ಈ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಮೂರು ಪ್ರಬಲ ಚಂಡಮಾರುತಗಳು ಸೃಷ್ಟಿಯಾಗಲಿವೆ ಎಂದು ಇಸ್ರೋ ಮುನ್ಸೂಚನೆ ನೀಡಿದೆ. ಈ ಚಂಡಮಾರುತಗಳು ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ಧಾರಾಕಾರ ಮಳೆ ತಂದು, ಜಲಾಶಯಗಳನ್ನು ತುಂಬಿಸುವ ಮೂಲಕ ವರದಾನವಾಗುವ ನಿರೀಕ್ಷೆಯಿದೆ.
ನವದೆಹಲಿ (ಸೆ.14): ಈ ವರ್ಷದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ (ಅಕ್ಟೋಬರ್‌ನಿಂದ ಡಿಸೆಂಬರ್) ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಬರೋಬ್ಬರಿ 3 ಪ್ರಬಲ ಚಂಡಮಾರುತಗಳು (Cyclones) ಸೃಷ್ಟಿಯಾಗುವ ಆತಂಕವಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಚಂಡಮಾರುತಗಳು ಕರಾವಳಿ ತೀರಗಳಲ್ಲಿ ಆತಂಕ ಮೂಡಿಸಿದ್ದರೂ, ಇನ್ನೊಂದೆಡೆ ತೀವ್ರ ಮಳೆ ಕೊರತೆ ಹಾಗೂ ಬರ ಎದುರಿಸುತ್ತಿರುವ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಇದು ವರದಾನವಾಗುವ ನಿರೀಕ್ಷೆಯಿದೆ.
ಮುಂಗಾರೋತ್ತರದಲ್ಲಿ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿ ಪ್ರಕ್ಷುಬ್ಧ!
ಸಾಮಾನ್ಯವಾಗಿ ಮುಂಗಾರು ಮಳೆ ಮುಗಿಯುವ ಹೊತ್ತಿಗೆ ಅಂದರೆ ಮುಂಗಾರೋತ್ತರ (Post-Monsoon) ಅವಧಿಯಲ್ಲಿ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ಚಂಡಮಾರುತಗಳು ಉದ್ಭವಿಸುವುದು ಸಾಮಾನ್ಯ. ಸದ್ಯ ವಾತಾವರಣದಲ್ಲಿ ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಿಂದ ವರ್ಷಾಂತ್ಯದೊಳಗೆ ಮೂರು ಪ್ರಮುಖ ಸೈಕ್ಲೋನ್‌ಗಳು ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳ ಹವಾಮಾನ ಮಾದರಿಗಳು ಅಂದಾಜಿಸಿವೆ.
ಗುಜರಾತ್, ಮಹಾರಾಷ್ಟ್ರ ಕರಾವಳಿಗೆ ಭಾರಿ ಮಳೆ ಸಾಧ್ಯತೆ:
ಪ್ರಾಥಮಿಕ ವರದಿಗಳ ಪ್ರಕಾರ, ಈ ಚಂಡಮಾರುತಗಳ ಪ್ರಭಾವದಿಂದಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ತೀರಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚಂಡಮಾರುತಗಳು ನಿಖರವಾಗಿ ಎಲ್ಲಿ ಸೃಷ್ಟಿಯಾಗಲಿವೆ ಮತ್ತು ಅವು ಯಾವ ಕರಾವಳಿಗೆ ಅಪ್ಪಳಿಸಲಿವೆ ಎಂಬುದು ಆಯಾ ಸಿಸ್ಟಮ್‌ಗಳು ಸಂಪೂರ್ಣವಾಗಿ ರೂಪುಗೊಂಡ ಬಳಿಕವಷ್ಟೇ ನಿಖರವಾಗಿ ತಿಳಿಯಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕದ ಜಲಾಶಯಗಳಿಗೆ ಹರಿದುಬರುತ್ತಾ ನೀರು? ಬರ ನೀಗೀತೇ?
ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಆದರೆ, ಇಸ್ರೋ ಮುನ್ಸೂಚನೆಯಂತೆ ಸೃಷ್ಟಿಯಾಗಲಿರುವ ಚಂಡಮಾರುತಗಳು ಪಶ್ಚಿಮ ಕರಾವಳಿ ಅಥವಾ ದಕ್ಷಿಣ ಭಾರತದ ಒಳನಾಡಿನತ್ತ ಮುಖಮಾಡಿದರೆ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಭಾಗಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ರಾಜ್ಯದ ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಹೆಚ್ಚಿ, ಬರದ ಬವಣೆ ತಕ್ಕಮಟ್ಟಿಗೆ ನೀಗಬಹುದು ಎಂಬ ಆಶಾಭಾವನೆ ರೈತ ವಲಯದಲ್ಲಿ ಮೂಡಿದೆ.


