- Home
- Karnataka Districts
- ಪ್ರಧಾನಿ ಮೋದಿಗೆ ಯಕ್ಷಗಾನ ಕಿರೀಟ ತೊಡಿಸಿ ಗೌರವಿಸಿದ ಪೇಜಾವರ ಶ್ರೀಗಳು; ಪ್ರಧಾನಿ ವಿಶೇಷ ಭೇಟಿ
ಪ್ರಧಾನಿ ಮೋದಿಗೆ ಯಕ್ಷಗಾನ ಕಿರೀಟ ತೊಡಿಸಿ ಗೌರವಿಸಿದ ಪೇಜಾವರ ಶ್ರೀಗಳು; ಪ್ರಧಾನಿ ವಿಶೇಷ ಭೇಟಿ
ಉಡುಪಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ವಿಶ್ವಸಂತ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆಚರಣೆಯ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಯಿತು.

ಸಂತಸ ಹಂಚಿಕೊಂಡ ಪ್ರಧಾನಿ
ನವದೆಹಲಿ: ಉಡುಪಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ಮೋದಿ ಅವರು ವಿಶ್ವಸಂತ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆಚರಣೆಯ ಅಧಿಕೃತ ಲೋಗೋವನ್ನು ಅನಾವರಣಗೊಳಿಸಿದರು.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ರೀಗಳ ಭೇಟಿ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ಮೋದಿ ಟ್ವೀಟ್‌ನಲ್ಲಿ ಏನಿದೆ?
ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಇತರ ಗಣ್ಯರನ್ನು ಭೇಟಿಯಾದೆ. ಇದೇ ವೇಳೆ ಪದ್ಮವಿಭೂಷಣ, ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆಚರಣೆಯ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಅವರ ಭಕ್ತಿ, ಜ್ಞಾನ ಮತ್ತು ಸಮಾಜ ಸೇವೆಯ ಜೀವನವು ಇಂದಿಗೂ ಸ್ಫೂರ್ತಿಯಾಗಿದೆ. ಅವರ ಜನ್ಮಶತಾಬ್ದಿಯ ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಜನಪರ ಕಾರ್ಯಕ್ರಮಗಳು ಅವರ ಉದಾತ್ತ ಆದರ್ಶಗಳನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿವೆ ಎಂದು ಮೋದಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಹಿರಿಯ ಶ್ರೀಗಳೊಂದಿಗೆ ಅವಿನಾಭಾವ ಸಂಬಂಧ
ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಜೊತೆ ಪ್ರಧಾನಿ ನರೇಂದ್ರ ಮೋದಿಗೆ ಅತ್ಯಂತ ನಿಕಟ ಮತ್ತು ಅವಿನಾಭಾವ ಸಂಬಂಧವಿತ್ತು. ಹಿರಿಯ ಶ್ರೀಗಳು ಪ್ರಧಾನಿಯವರಿಗೆ ಮಾರ್ಗದರ್ಶಕರಾಗಿದ್ದರು. ಅಯೋಧ್ಯೆ ರಾಮಮಂದಿರ ನಿರ್ಮಾಣದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಶ್ರೀಗಳ ಜನ್ಮಶತಾಬ್ದಿ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ಹಲವು ಸಮಾಜಮುಖಿ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ. ಇದಕ್ಕಾಗಿ ಪೇಜಾವರ ಮಠ ಸಕಲ ಸಿದ್ಧತೆ ನಡೆಸಿದೆ. ಪ್ರಸ್ತುತ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದಾರೆ.
ಮೋದಿಗೆ ಗೌರವ ಸಲ್ಲಿಸಿದ ಪೇಜಾವರಶ್ರೀ
ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೌರವಿಸಿದರು. ಕರಾವಳಿ ಮತ್ತು ಮಲೆನಾಡಿನ ರಂಗ ಕಲೆ ಯಕ್ಷಗಾನದ ಕಿರೀಟ ತೊಡಿಸಿ ಗೌರವಿಸಿದರು. ಮೋದಿಯನ್ನ ಗೌರವಿಸಿದ್ದು ಹಾಗೂ ಲೋಗೋವನ್ನು ಅನಾವರಣಗೊಳಿಸಿದ್ದು ಹಾಗೂ ಗಣ್ಯರು ಭೇಟಿಯಾಗಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

