ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದು ತೀವ್ರಗೊಂಡು 'ಅರ್ನಬ್' ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಇದು ಒಟ್ಟು ಮೂರು ಪೂರ್ವದ ರಾಜ್ಯಗಳ ಕರಾವಳಿಯತ್ತ ಚಲಿಸುತ್ತಿದ್ದು, ಆಂಧ್ರದ ಕೆಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರ್ನಾಟಕದ ಮೇಲೆಯೂ ಈ ಚಂಡಮಾರುತ ಪರಿಣಾಮ ಬೀರಲಿದೆ.

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಕಡಿಮೆ ಒತ್ತಡದ ಪ್ರದೇಶವು ಇದೀಗ ತೀವ್ರ ವಾಯುಭಾರ ಕುಸಿತವಾಗಿ (Depression) ಪರಿವರ್ತನೆಗೊಳ್ಳುತ್ತಿದ್ದು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ.

ಪಶ್ಚಿಮ-ಮಧ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಮೇಲಿದ್ದ ವಾಯುಭಾರ ಕುಸಿತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 18 ಕಿ.ಮೀ ವೇಗದಲ್ಲಿ ಪಶ್ಚಿಮ ದಿಕ್ಕಿನತ್ತ ಸಾಗಿದೆ. ಮುಂದಿನ 12 ಗಂಟೆಗಳಲ್ಲಿ ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಬುಧವಾರ ರಾತ್ರಿ ಅಥವಾ ಗುರುವಾರ ಮುಂಜಾನೆ ವಿಶಾಖಪಟ್ಟಣಂ ಹಾಗೂ ಗೋಪಾಲ್‌ಪುರ ನಡುವೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ಈ ವಾಯುಭಾರ ಕುಸಿತ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ 'ರೆಡ್ ಅಲರ್ಟ್' ಘೋಷಣೆ:

ಚಂಡಮಾರುತದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಹಲವು ಕಡೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಏನಿದು 'ಅರ್ನಬ್' ಚಂಡಮಾರುತ?

ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳಲಿರುವ ಈ ಸಂಭಾವ್ಯ ಸೈಕ್ಲೋನ್‌ಗೆ 'ಅರ್ನಬ್' ಎಂದು ಹೆಸರಿಡಲಾಗಿದೆ. 'ಅರ್ನಬ್' ಎಂದರೆ ಬಂಗಾಳಿ ಭಾಷೆಯಲ್ಲಿ 'ಸಮುದ್ರ' ಎಂದರ್ಥ. ಈ ಚಂಡಮಾರುತದ ಪ್ರಭಾವದಿಂದ ಒಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ತೀವ್ರ ಗಾಳಿ ಹಾಗೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ.