ ಯಾದವ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ. ಮೊಸಳೆಯನ್ನು ಹಿಡಿಯಲು ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಯಾದವ್ ಭರವಸೆ ನೀಡಿದ್ದಾರೆ.
